ಬೆಂಗಳೂರು: ನಗರದ ಬೊಮ್ಮಸಂದ್ರದಿಂದ ತಮಿಳುನಾಡು ರಾಜ್ಯದ ಹೊಸೂರಿಗೆ ಸಂಪರ್ಕಿಸುವ ಅಂತರರಾಜ್ಯ ಮೆಟ್ರೊ ಯೋಜನೆಯು ಮರುಜೀವ ಪಡೆದುಕೊಂಡಿದೆ. ಕೆಲವು ವರ್ಷಗಳಿಂದ ಚರ್ಚೆಯಲ್ಲಿದ್ದ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ತಮಿಳುನಾಡು ಸರ್ಕಾರವು ಮುಂದಾಗಿದೆ.
ಈ ಯೋಜನೆಗೆ ಈಗಿನ ಸರ್ಕಾರ ‘ಉತ್ಸುಕವಾಗಿಲ್ಲ’ ಎಂದು ಹೇಳಿದ್ದರೂ, ತಮಿಳುನಾಡು ಸರ್ಕಾರ ಮಾತ್ರ ಕಾರ್ಯಸಾಧ್ಯತಾ ಅಧ್ಯಯನ ವರದಿ ತಯಾರಿಸುವ ಪ್ರಕ್ರಿಯೆ ಆರಂಭಿಸಿದೆ.
‘ಕೇಂದ್ರ ಸರ್ಕಾರದ ತಾತ್ವಿಕ ಒಪ್ಪಿಗೆ ಪಡೆದುಕೊಂಡಿರುವ ತಮಿಳುನಾಡು ಸರ್ಕಾರವು ಅಧ್ಯಯನ ವರದಿ ತಯಾರಿಸಲು ಟೆಂಡರ್ ಕರೆದಿದ್ದು ಕೆಲವು ಟೆಂಡರ್‌ದಾರರು ಮುಂದೆ ಬಂದಿದ್ದಾರೆ. ಟೆಂಡರ್‌ಗೆ ಅರ್ಜಿ ಸಲ್ಲಿಸಲು ಆಗಸ್ಟ್ 31ರವರೆಗೆ ಚೆನ್ನೈ ಮೆಟ್ರೊ ನಿಗಮವು ಅವಕಾಶ ಕಲ್ಪಿಸಿದೆ’ ಎಂದು ಮೂಲಗಳು ಹೇಳಿವೆ.
ಈ ಯೋಜನೆಗೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ‘ಬೇಕಿದ್ದರೆ ತಮಿಳುನಾಡು ರಾಜ್ಯದ ಒಳಗೆ ಮೆಟ್ರೊ ಮಾರ್ಗ ವಿಸ್ತರಣೆ ಮಾಡಿಕೊಳ್ಳಲಿ. ನಮ್ಮ ತಕರಾರು ಇಲ್ಲ. ಕರ್ನಾಟಕದ ಒಳಗೆ ಮಾರ್ಗವನ್ನು ವಿಸ್ತರಿಸಿದರೆ ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ನಾನಾ ಆಪತ್ತುಗಳು ಎದುರಾಗಲಿವೆ’ ಎಂದು ಕನ್ನಡ ಸಂಘಟನೆಗಳು ಹೇಳಿವೆ.
ಈ ನಡುವೆ ‘ತಮಿಳುನಾಡು ಮೆಟ್ರೊವನ್ನು ಬೊಮ್ಮಸಂದ್ರದ ಹಳದಿ ಮಾರ್ಗಕ್ಕೆ ಸಂಪರ್ಕಿಸುವ ಯಾವುದೇ ಪ್ರಸ್ತಾವ ನಮ್ಮ ಮುಂದೆ ಬಂದಿಲ್ಲ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಏನಿದು ಯೋಜನೆ: ‘ನಮ್ಮ ಮೆಟ್ರೊ’ದ 2ನೇ ಹಂತದ ಕಾಮಗಾರಿ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ (ರೀಚ್ 5) ಮಾರ್ಗವು ಬಹುತೇಕ ಪೂರ್ಣಗೊಂಡಿದ್ದು, ಈ ವರ್ಷಾಂತ್ಯಕ್ಕೆ ಉದ್ಘಾಟನೆಗೊಳ್ಳಲಿದೆ. ಹೀಗಾಗಿ, ಈ ಮಾರ್ಗ ವಿಸ್ತರಣೆಯ ಚರ್ಚೆಯು ಆರಂಭವಾಗಿದೆ.
ಈ ಮಾರ್ಗ ವಿಸ್ತರಣೆಗೆ ತಮಿಳುನಾಡು ಸರ್ಕಾರವು ರಾಜ್ಯಕ್ಕೆ ಮನವಿ ಮಾಡಿತ್ತು. ಕರ್ನಾಟಕದ ಹಿಂದಿನ ಸರ್ಕಾರವು ಈ ಮಾರ್ಗದ ಅಧ್ಯಯನಕ್ಕೆ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಕಾರ್ಯ ಸಾಧ್ಯತಾ ಅಧ್ಯಯನ ವರದಿ ಪ್ರಕ್ರಿಯೆ ಆರಂಭವಾಗಿದೆ. ಒಂದು ವೇಳೆ ಬೊಮ್ಮಸಂದ್ರ –ಹೊಸೂರು ನಡುವೆ ಮೆಟ್ರೊ ಯೋಜನೆ ಕಾರ್ಯಸಾಧುಗೊಂಡರೆ ದಕ್ಷಿಣ ಭಾರತದ ಮೊದಲ ಅಂತರ ರಾಜ್ಯ ಮೆಟ್ರೊ ಯೋಜನೆಯಾಗಲಿದೆ.
ಕಾರ್ಯಸಾಧ್ಯತಾ ಅಧ್ಯಯನ ಪ್ರಕ್ರಿಯೆ ಆರಂಭಿಸಿದ ತಕ್ಷಣವೇ ಅಂತಿಮ ಒಪ್ಪಿಗೆ ಸಿಕ್ಕಿದೆ ಎಂಬರ್ಥವಲ್ಲ. ಈ ಮೆಟ್ರೊ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಎಷ್ಟು ಲಾಭವಿದೆ ಎಂಬುದನ್ನು ನೋಡಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ.
–ಪಿ.ಸಿ.ಮೋಹನ್ ಸಂಸದ
‘ಕನ್ನಡಿಗರ ನೇತೃತ್ವದಲ್ಲಿ ಸಮಿತಿ ರಚಿಸಿ’ ತಮಿಳುನಾಡು ಸರ್ಕಾರವು ಅವರ ಪ್ರದೇಶದಲ್ಲಿ ಯಾವ ಯೋಜನೆ ಬೇಕಾದರೂ ಆರಂಭಿಸಲಿ. ಆದರೆ ಕರ್ನಾಟಕದ ಭೂಭಾಗದಲ್ಲಿ ಮೆಟ್ರೊ ಮಾರ್ಗ ವಿಸ್ತರಣೆ ಮಾಡುವುದಿದ್ದರೆ ಅದಕ್ಕೆ ನಮ್ಮ ವಿರೋಧವಿದೆ. ರಾಜ್ಯ ಸರ್ಕಾರದ ಜತೆಗೆ ನಡೆದಿರುವ ಮಾತುಕತೆ ವಿವರವು ಬಹಿರಂಗಗೊಂಡಿಲ್ಲ. ಸರ್ಕಾರ ತಕ್ಷಣವೇ ಕನ್ನಡಿಗರ ನೇತೃತ್ವದಲ್ಲಿ ಸಮಿತಿ ರಚಿಸಿ ಈ ಯೋಜನೆಯ ಲಾಭ–ನಷ್ಟದ ಅಧ್ಯಯನ ನಡೆಸಬೇಕು. ಈ ಹಿಂದೆ ‘ಬೆಂಗಳೂರು ಅಭಿವೃದ್ಧಿ ಸಮಿತಿ’ ರಚಿಸಲಾಗಿತ್ತು. ಆದರೆ ಆ ಸಮಿತಿಯಲ್ಲಿ ಕನ್ನಡೇತರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ರೀತಿ ಆಗಬಾರದು. ಕರ್ನಾಟಕ ಹಿತದೃಷ್ಟಿಯೇ ಮುಖ್ಯ ಆಗಬೇಕಿದೆ.
– ಅರುಣ್ ಜಾವಗಲ್ ಹೋರಾಟಗಾರರ
‘ಎರಡು ರಾಜ್ಯಕ್ಕೂ ಅನುಕೂಲ’
ಚೆಲ್ಲಕುಮಾರ್ ‘ಯೋಜನೆಯನ್ನು ಕೆಲವರು ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಬೊಮ್ಮಸಂದ್ರ–ಹೊಸೂರು ನಡುವೆ ಮೆಟ್ರೊ ಸಂಚಾರ ಆರಂಭವಾದರೆ ಎರಡು ರಾಜ್ಯದ ಉದ್ಯೋಗಸ್ಥರು ವ್ಯಾಪಾರಿಗಳು ಕೃಷಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ನಾಲ್ಕು ವರ್ಷಗಳ ಹಿಂದೆ ಈ ಮಾರ್ಗಕ್ಕೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಕೋವಿಡ್ ಕಾರಣಕ್ಕೆ ವಿಳಂಬವಾಗಿತ್ತು’ ಎಂದು ತಮಿಳುನಾಡಿನ ಕೃಷ್ಣಗಿರಿ ಸಂಸದ ಎ.ಚೆಲ್ಲಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೊಮ್ಮಸಂದ್ರದಿಂದ ಹೊಸೂರಿಗೆ 20.5 ಕಿ.ಮೀ. ಮೆಟ್ರೊ ರೈಲು ಮಾರ್ಗ ನಿರ್ಮಾಣ ಆಗಬೇಕಿದೆ. ಈ ಪೈಕಿ ಕರ್ನಾಟಕದ ವ್ಯಾಪ್ತಿಯಲ್ಲೇ 11.5 ಕಿ.ಮೀ ವ್ಯಾಪ್ತಿಯಿದೆ. ಉಳಿದ 8.5 ಕಿ.ಮೀ ಮಾತ್ರ ತಮಿಳುನಾಡಿನಲ್ಲಿದೆ. ಈ ಯೋಜನೆ ಸಾಕಾರಗೊಂಡರೆ ಕರ್ನಾಟಕಕ್ಕೂ ಅನುಕೂಲವಿದೆ. ಹೊಸೂರು ಕೈಗಾರಿಕ ಪ್ರದೇಶದಲ್ಲಿ ಕರ್ನಾಟಕದ ಕಾರ್ಮಿಕರೂ ಕೆಲಸ ಮಾಡುತ್ತಿದ್ದಾರೆ. ಅವರ ಸಂಚಾರಕ್ಕೂ ಅನುಕೂಲವಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.