ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

39 ಹೊಸ ಹುದ್ದೆ ಸೃಷ್ಟಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಮನವಿ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ನೌಕರರ ಸಂಘ ಒತ್ತಾಯ
Last Updated 7 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ ಹೊಸದಾಗಿ 39 ಹುದ್ದೆಗಳನ್ನು ಸೃಜಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ರಾಕೇಶ್‌ ಸಿಂಗ್‌ ಅವರಿಗೆಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನೌಕರರ ಸಂಘ ಮನವಿ ಸಲ್ಲಿಸಿದೆ.

‘ಪ್ರಜಾವಾಣಿ’ಯ ಸೆ. 6ರ ಸಂಚಿಕೆಯಲ್ಲಿ ‘39 ಹೊಸ ಹುದ್ದೆ ಸೃಷ್ಟಿಗೆ ವಿರೋಧ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿ ಎಸಿಎಸ್‌ ಅವರಿಗೆ ಪತ್ರ ಬರೆದಿರುವ ಸಂಘವು, ‘ಬಿಬಿಎಂಪಿಯ ನಗರ ಯೋಜನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ನಗರ ಯೋಜನೆಗೆ ಸಂಬಂಧವೇ ಇಲ್ಲದ ಕೆಳ ಹಂತದಅನ್ಯ ಹುದ್ದೆಗಳಿಗೆ ನೇಮಕಗೊಂಡು ಬಡ್ತಿ ಪಡೆದವರಾಗಿದ್ದಾರೆ. ಬಿಬಿಎಂಪಿ ಮರುರಚನೆ ಸಂದರ್ಭದಲ್ಲಿ ಹೊಸ ಹುದ್ದೆ ಸೃಷ್ಟಿಸುವ ಪ್ರಸ್ತಾವನೆಯನ್ನು ಅವರು ವಿರೋಧಿಸುವುದಕ್ಕೆ ವೈಯಕ್ತಿಕ ಹಿತಾಸಕ್ತಿಯೇ ಕಾರಣ. ಈ ಹುದ್ದೆಗಳ ಸೃಷ್ಟಿಗೆ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ವಿರೋಧ ವ್ಯಕ್ತಪಡಿಸಿರುವುದಕ್ಕೆ ಮಹತ್ವ ನೀಡಬಾರದು’ ಎಂದು ಒತ್ತಾಯಿಸಿದೆ.

‘ಹೊಸ ಹುದ್ದೆ ಸೃಷ್ಟಿಯನ್ನು ವಿರೋಧಿಸುತ್ತಿರುವವರಿಗೂ ನಗರ ಯೋಜನೆಗೂ ಸಂಬಂಧವೇ ಇಲ್ಲ. ವಿರೋಧ ವ್ಯಕ್ತಪಡಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ನಗರ ಯೋಜನೆ ವಿಷಯದ ಪರಿಜ್ಞಾನವಿಲ್ಲ. 1961ರ ಕೆಟಿಪಿಸಿ ಕಾಯ್ದೆಯ ಹಾಗೂ ಅದಕ್ಕೆ ಸಂಬಂಧಿಸಿ ಯೋಜನೆ ವಿಷಯಗಳಲ್ಲಿ ಕೈಗೊಳ್ಳುವ ನಿರ್ಧಾರಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಪರಿಣಿತಿಯೂ ಇಲ್ಲ. ಅದಕ್ಕೆ ಅಗತ್ಯವಿರುವ ವಿದ್ಯಾರ್ಹತೆಯನ್ನೂ ಅವರು ಹೊಂದಿಲ್ಲ. ಆದರೂ, ಸರ್ಕಾರದ ಆಡಳಿತಾತ್ಮಕ ಕ್ರಮ ಹಾಗೂ ಪರಮಾಧಿಕಾರವನ್ನು ಪ್ರಶ್ನಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ಪರಿಶೀಲನೆಗೆ ಒಳಪಡಿಸಬೇಕು’ ಎಂದು ಸಂಘವು ಕೇಳಿಕೊಂಡಿದೆ.

‘ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡ ಪ್ರಸ್ತಾವನೆಯನ್ನು ಕೈಬಿಡದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಬೆದರಿಕೆ ತಂತ್ರ ಅನುಸರಿಸುತ್ತಿದೆ. ಹಾಗಾಗಿ, ನಗರಾಭಿವೃದ್ಧಿ ಸಚಿವಾಲಯದವರೂ ಈ ಕುರಿತು ಆದೇಶ ಹೊರಡಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಬಿಬಿಎಂ‍ಪಿಯ ನಗರ ಯೋಜನಾ ವಿಭಾಗವನ್ನು ಉನ್ನತೀಕರಿಸಿ ಸುಧಾರಣೆ ತರುವ ಸರ್ಕಾರದ ಕ್ರಮಕ್ಕೆ ಹಿನ್ನಡೆ ಆಗಲಿದೆ. ನಗರದ ಯೋಜಿತ ಬೆಳವಣಿಗೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದಲೂ ಇದು ಮಾರಕ’ ಎಂದು ಸಂಘವು ಗಮನ ಸೆಳೆದಿದೆ.

‘ಬಿಬಿಎಂಪಿಯ ನಗರ ಯೋಜನೆ ವಿಭಾಗದ ಸುಗಮ ಆಡಳಿತದ ದೃಷ್ಟಿಯಿಂದ ತ್ವರಿತವಾಗಿ ಸೂಕ್ತ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಇದೇ 13ರಿಂದ ಅನಿದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಿದ್ದೇವೆ’ ಎಂದು ಸಂಘದ ಅಧ್ಯಕ್ಷ ಆರ್‌.ಶೇಷ ಮನವಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT