ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಳಸೇತುವೆ ಕಾಮಗಾರಿಗೆ ಬಂಡೆಯೇ ಅಡ್ಡಿ

ನಿಧಾನಗತಿಯಲ್ಲಿ ಸಾಗುತ್ತಿದೆ ಕೆಲಸ l ಬಳಸಿಕೊಂಡು ಹೋಗಿ ಸುಸ್ತು ಹೊಡೆದಿದ್ದಾರೆ ಜನ
Last Updated 21 ಏಪ್ರಿಲ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೆರೆಳ್ಳಿಯ ಮುತ್ತುರಾಜ್‌ ಜಂಕ್ಷನ್‌ನಲ್ಲಿ ಕೆಳಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದಿದೆ. ಇದೇ ಮಾರ್ಚ್‌ನೊಳಗೆ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಹೇಳಿದ್ದ ಬಿಬಿಎಂಪಿ, ಆ ಗಡುವನ್ನು ಮುಂದೂಡಿದೆ.

ಪಾಲಿಕೆಯೇ ಹೇಳುವಂತೆ ಈ ಕಾಮಗಾರಿ ಪ್ರಗತಿಗೆ ಬಂಡೆಯ ಅಡ್ಡಿ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಹೀಗಾಗಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇಲ್ಲಿ ನಿತ್ಯ ಸಂಚಾರ ದಟ್ಟಣೆಗೆ ಉಂಟಾಗಿ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ.

ರಾಷ್ಟ್ರೀಯ ಸಂಶೋಧನಾ ಮತ್ತು ತರಬೇತಿ ಕೇಂದ್ರ ಕಚೇರಿಯಿಂದ ಇಟ್ಟಮಡು ಜನತಾ ಬಜಾರ್‌ವರೆಗೆ ಈ ಕಾಮಗಾರಿ ನಡೆಯುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ನಾಯಂಡಹಳ್ಳಿವರೆಗೆ ಸಿಗ್ನಲ್‌ ಫ್ರೀ ಕಾರಿಡಾರ್‌ ನಿರ್ಮಿಸುವ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

18 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು (ಡಾಲ್ಮಿಯ ಜಂಕ್ಷನ್‌, ಡಾಲರ್ಸ್‌ ಕಾಲೊನಿ, ‌ಮುತ್ತುರಾಜ್‌ ಜಂಕ್ಷನ್‌ ಈ ಮೂರು ಕೆಳಸೇತುವೆ ಕಾಮಗಾರಿಗಳಿಗೆ ಕೊಟ್ಟ ಗಡುವು. ಅದರಲ್ಲಿ ಈ ಕಾಮಗಾರಿ ಬಾಕಿ ಇದೆ). ಮೂರು ವರ್ಷ ಆರು ತಿಂಗಳಾದರೂ ಕೆಲಸ ಇನ್ನೂ ತುಂಬಾ ಬಾಕಿ ಇದೆ. ಎರಡೂ ಬದಿ ರಸ್ತೆ ಅಗೆದು ಕಬ್ಬಿಣದ ಸರಳುಗಳ ಅಳವಡಿಕೆ, ಕಾಂಕ್ರೀಟ್‌ ತಡೆಗೋಡೆಗಳ ನಿರ್ಮಾಣ ಕಾಮಗಾರಿ ಆಗಿದೆ.

ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿ ನಿರ್ಮಾಣವಾದ ಚೆನ್ನಮ್ಮ ಸರ್ಕಲ್‌ ಮೇಲ್ಸೇತುವೆಯು ಸುಗಮ ಸಂಚಾರಕ್ಕೆ ಅನುಕೂಲವಾಯಿತು ಎಂದುಕೊಂಡಿದ್ದರು ಸವಾರರು. ಆದರೆ, ಕೆಳಸೇತುವೆ ಕಾಮಗಾರಿ ಶುರುವಾಗಿದ್ದರಿಂದ ಸವಾರರು ಪೇಚಿಗೆ ಸಿಲುಕಿದ್ದು, ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನ ದಟ್ಟಣೆಯಿಂದ ಪರಿತಪಿಸುತ್ತಿದ್ದಾರೆ.

‘ಸಂಚಾರ ನಿಯಮ ಉಲ್ಲಂಘಿಸಿ, ಚಾಲಕರು ಏಕಮುಖ ಸಂಚಾರದಲ್ಲಿ ಅಡ್ಡಾದಿಡ್ಡಿ ಹೋಗುತ್ತಿದ್ದಾರೆ. ಸಂಚಾರ ಪೊಲೀಸರೂ ಕಂಗೆಟ್ಟು ಹೋಗಿದ್ದಾರೆ. ಎಷ್ಟೋ ಅಪಘಾತಗಳು ಸಂಭವಿಸಿವೆ’ ಎಂದು ವಿವರಿಸುತ್ತಾರೆ
ಸ್ಥಳೀಯರು.

‘ಈ ಕಾಮಗಾರಿ ಆರಂಭವಾಗುವ(2015ರ ಸೆಪ್ಟೆಂಬರ್‌ನಲ್ಲಿ) ಮುನ್ನ ಇಲ್ಲೊಂದು (ಜನತಾ ಬಜಾರ್‌) ನಾಮಫಲಕ ಹಾಕಿದ್ದರು. ಅಂದು ಮುಚ್ಚಿರುವ 20ಕ್ಕೂ ಅಧಿಕ ಮಳಿಗೆಗಳು ಇಂದಿಗೂ ತೆರೆದಿಲ್ಲ. ಆದಾಯ ಪಾತಾಳಕ್ಕೆ ಹೋಗಿದೆ. ತೆರಿಗೆಯನ್ನೂ ಪಾವತಿಸಬೇಕು. ಇತ್ತ ಮನೆ ಹಾಗೂ ಮಳಿಗೆಯ ಬಾಡಿಗೆಯನ್ನೂ ಕಟ್ಟಬೇಕು' ಎಂದು ಮಳಿಗೆಯ ಮಾಲೀಕರೊಬ್ಬರು ಅಳಲು ತೋಡಿಕೊಂಡರು.‌‌

ಮೂತ್ರ ವಿಸರ್ಜನೆಯ ತಾಣ: ಕೆಳಸೇತುವೆ ಕಾಮಗಾರಿ ಪ್ರಕ್ರಿಯೆಯಲ್ಲಿರುವ ಕಾರಣ, ಚೆನ್ನಮ್ಮ ಸರ್ಕಲ್‌ ಮೇಲ್ಸೇತುವೆ ಉದ್ಘಾಟನೆಗೊಂಡು ನಿಷ್ಪ್ರಯೋಜಕವಾಗಿದೆ.

ಇಲ್ಲಿ ವಾಹನ ಸಂಚಾರ ನಿಷೇಧಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆ ಜಾಗವೀಗ ಸಾರ್ವಜನಿಕರ ಮೂತ್ರ ವಿಸರ್ಜನೆಯ ತಾಣವಾಗಿದೆ. ಅಲ್ಲದೆ, ಪ್ಲಾಸ್ಟಿಕ್‌ ಮತ್ತು ಮದ್ಯದ ಪಾಕೆಟ್‌ಗಳು ಸೇರಿ ತ್ಯಾಜ್ಯದ ರಾಶಿಯೇ
ತುಂಬಿದೆ.

ಮೇ–ಜೂನ್‌ಗೆ ಕಾಮಗಾರಿ ಪೂರ್ಣ

‘ಇಲ್ಲಿ ಕಾಮಗಾರಿ ಆರಂಭಿಸಿದ್ದೇ ಕಳೆದ ಮಾರ್ಚ್‌ನಲ್ಲಿ. ಆ ಸಮಯದಲ್ಲಿ ವಿಧಾನಸಭೆ ಚುನಾವಣೆ ಅಡ್ಡಿಯಾಯಿತು. ಕಾಮಗಾರಿ ಕೈಗೆತ್ತಿಕೊಂಡಾಗ ಕಲ್ಲುಬಂಡೆ ಸಿಕ್ಕಿತು. ಈಗಲೂ ಅದೇ ತೊಂದರೆ ಉಂಟಾಗಿದೆ. ಅದರಿಂದ ಕೆಲಸ ಮುಂದೆ ಸಾಗುತ್ತಿಲ್ಲ’ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ತಿಳಿಸಿದರು.

‘ರಸ್ತೆಯ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯ, ಅಂಡರ್‌ಗ್ರೌಂಡ್‌ನಲ್ಲಿ ಕೇಬಲ್ ತೆರವು ಕಾರ್ಯದಿಂದ ಮತ್ತಷ್ಟು ವಿಳಂಬವಾಯಿತು. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮಳೆ ನೀರು ಚರಂಡಿ ವ್ಯವಸ್ಥೆ, ಡೆಕ್‌ ಸ್ಲ್ಯಾಬ್‌ ಅಳವಡಿಕೆ ಸೇರಿದಂತೆ ಚಿಕ್ಕ ಕೆಲಸಗಳಷ್ಟೇ ಬಾಕಿ ಉಳಿದಿದೆ. ಮೇ ಕೊನೆಯಲ್ಲಿ ಅಥವಾ ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದರು.

‘2 ಕಿ.ಮೀ. ಸುತ್ತಬೇಕು’

‘ನಾಯಂಡಹಳ್ಳಿಯಿಂದ ಬನಶಂಕರಿ ಕಡೆಗೆ ಸಾಗುವ ಚೆನ್ನಮ್ಮ ಸರ್ಕಲ್‌ ಮೇಲ್ಸೇತುವೆ ಮೂಲಕ ಸಾಗಬೇಕಾದ ವಾಹನಗಳು ಸರ್ವೀಸ್ ರಸ್ತೆಯ ಮುಖಾಂತರ ಗಿರಿನಗರ, ವಿದ್ಯಾನಗರ, ಹೊಸಕೆರೆಹಳ್ಳಿ ಕ್ರಾಸ್ ಮತ್ತು ಎನ್‌ಸಿಆರ್‌ಟಿ ಜಂಕ್ಷನ್‌ನಿಂದ ಹೊರವರ್ತುಲ ರಸ್ತೆಗೆ 2 ಕಿ.ಮೀ ಸುತ್ತು ಬಳಸಿಕೊಂಡು ಹೋಗುಬೇಕಾಗಿದೆ’ ಎಂದು ಬೈಕ್‌ ಸವಾರ ಅಶೋಕ ಆಕ್ರೋಶ ವ್ಯಕ್ತಪಡಿಸಿದರು.‌

ಅಂಕಿ ಅಂಶಗಳು

17 ಮೀಟರ್‌: ಸೇತುವೆ ಅಗಲ

285 ಮೀಟರ್‌: ಸೇತುವೆ ಉದ್ದ

₹ 18.72 ಕೋಟಿ: ಕಾಮಗಾರಿ ಒಟ್ಟು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT