ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವ್ಯಾಪಾರ ದೇಶದ ರೈತರಿಗೆ ಮಾರಕ: ವಿವಿಧ ರಾಜ್ಯಗಳ ರೈತ ಮುಖಂಡರು ಕಳವಳ

Published 7 ಸೆಪ್ಟೆಂಬರ್ 2023, 15:44 IST
Last Updated 7 ಸೆಪ್ಟೆಂಬರ್ 2023, 15:44 IST
ಅಕ್ಷರ ಗಾತ್ರ

ಬೆಂಗಳೂರು: ‘ಐರೋಪ್ಯ ಒಕ್ಕೂಟ ಸೇರಿ ವಿವಿಧ ದೇಶಗಳ ಜತೆಗಿನ ಮುಕ್ತ ವ್ಯಾಪಾರದ ಒಪ್ಪಂದ ನಮ್ಮ ದೇಶಕ್ಕೆ ಲಾಭದಾಯಕವಲ್ಲ. ಈ ಒಪ್ಪಂದದಿಂದಾಗಿ ಇಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಲಿದ್ದು, ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ’ ಎಂದು ರೈತ ಮುಖಂಡರು ಕಳವಳ ವ್ಯಕ್ತಪಡಿಸಿದರು. 

ಭಾರತೀಯ ರೈತ ಚಳವಳಿಗಳ ಸಮನ್ವಯ ಸಮಿತಿ (ಐಸಿಸಿಎಫ್‌ಎಂ) ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮುಕ್ತ ವ್ಯಾಪಾರ ಮತ್ತು ಭಾರತೀಯ ಕೃಷಿ ಹಾಗೂ ರೈತರ ಮೇಲಾಗುವ ಪರಿಣಾಮಗಳು’ ದುಂಡು ಮೇಜಿನ ಸಭೆಯಲ್ಲಿ ಕೃಷಿ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಷಯ ಮಂಡಿಸಲಾಯಿತು. 

ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್, ನವದೆಹಲಿಯ ಸಾಮಾಜಿಕ ಹೋರಾಟಗಾರ ಯುದ್ಧವೀರ ಸಿಂಗ್, ರೈತ ಮುಖಂಡರಾದ ರಾಜಸ್ಥಾನದ ರಾಜಾರಾಂ ಮೈಲ್, ಹರಿಯಾಣದ ರತನ್ ಮಾನ್, ಉತ್ತರಾಖಂಡದ ಬಲ್ಜಿಂದರ್ ಸಿಂಗ್ ಮಾನ್, ಉತ್ತರ ಪ್ರದೇಶದ ಯುದ್ಧವೀರ ಸಿಂಗ್, ಅಶೋಕ್ ಕುಮಾರ್, ಪಂಜಾಬಿನ ಖೈರಾ ಸಾಬ್, ಕರ್ನಾಟಕದ ರೈತನಾಯಕಿ ಚುಕ್ಕಿ ನಂಜುಂಡಸ್ವಾಮಿ, ರೈತಸಂಘದ ವರಿಷ್ಠರಾದ ಕೆ.ಟಿ. ಗಂಗಾಧರ್, ಅನಸೂಯಮ್ಮ ಸೇರಿ ವಿವಿಧ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. 

‘ರೈತರ ಅರಿವಿಗೆ ಬಾರದೆ ಮಾಡಿಕೊಳ್ಳುವ ಅಂತರರಾಷ್ಟ್ರೀಯ ಒಪ್ಪಂದಗಳು ರೈತ ಸಮುದಾಯದ ಏಳ್ಗೆಗೆ ಮಾರಕ. ಕೇಂದ್ರ ಸರ್ಕಾರ ಸಹಿ ಮಾಡುತ್ತಿರುವ 85 ವಿಶ್ವ ವಾಣಿಜ್ಯ ಒಪ್ಪಂದಗಳಲ್ಲಿ ಯಾವುದರ ಬಗ್ಗೆಯೂ ರೈತರ ಜತೆಗೆ ಚರ್ಚಿಸಿಲ್ಲ. ಹಾಗಾಗಿ, ಇವುಗಳನ್ನು ನಾವು ಸಾರಾಸಗಟಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ಸಂಪೂರ್ಣ ವಿಮರ್ಶೆಯಾಗಬೇಕು. ಆ ನಂತರವೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದು ಒಳಿತು’ ಎಂದು ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ರೈತರಿಗೆ ನಷ್ಟ: ‘ಸರ್ಕಾರದ ತಪ್ಪು ನೀತಿಗಳಿಂದ ರೈತರಿಗೆ ನಷ್ಟ ಆಗುತ್ತಿದೆ. ಬಡ ರೈತರ ಭೂಮಿಯನ್ನು ರಕ್ಷಣೆ ಮಾಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಮುಂದಿನ ಹಾದಿ ರೂಪಿಸಲಾಗುವುದು’ ಎಂದು ರಾಕೇಶ್ ಟಿಕಾಯತ್ ತಿಳಿಸಿದರು. 

ನವದೆಹಲಿಯ ಪ್ರಾಧ್ಯಾ‍ಪಕಿ ರಂಜಾ ಸೇನ್‌ಗುಪ್ತಾ, ‘ಕೆನಡಾ, ನ್ಯೂಜಿಲೆಂಡ್, ಇಸ್ರೇಲ್ ಸೇರಿ ಹಲವು ದೇಶಗಳ ಜತೆಗೆ ಭಾರತ ಮುಕ್ತ ವ್ಯಾಪಾರ ನಡೆಸುತ್ತಿದೆ. ಈ ಬಗ್ಗೆ ಎರಡು ಅಧ್ಯಯನಗಳೂ ನಡೆದಿದ್ದು, ದೇಶಕ್ಕೆ ಇದರಿಂದ ಲಾಭವಿಲ್ಲವೆಂದು ತಿಳಿಸಲಾಗಿದೆ. ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಕೃಷಿ ಉತ್ಪನ್ನಗಳ ಸುಂಕ ಜಾಸ್ತಿಯಿದೆ. ಮುಕ್ತ ವ್ಯಾಪಾರದಡಿ ಇದನ್ನು ಕಡಿಮೆ ಮಾಡಬೇಕಾಗುತ್ತದೆ. ಆಗ ಅಲ್ಲಿಂದ ಹೆಚ್ಚಿನ ಕೃಷಿ ಉತ್ಪನ್ನಗಳು ಇಲ್ಲಿಗೆ ಬರುತ್ತವೆ. ಇಲ್ಲಿನ ಕೃಷಿ ಉತ್ಪನ್ನಗಳನ್ನು ಅಲ್ಲಿಗೆ ಕಳಿಸುವುದು ಕಷ್ಟಸಾಧ್ಯ. ಹೀಗಾಗಿ, ದೇಶಕ್ಕೆ ಹಾಗೂ ಇಲ್ಲಿನ ರೈತರಿಗೆ ಮುಕ್ತ ವ್ಯಾಪಾರ ಪೂರಕವಾಗಿಲ್ಲ’ ಎಂದು ಹೇಳಿದರು. 

ಕರ್ನಾಟಕ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಉತ್ತರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣದ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ಸಭೆ

ರಾಜ್ಯ ರೈತ ಸಂಘ ಕಳೆದ ವರ್ಷ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಆತ್ಮಾವಲೋಕನ ಮತ್ತು ಸ್ಪಷ್ಟೀಕರಣ ಸಭೆಯಲ್ಲಿ ರಾಕೇಶ್ ಟಿಕಾಯತ್ ಅವರ ಮೇಲೆ ಹಲ್ಲೆ ನಡೆಸಿ ಮಸಿ ಎರಚಿದ ಘಟನೆ ನಡೆದಿತ್ತು. ಹಾಗಾಗಿ ಈ ಬಾರಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಭೆ ನಡೆಸಲಾಯಿತು. ಪ್ರತಿಯೊಬ್ಬರ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಗುರುತಿನ ಚೀಟಿ ವಿತರಿಸಲಾಯಿತು. ಬ್ಯಾಗ್ ನೀರಿನ ಬಾಟಲಿ ಸೇರಿ ವಿವಿಧ ವಸ್ತುಗಳನ್ನು ಕೊಂಡೊಯ್ಯಲು ಪೊಲೀಸರು ಅವಕಾಶ ನೀಡಲಿಲ್ಲ. ಇದು ಕೆಲವರ ಅಸಮಾಧಾನಕ್ಕೂ ಕಾರಣವಾಯಿತು. ಶುಕ್ರವಾರವೂ ಈ ಸಭೆ ನಡೆಯಲಿದ್ದು ಮುಂದಿನ ನಡೆ ಬಗ್ಗೆ ರೈತ ಮುಖಂಡರು ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT