ಗುರುವಾರ , ಡಿಸೆಂಬರ್ 3, 2020
20 °C
ಮತದಾನ: ಕೋವಿಡ್‌ ಹರಡದಂತೆ ಕಟ್ಟೆಚ್ಚರ

ಆರ್‌.ಆರ್‌.ನಗರ ಕ್ಷೇತ್ರ: 16 ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಇದೇ 3ರಂದು (ಮಂಗಳವಾರ) ನಡೆಯಲಿದ್ದು, ಕಣದಲ್ಲಿರುವ 16 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಕೋವಿಡ್‌ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಮತದಾನ ನಡೆಯುತ್ತಿರುವುದರಿಂದ ಸೋಂಕು ಹರಡದಂತೆ ತಡೆಯಲು ಬಿಬಿಎಂಪಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಿದೆ. ಎಲ್ಲ 678 ಮತಗಟ್ಟೆಗಳನ್ನು ಸೋಮವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ. ಪ್ರತಿ ಮತಗಟ್ಟೆಗೂ ವೈದ್ಯಾಧಿಕಾರಿಯನ್ನು ನಿಯೋಜಿಸಲಾಗಿದೆ.

ಮತದಾರರು ಸರದಿಯಲ್ಲಿ ನಿಲ್ಲುವಾಗ ಗುಂಪುಗೂಡುವುದನ್ನು ತಡೆಯಲು, ಅವರು ಸರದಿಯಲ್ಲಿ ನಿಲ್ಲಬೇಕಾದ ಸ್ಥಳಗಳಿನ್ನು ಗುರುತು ಮಾಡಲಾಗಿದೆ. ಎಲ್ಲ ಮತಗಟ್ಟೆಗಳಿಗೂ ಮತದಾರರ ದೇಹದ ಉಷ್ಣಾಂಶ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಮತದಾರರು ಕೋವಿಡ್‌ ಅಥವಾ ಜ್ವರದ ಲಕ್ಷಣ ಹೊಂದಿರುವುದು ಕಂಡುಬಂದರೆ ಅವರಿಗೆ ಟೋಕನ್‌ ನೀಡಿ ಸಂಜೆ 5ರ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.

ಹಲಗೆವಡೇರಹಳ್ಳಿಯ ಕೆಂಚೇನಹಳ್ಳಿ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಮಸ್ಟರಿಂಗ್ ಕೇಂದ್ರದಲ್ಲಿ ಮತಯಂತ್ರಗಳನ್ನು ಪಡೆದ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಿದರು. ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ಅವರು ಕೊನೆಯ ಕ್ಷಣದ ಸಿದ್ಧತೆಗಳನ್ನು ಪರಿಶೀಲಿಸಿದರು.

‘ಚುನಾವಣಾ ಸಿಬ್ಬಂದಿ ಸೋಮವಾರ ಮತಗಟ್ಟೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಮತಗಟ್ಟೆಯನ್ನು ತೆರೆಯಲಾಗುತ್ತದೆ. ಅಭ್ಯರ್ಥಿಗಳ ಪೋಲಿಂಗ್ ಏಜೆಂಟ್‌ಗಳು ಬೆಳಗ್ಗೆ 6ಕ್ಕೆ ಮತಗಟ್ಟೆಗೆ ಬರಬೇಕು. ಅವರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಲಾಗುತ್ತದೆ. ಮತಯಂತ್ರಗಳಲ್ಲಿ ತಾವು ಆಯ್ಕೆ ಮಾಡಿದ ಅಭ್ಯರ್ಥಿಗೆ ಮತ ಚಲಾವಣೆಯಾಗುತ್ತಿದೆಯೇ ಎಂದು ಪರಿಶೀಲಿಸಬಹುದು. ಬಳಿಕ ಮತದಾನ ಆರಂಭವಾಗಲಿದೆ’ ಎಂದು ಹೇಳಿದರು.

ಈ ಬಾರಿ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಅಂಚೆ ಮತ ಹಾಕಲು ವ್ಯವಸ್ಥೆ ಮಾಡಲಾಗಿತ್ತು. 388 ಹಿರಿಯ ನಾಗರಿಕರು ಹಾಗೂ 22 ಅಂಗವಿಕಲರು ಈಗಾಗಲೇ ಮತದಾನ ಮಾಡಿದ್ದಾರೆ. 

ಕೊರೊನಾ ಸೋಂಕಿತರಿಗೆ ಸಂಜೆ ಅವಕಾಶ: ‘ಕೋವಿಡ್‌ ರೋಗಿಗಳಿಗೆ ಸಂಜೆ 5ರಿಂದ 6ರ ನಡುವೆ ಮತದಾನಕ್ಕೆ ಅವಕಾಶ ಕಲ್ಪಿಸಲಿದ್ದೇವೆ. ಅವರಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಲಿದ್ದೇವೆ. ಅವರನ್ನು ಮತಗಟ್ಟೆಗೆ ಕರೆತರಲು ಆಂಬುಲೆನ್ಸ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ಕೋವಿಡ್‌ ಸೋಂಕಿತರನ್ನು ಸಂಪರ್ಕಿಸಿ ಮತದಾನ ಮಾಡುವುದಾದರೆ ಅಗತ್ಯ ನೆರವು ಒದಗಿಸುವುದಾಗಿ ಹೇಳಿದ್ದೇವೆ. ಆದರೆ, ಹೆಚ್ಚಿನ ಸೋಂಕಿತರು ಮತದಾನ ಮಾಡಲು ಒಲವು ಹೊಂದಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

‘ಒಂದು ವೇಳೆ ಕೊರೊನಾ ಸೋಂಕಿತರು ಮತ ಚಲಾಯಿಸಿದ ಬಳಿಕವೂ ಸಂಜೆ 6ರ ಒಳಗೆ ಯಾರಾದರೂ ಮತ ಚಲಾಯಿಸಲು ಬಂದರೆ ಸೋಂಕು ನಿವಾರಕ ಸಿಂಪಡಿಸಿ ಸುರಕ್ಷತಾ ಕ್ರಮ ಅನುಸರಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ. ಕೊರೊನಾ ಸೋಂಕಿತರು ಮತ ಚಲಾಯಿಸುವ ಸಂದರ್ಭದಲ್ಲಿ ಚುನಾವಣಾ ಸಿಬ್ಬಂದಿಯೂ ಪಿಪಿಇ ಕಿಟ್‌ ಧರಿಸಿರುತ್ತಾರೆ’ ಎಂದರು.

ಚುನಾವಣೆ ಬಳಿಕ ಕೋವಿಡ್‌ ಪರೀಕ್ಷೆ ತೀವ್ರ

ಆರ್‌.ಆರ್‌.ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಕೋವಿಡ್‌ ನಿಯಮಗಳು ಸರಿಯಾಗಿ ಪಾಲನೆ ಆಗಿಲ್ಲ. ಹಾಗಾಗಿ ಇಲ್ಲಿ ಸೋಂಕು ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಚುನಾವಣೆ ಮುಗಿದ ಬಳಿಕ ಈ ಕ್ಷೇತ್ರದಲ್ಲಿ ಹೆಚ್ಚು ಕೋವಿಡ್‌ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

‘ಇಲ್ಲಿ ಇತ್ತೀಚಿನ ದಿನಗಳಲ್ಲಿ ನಿತ್ಯ 60ರಿಂದ 80 ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ವಾರದ ಹಿಂದೆ ಇಷ್ಟು ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರಲಿಲ್ಲ. ಹಾಗಾಗಿ ಮತದಾನ ಮುಗಿಯುತ್ತಿದ್ದಂತೆಯೇ ಇಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಿದ್ದೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು. 

‘ಚುನಾವಣಾ ಸಿಬ್ಬಂದಿಗೆ ಕೊರೊನಾ ಸೋಂಕು ತಗಲದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ಅವರೆಲ್ಲರಿಗೂ ಸುರಕ್ಷತಾ ಸಾಧನಗಳ ಕಿಟ್‌ಗಳನ್ನು ಕೊಟ್ಟಿದ್ದೇವೆ. ಶೇ 20ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಹಾಗಾಗಿ ಯಾರಾದರೂ ಸಿಬ್ಬಂದಿಗೆ ಕೊರೊನಾ ಲಕ್ಷಣಗಳಿದ್ದದೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಿದ್ದೇವೆ’ ಎಂದರು. 

144 ಕಡೆ ಮತಗಟ್ಟೆಗಳಿವೆ. ಕೆಲವು ಕಡೆ ಐದಾರು ಮತಗಟ್ಟೆಗಳು ಒಟ್ಟಿಗೆ ಇವೆ. ಅಂತಹ ಕಡೆ ಮತಗಟ್ಟೆಯಿಂದ 100 ಮೀ ಆಚೆಗೆ ಕೋವಿಡ್‌ ಪರೀಕ್ಷೆ ನಡೆಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಚುನಾವಣಾ ಸಿಬ್ಬಂದಿಗೆ ಹಾಗೂ ಕೊರೊನಾ ಸೋಂಕಿತರಿಗೆ ನೀಡಲು 4,168 ಪಿಪಿಇ ಕಿಟ್‌ ಸಿದ್ಧವಾಗಿದೆ. 3,156 ಲೀ ಸ್ಯಾನಿಟೈಸರ್‌ ಅನ್ನು ಚುನಾವಣೆ ಸಲುವಾಗಿ ಬಿಬಿಎಂಪಿ ಖರೀದಿಸಿದೆ

ಮತದಾರರೇ ಗಮನಿಸಿ

* ಕ್ಷೇತ್ರದಾದ್ಯಂತ ಬುಧವಾರ ಸಂಜೆ 6ರವರೆಗೆ ಭಾರತೀಯ ದಂಡ ಸಂಹಿತೆಯಂತೆ ಸೆಕ್ಷನ್‌ 144 ಜಾರಿ

* ಕ್ಷೇತ್ರದಾದ್ಯಂತ ಮದ್ಯ ಮಾರಾಟ ನಿಷಿದ್ಧ

* ಮತಗಟ್ಟೆಯ 100 ಮೀ ವ್ಯಾಪ್ತಿಯಲ್ಲಿ ಮೊಬೈಲ್‌ ಬಳಕೆ, ವಿಡಿಯೊ ಚಿತ್ರೀಕರಣಕ್ಕೆ ಅವಕಾಶ ಇಲ್ಲ. 

* ಮತದಾರರನ್ನು ವಾಹನಗಳಲ್ಲಿ ಉಚಿತವಾಗಿ ಮತಗಟ್ಟೆಗೆ ಕರೆತರುವಂತಿಲ್ಲ.

* ಮತಗಟ್ಟೆಯ 100 ಮೀ ವ್ಯಾಪ್ತಿಯಲ್ಲಿ ಅಭ್ಯರ್ಥಿ ಅಥವಾ ಬೆಂಬಲಿಗರು ಮತ ಯಾಚನೆ ಮಾಡುವುದು ನಿಷಿದ್ಧ

* ಮತದಾರರ ಗುರುತಿನ ಚೀಟಿ ಅಥವಾ ಭಾವಚಿತ್ರ ಇರುವ ಇತರ 11 ಬಗೆಯ ಗುರುತಿನ ಚೀಟಿ (ಚುನಾವಾಣಾ ಆಯೋಗ ಗೊತ್ತುಪಡಿಸಿರುವುದು) ತೋರಿಸಿ ಮತ ಚಲಾಯಿಸಬಹುದು

* ಮತದಾನದ ಅವಧಿ:  ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ

* ಕೊರೊನಾ ಸೋಂಕಿತರಿಗೆ: ಸಂಜೆ 5ರಿಂದ 6ರವರೆಗೆ

* ಶಾಯಿ: ಎರಡಗೈ ಮಧ್ಯದ ಬೆರಳಿಗೆ

ಮತದಾನ: ಮುನ್ನೆಚ್ಚರಿಕೆ ವಹಿಸಿ

* ಸಾಧ್ಯವಾದರೆ ಬೆಳಿಗ್ಗೆಯೇ ಮತ ಚಲಾಯಿಸಿ

* ಗುರುತು ಹಾಕಿದ ಜಾಗದಲ್ಲೇ ಸರತಿ ಸಾಲಿನಲ್ಲಿ ನಿಲ್ಲಿ

* ಮಾಸ್ಕ್‌ ಧರಿಸದೇ ಮತಗಟ್ಟೆಗೆ ಹೋಗದಿರಿ

* ಅಂತರ ಕಾಪಾಡಿ, ಗುಂಪುಗೂಡದಿರಿ

* ಹೆಚ್ಚು ಜನ ಸೇರಿದ್ದರೆ ಟೋಕನ್‌ ಪಡೆದು ಜನಜಂಗುಳಿ ಕಡಿಮೆಯಾದ ಬಳಿಕ ಮತ ಚಲಾಯಿಸಿ

* ಮತ ಚಲಾವಣೆಗೆ ಮುನ್ನ ಸ್ಯಾನಿಟೈಸರ್‌ ಬಳಸಿ ಕೈ ತೊಳೆಯಿರಿ

* ಮತ ಹಾಕುವಾಗ ಬಲಗೈಗೆ ಕೈಗವಸು ಧರಿಸುವುದು ಕಡ್ಡಾಯ

* ಕೋವಿಡ್‌ ಲಕ್ಷಣಗಳಿದ್ದರೆ ಸಂಜೆ 5ರ ನಂತರ ಮತದಾನಕ್ಕೆ ಅವಕಾಶ

ಅಂಕಿ ಅಂಶ

* ಒಟ್ಟು ಮತದಾರರು- 4,62,236

* ಪುರುಷ ಮತದಾರರು- 2,41,049

* ಮಹಿಳಾ ಮತದಾರರು- 2,21,073

* ತೃತೀಯ ಲಿಂಗಿ ಮತದಾರರು- 79

* ಕಣದಲ್ಲಿರುವ ಅಭ್ಯರ್ಥಿಗಳು- 16

* ಒಟ್ಟು ಮತಗಟ್ಟೆಗಳು- 678

* ಸೂಕ್ಷ್ಮ ಮತಗಟ್ಟೆಗಳು- 82

* ಮತಯಂತ್ರಗಳ ಬಳಕೆ- 950

* ವಿವಿಪ್ಯಾಟ್‌ ಬಳಕೆ- 1017

* ಚುನಾವಣಾ ಸಿಬ್ಬಂದಿ- 3,957

---

ಮತದಾನದ ವೇಳೆ ಸೋಂಕು ಹರಡದಂತೆ ತಡೆಯಲು ಸಕಲ ಮುನ್ನೆಚ್ಚರಿಕೆ ವಹಿಸಿದ್ದೇವೆ. ಮತದಾರರು ಸುರಕ್ಷತಾ ಕ್ರಮಗಳನ್ನು ಕಾಪಾಡಿ ನಿರ್ಭೀತಿಯಿಂದ ತಮ್ಮ ಹಕ್ಕು ಚಲಾಯಿಸಬಹುದು
- ಎನ್‌.ಮಂಜುನಾಥ ಪ್ರಸಾದ್‌, ಜಿಲ್ಲಾ ಚುನಾವಣಾಧಿಕಾರಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು