ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 183 ಕೋಟಿ ವಸೂಲಾತಿ ಬಾಕಿ: ಕೆ–ರೇರಾ ಆದೇಶ ಪಾಲಿಸದ ಡೆವಲಪರ್‌ಗಳು

*ವಸೂಲಾತಿ ಜಾರಿ ಪ್ರಕ್ರಿಯೆ ಆಮೆಗತಿ * ಗ್ರಾಹಕರಿಗೆ ನ್ಯಾಯ ಮರೀಚಿಕೆ
Last Updated 8 ಏಪ್ರಿಲ್ 2021, 20:49 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ಕೆ–ರೇರಾ) ರಚನೆ ಆದ ಬಳಿಕವೂ ಗ್ರಾಹಕರಿಗೆ ನ್ಯಾಯ ಮರೀಚಿಕೆಯೇ ಆಗಿದೆ. ಸುಮಾರು 447 ಪ್ರಕರಣಗಳಿಗೆ ಸಂಬಂಧಿಸಿ ಬಿಲ್ದರ್‌ಗಳಿಂದ ವಸೂಲಾತಿ ಮಾಡುವ ಸಂಬಂಧಪ್ರಾಧಿಕಾರವು ಕಂದಾಯ ವಸೂಲಾತಿ ಪ್ರಮಾಣಪತ್ರಗಳನ್ನು (ಆರ್‌ಆರ್‌ಸಿ) ಜಾರಿಗೊಳಿಸಿದೆ. ಆದರೆ, ವಸೂಲಾತಿ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ.

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಗ್ರಾಹಕರಿಗೆ ವಂಚನೆ ಆಗಿರುವ ಪ್ರಕರಣಗಳಲ್ಲಿ ಪ್ರಾಧಿಕಾರವು ನಷ್ಟದ ಮೊತ್ತವನ್ನು ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ ಪ್ರಕಾರ ಡೆವಲಪರ್‌ಗಳಿಂದ ವಸೂಲಿ ಮಾಡಿಕೊಡಬೇಕು. ಹಣವನ್ನು ಹಿಂತಿರುಗಿಸುವಂತೆ ಅಥವಾ ಆಸ್ತಿಯನ್ನು ಹಸ್ತಾಂತರಿಸುವಂತೆ ಪ್ರಾಧಿಕಾರವು ಆದೇಶ ಮಾಡಿದರೂ ಅದು ಜಾರಿ ಆಗುತ್ತಿಲ್ಲ. ಗ್ರಾಹಕರು ನ್ಯಾಯ ಪಡೆಯಲು ಕಚೇರಿಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರಾಧಿಕಾರವು 2021ರ ಏ.3ರವರೆಗೆ ಒಟ್ಟು 2,870 ಆದೇಶಗಳನ್ನು ಮಾಡಿದೆ. 447 ಪ್ರಕರಣಗಳಲ್ಲಿ ಒಟ್ಟು ₹185.13 ಕೋಟಿ ಮೊತ್ತವನ್ನು ಬಿಲ್ಡರ್‌ಗಳಿಂದ ವಸೂಲಿ ಮಾಡಬೇಕಿದೆ. ಆದರೆ, ಇದುವರೆಗೆ ಐದು ಪ್ರಕರಣಗಳಲ್ಲಿ ಮಾತ್ರ ವಸೂಲಾತಿ ಆದೇಶಗಳ ಜಾರಿ ಪ್ರಕ್ರಿಯೆ ಪೂರ್ಣಗೊಂಡಿದೆ. ವಸೂಲಾದ ಮೊತ್ತ ₹ 1.67 ಕೋಟಿ ಮಾತ್ರ. ಒಟ್ಟು ₹ 183.46 ಕೋಟಿ ವಸೂಲಾತಿ ಬಾಕಿ ಇದೆ. ಇದಲ್ಲದೇ 222 ದೂರುಗಳನ್ನು ಪ್ರಾಧಿಕಾರವು ಇತ್ಯರ್ಥಪಡಿಸಿದ್ದು ಇದರ ಮೊತ್ತ ₹ 17.50 ಕೋಟಿಗಳಷ್ಟಿದೆ.

‘ಗ್ರಾಹಕರಿಗೆ ನ್ಯಯ ಕೊಡಿಸುವಲ್ಲಿ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ ದುರ್ಬಲವಾಗಿದೆ ಎಂಬುದು ಇದರರ್ಥವಲ್ಲ. ಪ್ರಾಧಿಕಾರದ ಅಥವಾ ನ್ಯಾಯಿಕ ಅಧಿಕಾರಿಯ ಆದೇಶ 60 ದಿನಗಳ ಒಳಗೆ ಜಾರಿಯಾಗಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸರ್ಕಾರ, ಪ್ರಾಧಿಕಾರ ಹಾಗೂ ಜಿಲ್ಲಾಡಳಿತಗಳು ಗಂಭೀರ ಪ್ರಯತ್ನಗಳನ್ನು ನಡೆಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ‘ಫೋರಮ್‌ ಫಾರ್‌ ಪೀಪಲ್ಸ್‌ ಕಲೆಕ್ಟಿವ್‌ ಎಫರ್ಟ್ಸ್‌’ನ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಶಂಕರ್‌.

’ಪ್ರಾಧಿಕಾರದ ಆದೇಶವನ್ನು ಡೆವಲಪರ್‌ಗಳು ಪಾಲಿಸದೇ ಹೋದರೆ ಅವರಿಗೆ ಯೋಜನಾ ವೆಚ್ಚದ ಶೇ 5ರಷ್ಟು ಮೊತ್ತವನ್ನು ದಂಡವನ್ನಾಗಿ ವಿಧಿಸುವುದಕ್ಕೆ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ ಸೆಕ್ಷನ್‌ 63 ಮತ್ತು 64 ಅವಕಾಶ ಕಲ್ಪಿಸುತ್ತವೆ. ಈ ಅಧಿಕಾರವನ್ನು ಪ್ರಾಧಿಕಾರವು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಹಲವಾರು ಸಭೆಗಳಲ್ಲಿ ಈ ಬಗ್ಗೆ ಒತ್ತಾಯಿಸಿದ್ದೇವೆ. ಆದರೂ ಈ ಅಧಿಕಾರ ಬಳಸಲು ಪ್ರಾಧಿಕಾರವು ಹಿಂದೇಟು ಹಾಕುತ್ತಿದೆ’ ಎಂದು ಅವರು ದೂರಿದರು.

‘ರೇರಾ ಮೊರೆ ಹೋದರೆ ನಮಗೆ ನ್ಯಾಯ ದೊರಕುತ್ತದೆ ಎಂಬ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಬೇಕು. ವಸೂಲಿ ಆದೇಶಗ‌ಳು ಕಟ್ಟುನಿಟ್ಟಾಗಿ ಜಾರಿಯಾದರೆ ಮಾತ್ರ ಪ್ರಾಧಿಕಾರದ ಮೇಲೆ ಗ್ರಾಹಕರಲ್ಲಿ ಭರವಸೆ ಮೂಡಲು ಸಾಧ್ಯ. ಡೆವಲಪರ್‌ಗಳಿಗೂ ಪ್ರಾಧಿಕಾರದ ಬಗ್ಗೆ ಭಯ ಮೂಡಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

‘ವಸೂಲಿ ಆದೇಶ ಜಾರಿ– ತಳಹಂತದಲ್ಲಿ ವಿಳಂಬ’
‘ಗ್ರಾಹಕರಿಗೆ ವಂಚನೆ ಆಗಿರುವ ಪ್ರಕರಣಗಳಲ್ಲಿ ಸಂಬಂಧ ಕಂದಾಯ ವಸೂಲಿ ಪ್ರಮಾಣಪತ್ರಗಳನ್ನು (ಆರ್‌ಆರ್‌ಸಿ) ನಾವು ಜಾರಿ ಮಾಡುತ್ತೇವೆ. ಇದರ ಜಾರಿಗೆ ಜಿಲ್ಲಾಡಳಿತಗಳೂ ಪ್ರಕ್ರಿಯೆ ಆರಂಭಿಸಿವೆ. ತಪ್ಪಿತಸ್ಥರಿಗೆ ಹಲವಾರು ನೋಟಿಸ್‌ಗಳನ್ನು ನೀಡಿ ಬಳಿಕ ಜಪ್ತಿಗೆ ಕ್ರಮ ಕೈಗೊಳ್ಳಬೇಕು. ಆದರೆ, ತಹಶೀಲ್ದಾರ್‌ ಹಾಗೂ ತಳ ಹಂತದ ಕಂದಾಯ ಅಧಿಕಾರಿಗಳ ಮಟ್ಟದಲ್ಲಿ ಈ ಆದೇಶ ಜಾರಿ ವಿಳಂಬವಾಗುತ್ತಿದೆ’ ಎನ್ನುತ್ತಾರೆ ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಕುಮಾರಿ.

‘ಕಾಯ್ದೆ ಪ್ರಕಾರ ಇಂತಹ ಆರ್‌ಆರ್‌ಸಿಗೆ ಸಂಬಂಧಿಸಿದ ವಸೂಲಿಗಳನ್ನು ಮಾಡಬೇಕಿರುವುದು ಜಿಲ್ಲಾಡಳಿತ. ಅವರು ನಮ್ಮಿಂದ ಇದು ಸಾಧ್ಯವಿಲ್ಲ ಎಂದು ಹೇಳಿದರೆ ಮಾತ್ರ ಪ್ರಾಧಿಕಾರವು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬಹುದು’ ಎಂದು ಅವರು ತಿಳಿಸಿದರು.

‘ರೇರಾ ಆದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ಮೂಲಕವೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಡಿಸಿದ್ದೇವೆ. ಪತ್ರಗಳನ್ನೂ ಬರೆದಿದ್ದೇವೆ. ಅನೇಕ ಸಭೆಗಳಲ್ಲೂ ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೂ ರೇರಾದ ವಸೂಲಾತಿ ಆದೇಶಗಳ ಜಾರಿ ವಿಳಂಬವಾಗುತ್ತಿದೆ’ ಎಂದು ಅವರೂ ಬೇಸರ ವ್ಯಕ್ತಪಡಿಸಿದರು.

***
ರಿಯಲ್‌ ಎಸ್ಟೇಟ್‌ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಕಾನೂನು ರೂಪಿಸಿದರೆ ಸಾಲದು. ನ್ಯಾಯ ಕೋರಿ ರೇರಾ ಮೊರೆ ಹೋಗುವ ಗ್ರಾಹಕರಿಗೆ ಪರಿಹಾರ ಸಿಗಬೇಕು.
–ಎಂ.ಎಸ್‌.ಶಂಕರ್‌, ಪ್ರಧಾನ ಕಾರ್ಯದರ್ಶಿ, ಫೋರಮ್‌ ಫಾರ್‌ ಪೀಪಲ್ಸ್‌ ಕಲೆಕ್ಟಿವ್‌ ಎಫರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT