ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇನಹಳ್ಳಿ ಗ್ರಾಮದ ರಸ್ತೆ ಗುಂಡಿಮಯವಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲೇನಹಳ್ಳಿ ಗ್ರಾಮದ ಮೂಲಕ ಲಕ್ಷ್ಮೀಪುರ, ಜಾಜೂರು, ಪಾಂಡವಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಗುಂಡಿ ಬಿದ್ದು ತಿಂಗಳುಗಳೇ ಕಳೆದಿವೆ. ರಸ್ತೆ ದುರಸ್ತಿಗೆ ನರಸೀಪುರ ಗ್ರಾಮ ಪಂಚಾಯಿತಿ ಆಡಳಿತ ಪ್ರಯತ್ನ ಮಾಡಿಲ್ಲ. ಇದೇ ರಸ್ತೆಯಲ್ಲಿ ಮಕ್ಕಳು, ಹಿರಿಯರು, ವ್ಯಾಪಾರಿಗಳು ವಾಹನಗಳಲ್ಲಿ ನಿತ್ಯವೂ ಸಂಚರಿಸುತ್ತಾರೆ. ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಜಯರಾಮ್ ಆಗ್ರಹಿಸಿದ್ದಾರೆ.
ಸಾಲಹಟ್ಟಿ, ಲಕ್ಷ್ಮೀಪುರ ಗ್ರಾಮಗಳಿಂದ ಹಾಲು ಉತ್ಪಾದಕರು ನಿತ್ಯ ಎರಡು ಬಾರಿ ಹಾಲೇನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ತಲುಪಿಸುತ್ತಾರೆ. ಹಲವು ಮಂದಿ ಗುಂಡಿಯಲ್ಲಿ ಬಿದ್ದು, ಹಾಲು ಚೆಲ್ಲಿ ನಷ್ಟವಾಗಿ ಎಂದು ಹಾಲೇನಹಳ್ಳಿ ಡೇರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ವನಿತಾ ಹೇಳಿದ್ದಾರೆ.
ಸೋಂಪುರ ಹೋಬಳಿಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ಬಹುತೇಕ ರಸ್ತೆಗಳ ಡಾಂಬರು ಕಿತ್ತು ಬಂದಿದೆ. ಮಳೆಯಿಂದ ರಸ್ತೆಗಳು ಇನ್ನಷ್ಟು ಹದಗೆಟ್ಟಿವೆ. ಕೆಸರುಮಯ ರಸ್ತೆಯಲ್ಲಿಯೇ ಸಂಚರಿಸಬೇಕಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು ಎಂದು ಗ್ರಾಮಸ್ಥ ರವಿಕುಮಾರ್ ಮನವಿ ಮಾಡಿದ್ದಾರೆ.
ಹಾಲೇನಹಳ್ಳಿ ಮಾರ್ಗವಾಗಿ ಸಾಗುವ ರಸ್ತೆಯ ತುಂಬೆಲ್ಲಾ ಗುಂಡಿಗಳು