ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಭಾಗದ ಜನರ ಅಭಿವೃದ್ಧಿಗೆ ₹200 ಕೋಟಿ

‘ಗಡಿನಾಡ ಚೇತನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 2 ಫೆಬ್ರುವರಿ 2023, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾರ್ಚ್‌ 31ರ ಒಳಗೆ ₹ 100 ಕೋಟಿ ಬಿಡುಗಡೆ ಮಾಡಲಾಗುವುದು. ಅಲ್ಲದೆ, 2023–24ನೇ ಸಾಲಿನ ಬಜೆಟ್‌ನಲ್ಲೂ ಮತ್ತೆ ₹ 100 ಕೋಟಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಗುರುವಾರ ಹಮ್ಮಿಕೊಂಡಿದ್ದ ‘ಗಡಿನಾಡ ಚೇತನ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ‌ ಅವರು, ‘ಈ ಅನುದಾನವನ್ನು ಗಡಿಭಾಗ, ಹೊರನಾಡ ಕನ್ನಡಿಗರ ಭಾವನೆಗಳಿಗೆ ಪೂರಕವಾದ
ಕೆಲಸಗಳಿಗೆ ಬಳಸಬೇಕು’ ಎಂದು ಸಲಹೆ ನೀಡಿದರು.

‘ಒಂದೇ ಪ್ರದೇಶದಲ್ಲಿ ಭಾಷೆಗಳ ಆಧಾರದಲ್ಲಿ ರಾಜ್ಯಗಳು ಅಸ್ತಿತ್ವಕ್ಕೆ ಬಂದ ಕಾರಣದಿಂದ ಗಡಿ ಭಾಗದಲ್ಲಿ ಕೆಲವು ಸಮಸ್ಯೆಗಳಿವೆ. ಹಲವು ಭಾಗಗಳಲ್ಲಿ ಜನರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಆದರೆ, ರಾಜಕೀಯ ಕಾರಣಗಳಿಗಾಗಿ ಕೆಲವರು ಇಲ್ಲದ ಸಮಸ್ಯೆಗಳನ್ನು
ಸೃಷ್ಟಿಸುತ್ತಿದ್ದಾರೆ. ಇಂತಹ ಮನಃಸ್ಥಿತಿ ರಾಜ್ಯಕ್ಕೆ, ದೇಶಕ್ಕೆ ಒಳ್ಳೆಯದಲ್ಲ’ ಎಂದರು.

‘ಕರ್ನಾಟಕದ ಮುಖ್ಯಮಂತ್ರಿಯಾಗಿ
ಗಡಿಭಾಗ, ಹೊರನಾಡ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ತವರು ಮನೆಯ ಜವಾಬ್ದಾರಿ ನಿಭಾಯಿಸುತ್ತಿದೆ. ಕನ್ನಡ ಭಾಷೆ, ನೆಲ, ಜಲ, ಗಡಿ ಸುರಕ್ಷಿತವಾಗಿವೆ. ಕೆಲವರು ಹೇಳಿದಂತೆ ಆತಂಕಕ್ಕೆ ಯಾವ ಕಾರಣವೂ ಇಲ್ಲ’ ಎಂದು ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ಭಾಷಾ ವಿಷಯದಲ್ಲಿ ರಾಜ್ಯಗಳ ಮಧ್ಯೆ ಸಮಸ್ಯೆ ಇದ್ದರೂ, ಸಾಂಸ್ಕೃತಿಕವಾಗಿ ಒಗ್ಗೂಡಿದ್ದೇವೆ. ಮಹಾರಾಷ್ಟ್ರದ ರಂಗಭೂಮಿಗೆ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಅದೇ ರೀತಿ ವಿವಿಧ ರಾಜ್ಯಗಳ ಮಧ್ಯೆ ಅನನ್ಯ ಸಾಂಸ್ಕೃತಿಕ ಬಾಂಧವ್ಯಗಳು ಬೆಸೆದಿವೆ’ ಎಂದರು.

ಪ್ರಶಸ್ತಿ ಪ್ರದಾನ: ‘ಗಡಿನಾಡ ಚೇತನ’ ಪ್ರಶಸ್ತಿಯನ್ನು ಜತ್ತದ ಕನ್ನಡ ಹೋರಾಟಗಾರ ಎಂ.ಎಸ್. ಸಿಂಧೂರ, ಬೆಳಗಾವಿಯ ಅಶೋಕ್‌ ಚಂದರಗಿ ಹಾಗೂ ಕಾಸರಗೋಡಿನ ಕನ್ನಡದ ಅಸ್ಮಿತೆಯ ಸಾಂಸ್ಕೃತಿಕ ಪೀಠ ಎಂದೇ ಗುರುತಿಸಿಕೊಂಡ ಎಡನೀರು ಮಠಕ್ಕೆ ನೀಡಿದ ಪ್ರಶಸ್ತಿಯನ್ನು ರಾಜೇಂದ್ರ ಕಲ್ಲೂರಾಯ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್, ಕಾರ್ಯದರ್ಶಿ ಪ್ರಕಾಶ್‌ ಮತ್ತೀಹಳ್ಳಿ, ಮಾಜಿ ಸಚಿವೆಯರಾದ ಲೀಲಾದೇವಿ ಆರ್. ಪ್ರಸಾದ್, ರಾಣಿ ಸತೀಶ್‌
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT