ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಮ್ರದ ಚೆಂಬು’ ಹೆಸರಿನಲ್ಲಿ ವಂಚನೆ; ದಂಪತಿ ಬಂಧನ

Last Updated 11 ಸೆಪ್ಟೆಂಬರ್ 2021, 16:29 IST
ಅಕ್ಷರ ಗಾತ್ರ

ಬೆಂಗಳೂರು: ‘ತಾಮ್ರದ ಚೆಂಬು’ ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಆರೋಪದಡಿ ದಂಪತಿ ಸೇರಿ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಶೇಖ್ ಅಹ್ಮದ್, ಆತನ ಪತ್ನಿ ಜರೀನಾ, ಬೆಂಗಳೂರಿನ ನಯೀಮುಲ್ಲಾ, ಮುದಾಸೀರ್ ಅಹ್ಮದ್, ಫರೀದಾ ಹಾಗೂ ರಾಘವೇಂದ್ರ ಪ್ರಸಾದ್ ಬಂಧಿತರು.

‘ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದ ದಂಪತಿ, ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ವೈಯಾಲಿಕಾವಲ್ ಬಳಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದರು. ‘ಸಿಡಿಲು ಬಡಿದಿರುವ ಪುರಾತನ ತಾಮ್ರದ ಚೆಂಬು ನಮ್ಮ ಬಳಿ ಇದೆ. ಇದನ್ನು ನಿತ್ಯ ಪೂಜಿಸಿದರೆ ಕೋಟ್ಯಧಿಪತಿ ಆಗಬಹುದು. ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಇದೆ ಎಂದು ಹೇಳಿ ಸಾರ್ವಜನಿಕರನ್ನು ತಮ್ಮತ್ತ ಸೆಳೆಯುತ್ತಿದ್ದರು’ ಎಂದು ಸಿಸಿಬಿ ಪೊಲೀಸ್ ಮೂಲಗಳು ಹೇಳಿವೆ.

‘ವಿದೇಶಿ ಪ್ರಜೆಯೊಬ್ಬರಿಗೆ ಚೆಂಬು ಮಾರುತ್ತಿದ್ದೇವೆ. ಅವರನ್ನು ಬೆಂಗಳೂರಿಗೆ ಕರೆಸಲು ಹಾಗೂ ಅವರ ಎದುರು ವಿಜ್ಞಾನಿಯೊಬ್ಬರಿಂದ ಚೆಂಬು ಪರೀಕ್ಷೆ ಮಾಡಿಸಲು ಲಕ್ಷಾಂತರ ರೂಪಾಯ ಖರ್ಚಾಗುತ್ತದೆ. ಈ ಹಣವನ್ನು ಕೊಟ್ಟರೆ, ಚೆಂಬು ಮಾರಾಟವಾದ ನಂತರ ದುಪ್ಪಟ್ಟು ಹಣ ಮರಳಿಸುತ್ತೇವೆ’ ಎಂದು ಆರೋಪಿಗಳು ಹೇಳುತ್ತಿದ್ದರು. ಅದನ್ನು ನಂಬಿ, ಕೆಲವರು ಹಣ ಕೊಡುತ್ತಿದ್ದರು. ಹಣದ ಸಮೇತವೇ ಆರೋಪಿಗಳು ಪರಾರಿಯಾಗುತ್ತಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಕೃತ್ಯದ ಬಗ್ಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರು. ಹೋಟೆಲ್‌ ಮೇಲೆ ದಾಳಿ ಮಾಡಿ ದಂಪತಿಯನ್ನು ಬಂಧಿಸಲಾಯಿತು. ಅವರು ನೀಡಿದ್ದ ಮಾಹಿತಿ ಆಧರಿಸಿ ಇತರೆ ಆರೋಪಿಗಳನ್ನು ಸೆರೆ ಹಿಡಿಯಲಾಯಿತು’ ಎಂದೂ ಹೇಳಿವೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್; ‘ಸಿಡಿಲು ಬಡಿದಿರುವ ತಾಮ್ರದ ಚೆಂಬು, ಶಕ್ತಿಶಾಲಿಯಾದ ವಸ್ತು’ ಎನ್ನುತ್ತಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸುತ್ತಿದ್ದರು. ಅದನ್ನು ನೋಡಿ ಹಲವರು ಆರೋಪಿಗಳನ್ನು ಸಂಪರ್ಕಿಸಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT