ಬೆಂಗಳೂರು: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ನಕಲಿ ತಾಮ್ರದ ಪಾತ್ರೆ ತೋರಿಸಿ ಜನರಿಗೆ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್‌ನ ಸನ್ನಿಗಿಲ್, ತಮಿಳುನಾಡಿನ ಅಬ್ದುಲ್ ಮತ್ತು ನಗರದ ಶಿವಶಂಕರ್ ಬಂಧಿತ ಆರೋಪಿಗಳು.
‘ಬಂಧಿತರಿಂದ ₹69.79 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಜಯನಗರದ 6ನೇ ಬ್ಲಾಕ್ ಯಡಿಯೂರು ಕೆರೆ ಬಳಿ ರೈಸ್ ಪುಲ್ಲಿಂಗ್ ಪಾತ್ರೆಯ ಮಾರಾಟದ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳು ರೈಸ್ ಪುಲ್ಲಿಂಗ್ ಅನ್ನು ದಂಧೆಯಾಗಿ ಮಾಡಿಕೊಂಡಿದ್ದರು. ತಾಮ್ರದ ಪಾತ್ರೆಗೆ ಭಾರಿ ಬೆಲೆಯಿದೆ, ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರಲಿದೆ ಎಂದೂ ಗ್ರಾಹಕರಿಗೆ ನಂಬಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.