ಬೆಂಗಳೂರು: ರಾಜಧಾನಿಯ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಭಾಗವಾಗಿರುವ ಚಿಕ್ಕಪೇಟೆಯ ಹುರಿಯೋಪೇಟೆಯಲ್ಲಿನ ಲಕ್ಷ್ಮಣರಾವ್ ರಸ್ತೆಯಲ್ಲಿ ಜಲಮಂಡಳಿ ಎಂಟು ತಿಂಗಳ ಹಿಂದೆ ಆರಂಭಿಸಿದ್ದ ಕೊಳವೆ ಮಾರ್ಗದ ಕಾಮಗಾರಿ ಇನ್ನೂ ಕುಂಟುತ್ತಾ ಸಾಗಿದೆ. ಇದರಿಂದ ವ್ಯಾಪಾರಿಗಳು, ಖರೀದಿಗೆ ಬರುವ ಗ್ರಾಹಕರು, ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿನಿಧಿಸುವ ಗಾಂಧಿನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರಸ್ತೆಯ ದುಃಸ್ಥಿತಿಯಿಂದ ವ್ಯಾಪಾರ, ವಹಿವಾಟಿಗೂ ಅಡ್ಡಿಯಾಗುತ್ತಿದೆ. ಹುರಿಯೋಪೇಟೆಯ ಲಕ್ಷ್ಮಣರಾವ್ ರಸ್ತೆಯು ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. 2024ರ ಫೆಬ್ರುವರಿಯಲ್ಲಿ ₹15 ಲಕ್ಷ ವೆಚ್ಚದಲ್ಲಿ ಕೊಳವೆ ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಜಲಮಂಡಳಿ ಅಧಿಕಾರಿಗಳ ವಿಳಂಬ ಧೋರಣೆಯಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
‘ಹುರಿಯೋಪೇಟೆ ಲಕ್ಷ್ಮಣರಾವ್ ರಸ್ತೆಯಲ್ಲಿ ಬಟ್ಟೆ, ಎಲೆಕ್ಟ್ರಿಕ್ ಹಾಗೂ ಹಾರ್ಡ್‌ವೇರ್ ವಸ್ತುಗಳ ಮಾರಾಟ ಮಾಡುವ ಅಂಗಡಿಗಳಿವೆ. ರಸ್ತೆ ಅಗೆದಿರುವ ಪರಿಣಾಮ ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಸಾರ್ವಜನಿಕರು ಓಡಾಡದಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ, ವ್ಯಾಪಾರ–ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ವ್ಯಾಪಾರಿಗಳು ಅಂಗಡಿ ಬಾಡಿಗೆ ಕಟ್ಟಲೂ ಪರದಾಡುವಂತಾಗಿದೆ. ರಸ್ತೆ ಅಗೆದು ಬಿಟ್ಟಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಪ್ರತಿನಿತ್ಯ ದೂಳಿನ ಮಜ್ಜನವಾಗುತ್ತಿದ್ದು, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ’ ಎಂದು ಸ್ಥಳೀಯ ನಿವಾಸಿ ರೂಪಾ ದೂರಿದರು.
‘ಇಲ್ಲಿನ ಅಂಗಡಿಗಳಿಗೆ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಪೂರೈಸುವ ವಾಹನಗಳನ್ನು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ನಿಲ್ಲಿಸಲಾಗುತ್ತದೆ. ಅಲ್ಲಿಂದ ಅಂಗಡಿಗಳಿಗೆ ವಸ್ತುಗಳನ್ನು ಹೊತ್ತು ತರಬೇಕಿದೆ. ಇದರಿಂದ, ಬೇಸತ್ತ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿದ್ದಾರೆ. ಈ ರಸ್ತೆಯಲ್ಲಿ ಸ್ವಚ್ಛತೆ ಮರಿಚೀಕೆ ಆಗಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.
‘ಬಿಬಿಎಂಪಿ ಮತ್ತು ಬೆಂಗಳೂರು ಜಲಮಂಡಳಿ ಸಿಬ್ಬಂದಿ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ರಸ್ತೆಯಲ್ಲಿ ಗುಂಡಿಗಳಿರುವ ಕಾರಣ ಹಲವು ಗ್ರಾಹಕರು ಮತ್ತು ವ್ಯಾಪಾರಿಗಳು ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವುದರಿಂದ ಇಲ್ಲಿಗೆ ಖರೀದಿಗೆ ಬರುವ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಹಬ್ಬಗಳು ಸೇರಿದಂತೆ ವಾರಾಂತ್ಯದಲ್ಲಿ ಸಾವಿರಾರು ಗ್ರಾಹಕರನ್ನು ಸೆಳೆಯುತ್ತಿದ್ದ ಈ ಮಾರುಕಟ್ಟೆ ಎಂಟು ತಿಂಗಳಿಂದ ದಯನೀಯ ಸ್ಥಿತಿಗೆ ತಲುಪಿದೆ’ ಎಂದು ವ್ಯಾಪಾರಿ ವಿಶಾಲ್ ಜೈನ್ ಬೇಸರ ವ್ಯಕ್ತಪಡಿಸಿದರು.
ಹುರಿಯೋಪೇಟೆ ರಸ್ತೆ ದುರವಸ್ತೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಲಮಂಡಳಿ ಎಂಜಿನಿಯರ್ ಒಬ್ಬರು, ‘ಮಳೆಗಾಲ ಪ್ರಾರಂಭವಾಗಿರುವ ಕಾರಣ ಕಾಮಗಾರಿ ವಿಳಂಬವಾಗಿದೆ. 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.
₹15 ಲಕ್ಷ ವೆಚ್ಚದ ಕಾಮಗಾರಿ ವಿಳಂಬ ವ್ಯಾಪಾರ–ವಹಿವಾಟು ಕುಸಿತ ಸ್ವಚ್ಛತೆ ಮರಿಚೀಕೆ ಡೆಂಗಿ ಹರಡುವ ಭೀತಿ
ಮಳೆ ಬಂದರೆ ರಸ್ತೆಯಲ್ಲ ಕೆಸರು ಗದ್ದೆಯಾಗುತ್ತದೆ. ರಸ್ತೆಯಲ್ಲಿಯೇ ಕಸ ಹಾಕುವುದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಡೆಂಗಿ ಮಲೇರಿಯಾ ಹರಡುವ ಭೀತಿ ಎದುರಾಗಿದೆ.-ಭರತ್ ಸ್ಥಳೀಯ ನಿವಾಸಿ
ಸ್ಥಳೀಯ ಶಾಸಕರು ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ. ಗಣಪತಿ ಹಬ್ಬಕ್ಕಿಂತ ಮೊದಲು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.-ಗೋಪಾಲಕೃಷ್ಣ ಸ್ಥಳೀಯರು
ಬಿಬಿಎಂಪಿಗೆ ಚಿಕ್ಕಪೇಟೆ ಭಾಗದಿಂದ ತೆರಿಗೆ ಸಂಗ್ರವಾಗುತ್ತಿದೆ. ಆದರೆ ಇಲ್ಲಿ ಅದಕ್ಕೆ ತಕ್ಕಂತೆ ಮೂಲಸೌಕರ್ಯ ನೀಡುತ್ತಿಲ್ಲ.ವಿಶಾಲ್ ಜೈನ್ ವ್ಯಾಪಾರಿ
ಹುರಿಯೋಪೇಟೆ ರಸ್ತೆ ಮತ್ತು ಕಸದ ಸಮಸ್ಯೆ ನಿವಾರಿಸುವಂತೆ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರೆ ‘ನಿಮ್ಮ ವಾರ್ಡ್‌ನಲ್ಲಿ ನನಗೆ ಮತ ಬಂದಿಲ್ಲ. ನಿಮ್ಮ ಸಮಸ್ಯೆಗೆ ನಾನೇಕೆ ಸ್ಪಂದಿಸಬೇಕು’ ಎಂದು ಸಚಿವರು ಪ್ರಶ್ನಿಸುತಿದ್ದಾರೆ.ಶಿವಾನಂದ್ ಹುರಿಯೋಪೇಟೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.