ಶನಿವಾರ, ಸೆಪ್ಟೆಂಬರ್ 25, 2021
22 °C
ಸಾರಿಗೆ ಇಲಾಖೆಗೆ ‘ಸ್ಮಾರ್ಟ್‌ ಕಾರ್ಡ್’ ಪೂರೈಕೆ: ಗುತ್ತಿಗೆ ಪಡೆದಿದ್ದ ಕಂಪನಿ

₹ 13 ಕೋಟಿ ವಂಚನೆ; 'ರೋಸ್‌ಮೆರ್ಟಾ' ಮುಖ್ಯಸ್ಥ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ₹ 13 ಕೋಟಿ ವಂಚನೆ ಆರೋಪದಡಿ 2016ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ‘ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿ ಮುಖ್ಯಸ್ಥ ವಿವೇಕ್ ನಾಗಪಾಲ್ ಅವರನ್ನು ಸಿಐಡಿ ಪೊಲೀಸರು ಇತ್ತೀಚೆಗೆ ವಶಕ್ಕೆ ಪಡೆದಿದ್ದಾರೆ.

‘ರಾಜ್ಯ ಸಾರಿಗೆ ಇಲಾಖೆಯಡಿ ವಾಹನ ನೋಂದಣಿ ಪತ್ರ (ಆರ್‌.ಸಿ), ಚಾಲನಾ ‍‍ಪರವಾನಗಿ ಪತ್ರ (ಡಿ.ಎಲ್) ಹಾಗೂ ಇತರೆ ಸ್ಮಾರ್ಟ್‌ ಕಾರ್ಡ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ರೋಸ್‌ಮೆರ್ಟಾ ಟೆಕ್ನಾಲಜಿಸ್ ಕಂಪನಿ ಪಡೆದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಂಪನಿ ಮುಖ್ಯಸ್ಥ ವಿವೇಕ್ ಹಾಗೂ ಇತರರು, ಉಪಗುತ್ತಿಗೆ ಕೊಡಿಸುವ ಹೆಸರಿನಲ್ಲಿ ₹ 13 ಕೋಟಿಗಳಷ್ಟು ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ’ ಎಂದು ಕೆಲವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. 2016ರಿಂದಲೂ ಆರೋಪಿಗಳು ತಲೆಮರೆಸಿಕೊಂಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಸೆ‍. 9ರಂದು ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯ ಸ್ಥಳವೊಂದರಲ್ಲಿ ವಿವೇಕ್ ಕಾಣಿಸಿಕೊಂಡಿದ್ದರು. ಮಾಹಿತಿ ಪಡೆದಿದ್ದ ದೂರುದಾರರು, ಸ್ಥಳಕ್ಕೆ ಹೋಗಿ ಆರೋಪಿಯನ್ನು ಪ್ರಶ್ನಿಸಿದ್ದರು. ಇದೇ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಸ್ಥಳಕ್ಕೆ ಹೋದ ಗಸ್ತು ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಸುದ್ದಿ ತಿಳಿದ ಸಿಐಡಿ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡ, ಠಾಣೆಗೆ ಬಂದು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆಗಾಗಿ ಕರೆದೊಯ್ದಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

'ಸ್ಮಾರ್ಟ್ ಕಾರ್ಡ್ ಪೂರೈಸುವುದಾಗಿ ಹೇಳಿ ಸಾರಿಗೆ ಇಲಾಖೆಯಿಂದ ಟೆಂಡರ್ ಪಡೆಯುತ್ತಿದ್ದ ಆರೋಪಿ, ಅದರ ಉಪಗುತ್ತಿಗೆ ನೀಡುವುದಾಗಿ ಹೇಳಿ ಹಲವರಿಂದ ಹಣ ಪಡೆಯುತ್ತಿದ್ದ ಮಾಹಿತಿ ಇದೆ. ಉಪಗುತ್ತಿಗೆ ಆಸೆಗೆ ಹಲವರು ಹಣ ಕೊಟ್ಟು ವಂಚನೆಗೆ ಒಳಗಾಗಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಿಐಡಿ ಹಿರಿಯ ಅಧಿಕಾರಿಯೊಬ್ಬರು, ‘ತನಿಖೆ ನಡೆಯುತ್ತಿದೆ. ಸದ್ಯ ಯಾವುದೇ ಮಾಹಿತಿ ಬಹಿರಂಗಪಡಿಸಲಾಗದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು