ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್‌ ಸಮೀಕ್ಷೆ – ಆರ್.ಆರ್.ನಗರ : ಹಳೆ ಗೆಳೆಯರ ಪ್ರತಿಷ್ಠೆಯ ಕಣ

Published 3 ಮೇ 2023, 21:15 IST
Last Updated 3 ಮೇ 2023, 21:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರ ಎಂದರೆ ಈಗ ಹಳೆಯ ಸ್ನೇಹಿತರ ನಡುವೆ ನಡೆಯುತ್ತಿರುವ ಜಿದ್ದಾಜಿದ್ದಿಯ ಹೋರಾಟ. ಮೂರು ಬಾರಿ ಗೆಲುವು ಕಂಡಿರುವ ಮುನಿರತ್ನ ಅವರ ವಿರುದ್ಧ ಕುಸುಮಾ ಹನುಮಂತರಾಯಪ್ಪ ಸೆಣೆಸುತ್ತಿದ್ದರೆ, ಅವರ ಬೆನ್ನಿಗೆ ಡಿ.ಕೆ. ಸುರೇಶ್‌ ನಿಂತಿರುವುದು ಪ್ರಬಲ ಪೈಪೋಟಿಗೆ ಕಾರಣವಾಗಿದೆ.

ಜಾಲಹಳ್ಳಿ ವಿಲೇಜ್, ಬಾಹುಬಲಿ ನಗರ, ಮತ್ತಿಕೆರೆ, ಜೆ.ಪಿ.ಪಾರ್ಕ್, ಯಶವಂತಪುರ, ಲಕ್ಷ್ಮಿದೇವಿನಗರ, ಪೀಣ್ಯ, ಲಗ್ಗೆರೆ, ಮಲ್ಲತ್ತಹಳ್ಳಿ, ಕೊಟ್ಟಿಗೆಪಾಳ್ಯ, ಕೆಂಗುಂಟೆ, ಜ್ಞಾನಭಾರತಿ, ರಾಜರಾಜೇಶ್ವರಿನಗರವನ್ನು ಒಳಗೊಂಡ ವಿಶಾಲವಾದ ಕ್ಷೇತ್ರ ಇದು. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ‌ಕಾರ್ಮಿಕ ಸಮುದಾಯವನ್ನು ಹೊಂದಿವೆ.

ಅತೀ ಹೆಚ್ಚು ಮತದಾರರನ್ನು ಹೊಂದಿರುವ ಬೆಂಗಳೂರಿನ ಐದು ಕ್ಷೇತ್ರಗಳಲ್ಲಿ ಇದೂ ಒಂದು. ಮೂಲ ಬೆಂಗಳೂರು ಮತ್ತು ವಲಸಿಗರೊಂದಿಗೆ ಮಿಶ್ರಣಗೊಂಡಿರುವ ಕ್ಷೇತ್ರದಲ್ಲಿ ಉಡುಗೊರೆ ರಾಜಕಾರಣ ಪ್ರತಿಬಾರಿಯೂ ಸದ್ದು ಮಾಡುತ್ತದೆ.

ಕಾಂಗ್ರೆಸ್‌ ತೆಕ್ಕೆಯಿಂದ ಬಿಜೆಪಿಗೆ ಹೊರಳಿರುವ ಕ್ಷೇತ್ರದಲ್ಲಿ ಮುನಿರತ್ನ ಹಿಡಿತ ಹೊಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಕ್ಷೇತ್ರದಲ್ಲಿ 2013ರಿಂದ ಈವರೆಗೆ ನಡೆದಿರುವ ಮೂರು ಚುನಾವಣೆಯಲ್ಲಿ ಮುನಿರತ್ನ ಸತತ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಉರುಳಿಸಲು 2019ರಲ್ಲಿ ಬಿಜೆಪಿ ನಡೆಸಿದ ‘ಆಪರೇಷನ್ ಕಮಲ’ದಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಜಿಗಿದರು. ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಮುನಿರತ್ನ, ಮೂರನೇ ಬಾರಿ ಬಿಜೆಪಿಯಿಂದ ಗೆದ್ದರು.

ಮುನಿರತ್ನ ಕಾಂಗ್ರೆಸ್‌ ತೊರೆದ ದಿನದಿಂದಲೇ ಅವರ ವಿರುದ್ಧ ಎದುರಾಳಿಯಾಗಲು ಕುಸುಮಾ ಹನುಮಂತರಾಯಪ್ಪ(ಡಿ.ಕೆ.ರವಿ ಪತ್ನಿ) ಸಜ್ಜಾದರು. ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ 67,877 ಮತಗಳನ್ನೂ ಪಡೆದರು. 58 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತರು. ಆದರೂ, ಕ್ಷೇತ್ರದಲ್ಲಿ ಇನ್ನಷ್ಟು ಸುತ್ತಾಡಿ ಮತದಾರರ ಮನಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಮನೆ–ಮನೆಗಳಿಗೆ ತೆರಳಿ ಮತದಾರರ ಕಾಲಿಗೆರಗಿ, ಕೈಮುಗಿದು ಬೆಂಬಲ ಕೋರುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿದ್ದಾಗ ಮುನಿರತ್ನ ಬೆನ್ನಿಗೆ ನಿಲ್ಲುತ್ತಿದ್ದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್, ಈಗ ಅವರನ್ನು ಸೋಲಿಸಲು ಟೊಂಕಕಟ್ಟಿ ನಿಂತಿದ್ದಾರೆ. ಅದರಲ್ಲೂ ಡಿ.ಕೆ.ಸುರೇಶ್ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜಾತಿಯನ್ನೂ ಮೀರಿ ಕ್ಷೇತ್ರದ ಹಿಡಿತವನ್ನು ಮುನಿರತ್ನ ಹೊಂದಿದ್ದಾರೆ. ಆದರೂ ಒಕ್ಕಲಿಗ ಸಮುದಾಯದ ಮತ ಹೆಚ್ಚಿರುವ ಕ್ಷೇತ್ರದಲ್ಲಿ ಕುಸುಮಾ ಅವರನ್ನು ಗೆಲ್ಲಿಸಲೇಬೇಕೆಂಬ ಛಲವನ್ನು ಡಿ.ಕೆ.ಸುರೇಶ್‌ ತೊಟ್ಟಿದ್ದಾರೆ.

ಒಂದೇ ಗರಡಿಯಲ್ಲಿ ತಂತ್ರಗಳನ್ನು ರೂಪಿಸುತ್ತಿದ್ದವರು ಈಗ ಎದುರಾಗಿದ್ದಾರೆ. ಆರೋಪ–ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿ ಮತ್ತು ಕಾರ್ಯಕರ್ತರ ಪಡೆ ಕೈ ಹಿಡಿಯುವ ವಿಶ್ವಾಸದಲ್ಲಿ ಮುನಿರತ್ನ ಇದ್ದಾರೆ. ಆಡಳಿತ ವಿರೋಧಿ ಅಲೆ ಮತ್ತು ಅನುಕಂಪ ಕೈ ಹಿಡಿಯುವ ವಿಶ್ವಾಸದಲ್ಲಿ ಕುಸುಮಾ ಇದ್ದಾರೆ. ಮುನಿರತ್ನ ವಿರೋಧಿಗಳನ್ನು ಸೆಳೆದು ಕಾರ್ಯಕರ್ತರ ಪಡೆ ಕಟ್ಟುವ ಕೆಲಸವನ್ನು  ಡಿ.ಕೆ.ಸುರೇಶ್‌ ಕಟ್ಟುತ್ತಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ನೇರ ಹಣಾಹಣಿ ಕಂಡುಬರುತ್ತಿದೆ.

ಇನ್ನೊಂದೆಡೆ ಜೆಡಿಎಸ್‌ನಿಂದ ಡಾ.ನಾರಾಯಣಸ್ವಾಮಿ ಅವರು ಸ್ಪರ್ಧೆ ಮಾಡಿದ್ದಾರೆ. ‘ಸಜ್ಜನ ರಾಜಕಾರಣಿಯಾಗಿರುವ ನಾರಾಯಣಸ್ವಾಮಿ ಅವರೇ ನನಗೆ ಪ್ರತಿಸ್ಪರ್ಧಿ’ ಎಂದು ಮುನಿರತ್ನ ಹೇಳುತ್ತಿದ್ದಾರೆ.

2013ರಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್‌, 2018ರಲ್ಲಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಆದರೂ, 60 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು. 2020ರ ಉಪ ಚುನಾವಣೆಯಲ್ಲಿ 10,269 ಮತಗಳಿಗೆ ಸೀಮಿತವಾಯಿತು. ಈ ಬಾರಿ ನಾರಾಯಣಸ್ವಾಮಿ ಸ್ಪರ್ಧೆಯಲ್ಲಿದ್ದಾರೆ. ಜೆಡಿಎಸ್‌ ಪಂಚರತ್ನ ಯೋಜನೆಗಳು, ಎಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರ ಮೇಲಿನ ಅಭಿಮಾನ ಜೆಡಿಎಸ್‌ಗೆ ವರವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ನಾರಾಯಣಸ್ವಾಮಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT