ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹40 ಕೋಟಿ ವಂಚನೆ: ಎಎಫ್‌ ಡೆವಲಪರ್ಸ್ ವಿರುದ್ಧ ಪ್ರಕರಣ

Published 2 ಏಪ್ರಿಲ್ 2024, 23:57 IST
Last Updated 2 ಏಪ್ರಿಲ್ 2024, 23:57 IST
ಅಕ್ಷರ ಗಾತ್ರ

ಬೆಂಗಳೂರು: ಹಣ ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪದಡಿ ‘ಅಕ್ಷಯ್ ಫಾರ್ಚ್ಯೂನ್ (ಎಫ್‌) ಡೆವಲಪರ್ಸ್’ ಕಂಪನಿ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.

‘ವಿಜಯನಗರದ ಎಂ.ಸಿ. ಲೇಔಟ್‌ನಲ್ಲಿ ಕಂಪನಿ ಕಚೇರಿ ತೆರೆಯಲಾಗಿತ್ತು. ಹೂಡಿಕೆ ಹೆಸರಿನಲ್ಲಿ 150ಕ್ಕೂ ಹೆಚ್ಚು ಜನರಿಂದ ಸುಮಾರು ₹ 40 ಕೋಟಿ ಹಣ ಕಟ್ಟಿಸಿಕೊಂಡು ವಂಚಿಸಿರುವ ಮಾಹಿತಿ ಇದೆ. ಪ್ರಮುಖ ಆರೋಪಿಗಳಾದ ಮಂಜು ಹಾಗೂ ಮುನಿರಾಜು ಜಿ.ವಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರಿಬ್ಬರು ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಹೂಡಿಕೆ ಮಾಡಿದ ಹಣದ ಮೇಲೆ ತಿಂಗಳಿಗೆ ಶೇ 25ರಷ್ಟು ಲಾಭ ನೀಡುವುದಾಗಿ ಆರೋಪಿಗಳು ಹೇಳುತ್ತಿದ್ದರು. ಯಾರಾದರೂ ಹೂಡಿಕೆದಾರರು, ತಮ್ಮ ಪರಿಚಯಸ್ಥರು ಹಾಗೂ ಇತರರಿಂದ ಹಣ ಹೂಡಿಕೆ ಮಾಡಿದರೆ ಕಮಿಷನ್ ನೀಡುವುದಾಗಿಯೂ ಆಮಿಷವೊಡ್ಡುತ್ತಿದ್ದರು’ ಎಂದು ತಿಳಿಸಿದರು.

‘₹ 1 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹ 5 ಸಾವಿರ ಲಾಭ ನೀಡುವುದಾಗಿಯೂ ಆರೋಪಿಗಳು ಜಾಹೀರಾತು ನೀಡುತ್ತಿದ್ದರು. ಇವರ ಮಾತು ನಂಬಿದ್ದ ಸಾರ್ವಜನಿಕರು, ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.’

‘ವಂಚನೆ ಬಗ್ಗೆ ಕೆಲ ಹೂಡಿಕೆದಾರರು ಮಾಹಿತಿ ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೆಲ ಹೂಡಿಕೆದಾರರು ಈಗಾಗಲೇ ಹೇಳಿಕೆ ಸಹ ನೀಡಿದ್ದಾರೆ. ಎಎಫ್‌ ಡೆವಲಪರ್ಸ್ ಕಂಪನಿಯಿಂದ ಯಾರಿಗಾದರೂ ವಂಚನೆಯಾಗಿದ್ದರೆ ಸಿಸಿಬಿಯ ಚಾಮರಾಜಪೇಟೆಯಲ್ಲಿರುವ ಕಚೇರಿಗೆ ದೂರು ನೀಡಬಹುದು’ ಎಂದು ಪೊಲೀಸರು ಕೋರಿದ್ದಾರೆ.

ಪತ್ನಿ, ಸಂಬಂಧಿಕರೂ ಭಾಗಿ: ‘ಆರೋಪಿ ಮುನಿರಾಜು, ಈತನ ಪತ್ನಿ ಹಾಗೂ ಕುಟುಂಬದ ಸದಸ್ಯರು ಕಂಪನಿಯ ನಿರ್ದೇಶಕ ಮಂಡಳಿಯಲ್ಲಿದ್ದರು. ಪ್ರತಿಯೊಬ್ಬರೂ ವಂಚನೆ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಎಲ್ಲರನ್ನೂ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ತಿಳಿಸಿದರು.

‘ಮುನಿರಾಜುವಿನ ಪತ್ನಿ, ಹಲವರನ್ನು ಸಂಪರ್ಕಿಸಿ ಹಣ ಹೂಡಿಕೆ ಮಾಡಿಸಿದ್ದರೆಂಬ ಮಾಹಿತಿ ಇದೆ. ಕೆಲ ಹೂಡಿಕೆದಾರರಿಗೆ ಆರಂಭದಲ್ಲಿ ಲಾಭಾಂಶ ಸಹ ನೀಡಿದ್ದರು. ಕೆಲ ತಿಂಗಳಿನಿಂದ ಲಾಭಾಂಶ ನೀಡದೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT