ಮಂಗಳವಾರ, ಅಕ್ಟೋಬರ್ 20, 2020
25 °C

ಕೈ– ಕಾಲು ಕಟ್ಟಿ ಹಾಕಿ ₹ 1.49 ಕೋಟಿ ಮೌಲ್ಯದ ಆಭರಣ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಾಲಹಳ್ಳಿ ಬಳಿಯ ಆಭರಣ ಮಳಿಗೆಯೊಂದಕ್ಕೆ ಹಾಡಹಗಲೇ ನುಗ್ಗಿದ್ದ ದುಷ್ಕರ್ಮಿಗಳು, ಸಿಬ್ಬಂದಿಯ ಕೈ– ಕಾಲು ಕಟ್ಟಿಹಾಕಿ ಪಿಸ್ತೂಲ್ ತೋರಿಸಿ ಬೆದರಿಸಿ ₹ 1.49 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹ 3.96 ಲಕ್ಷ ನಗದು ದೋಚಿದ್ದಾರೆ.

‘ದರೋಡೆ ಸಂಬಂಧ ಮಳಿಗೆ ಸಿಬ್ಬಂದಿ ರಾಹುಲ್ ಸಂಜಯ್ ಷಾ (25) ಎಂಬುವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಜಾಲಹಳ್ಳಿಯ ಬಾಹುಬಲಿ ನಗರದಲ್ಲಿ ವಿನೋದ್ ಎಂಬುವರು ‘ಬ್ಯಾಂಕರ್ಸ್ ಮತ್ತು ಜ್ಯುವೆಲರ್ಸ್’ ಹೆಸರಿನ ಆಭರಣ ಮಳಿಗೆ ಇಟ್ಟುಕೊಂಡಿದ್ದಾರೆ. ಅದೇ ಅಂಗಡಿಯಲ್ಲಿ ದೂರುದಾರ ರಾಹುಲ್ ಕೆಲಸಕ್ಕಿದ್ದಾರೆ.’

‘ಭಾನುವಾರ ಎಂದಿನಂತೆ ರಾಹುಲ್ ಕೆಲಸಕ್ಕೆ ಬಂದಿದ್ದರು. ಬೆಳಿಗ್ಗೆ 10ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಬಂದಿದ್ದ ದುಷ್ಕರ್ಮಿಗಳು, ಚಿನ್ನದ ಸರ ಬೇಕೆಂದು ಕೇಳಿದ್ದರು. ರಾಹುಲ್ ಚಿನ್ನದ ಸರ ತಂದು ತೋರಿಸಿದ್ದರು. ನಂತರ, ಉಂಗುರ ಬೇಕೆಂದು ಆರೋಪಿಗಳು ಕೇಳಿದ್ದರು. ಉಂಗುರ ತರಲು ರಾಹುಲ್ ಲಾಕರ್‌ ಬಳಿ ಹೊರಟಿದ್ದಾಗ ಹಿಂಬಾಲಿಸಿದ್ದ ಆರೋಪಿಗಳು, ದಾಳಿ ಮಾಡಿದ್ದರು. ರಾಹುಲ್ ಕುತ್ತಿಗೆಗೆ ಚಾಕು ಹಿಡಿದಿದ್ದ ದುಷ್ಕರ್ಮಿಗಳು, ಪಿಸ್ತೂಲ್ ತೋರಿಸಿ ಬೆದರಿಸಿದ್ದರು. ರಾಹುಲ್‌ನ ಕೈ-ಕಾಲು ಕಟ್ಟಿ ಬಾಯಿಗೆ ಟೇಪ್‌ ಸುತ್ತಿದ್ದರು’ ಎಂದೂ ಅಧಿಕಾರಿ ತಿಳಿಸಿದರು.

’ಭದ್ರತಾ ಲಾಕರ್‌ನಲ್ಲಿದ್ದ ₹1.49 ಕೋಟಿ ಮೌಲ್ಯದ ಚಿನ್ನಾಭರಣ, 715 ಗ್ರಾಂ ಬೆಳ್ಳಿ ಹಾಗೂ ₹ 3.96 ಲಕ್ಷ ನಗದು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು, ನೀಲಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದರು ಎಂಬುದು ಗೊತ್ತಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು