ಬೆಂಗಳೂರು: ವೀರಣ್ಣಪಾಳ್ಯದ ಬಳಿ ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಅವರು ‘ಎಕ್ಸ್’ ಖಾತೆಯಲ್ಲಿ ಮನವಿ ಮಾಡಿದ್ದ ಬೆನ್ನಲ್ಲೇ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ.
ವೀರಣ್ಣಪಾಳ್ಯದಿಂದ ಹೆಬ್ಬಾಳ ವೃತ್ತದ ಕಡೆಗಿನ ಸರ್ವಿಸ್ ರಸ್ತೆಯಲ್ಲಿ ಆ. 18 ರಿಂದ 21ರವರೆಗೆ ಕಾಮಗಾರಿ ನಡೆಯಲಿದೆ. ಇದರಿಂದಾಗಿ ಸರ್ವಿಸ್ ರಸ್ತೆಯಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳದ ಕಡೆಗೆ ಸಂಚರಿಸುವ ವಾಹನಗಳು ಹೊರ ವರ್ತುಲ ರಸ್ತೆಯ ಮುಖ್ಯ ಪಥವನ್ನೇ ಪರ್ಯಾಯ ರಸ್ತೆಯಾಗಿ ಬಳಸಬೇಕು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಸಚಿವರು, ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ, ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ 3 ದಿನದ ಹಿಂದೆ ‘ಎಕ್ಸ್’ನ ಖಾತೆಯಲ್ಲಿ ಮನವಿಮಾಡಿದ್ದರು. ಜೊತೆಗೆ ಸಾರ್ವಜನಿಕರೊಬ್ಬರು ಕಳಿಸಿದ್ದ ವಿಡಿಯೊ ಹಂಚಿಕೊಂಡಿದ್ದರು.
ಸಚಿವರ ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದರು. ಸಚಿವರೇ ಮನವಿ ಮಾಡಿಕೊಂಡಿರುವುದಕ್ಕೆ ಆಕ್ಷೇಪವೂ ವ್ಯಕ್ತವಾಗಿತ್ತು. ಒಂದು ಪೋಸ್ಟ್‌ನಲ್ಲಿ ‘ಅಧಿಕಾರಿಗಳನ್ನು ಬೇಡಿಕೊಳ್ಳುವಷ್ಟು ಸಚಿವರು ಅಸಹಾಯಕರಾಗಿದ್ದಾರೆ’ ಎಂದು ಲೇವಡಿ ಮಾಡಲಾಗಿತ್ತು.
‘ಇದು, ಸಾರ್ವಜನಿಕ ಅಭಿಪ್ರಾಯದ ಪೋಸ್ಟ್. ಟೀಕೆಗಳು ಸಹಜ. ಎಲ್ಲಕ್ಕೂ ಉತ್ತರಿಸಲಾಗದು. ಜನರ ಅಭಿಪ್ರಾಯದ ಬಗ್ಗೆ ಗಮನ ಸೆಳೆಯಲಾಗಿದೆ. ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ಪರಿಹಾರ ಸಿಗುವುದು ಮುಖ್ಯ’ ಎಂದು ಸಚಿವರು ಪ್ರತಿಕ್ರಿಯಿಸಿದ್ದರು.