ಭಾನುವಾರ, ಅಕ್ಟೋಬರ್ 17, 2021
23 °C
‘ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿ ವಿರುದ್ಧ ಮತ್ತೊಂದು ಎಫ್‌ಐಆರ್ l ಸಿಐಡಿ ತನಿಖೆ ಚುರುಕು

ಆರ್‌ಟಿಒ ಸ್ಮಾರ್ಟ್‌ಕಾರ್ಡ್ ₹ 12 ಕೋಟಿ ಗುಳುಂ: ಮತ್ತೊಂದು ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರ್‌ಟಿಒ ವತಿಯಿಂದ ವಿತರಿಸಲಾಗುವ ಸ್ಮಾರ್ಟ್‌ಕಾರ್ಡ್‌ಗಳನ್ನು ಪೂರೈಸುವ ಉಪ ಗುತ್ತಿಗೆ ನೀಡುವುದಾಗಿ ಹೇಳಿ ₹ 12 ಕೋಟಿ ಪಡೆದು ವಂಚಿಸಿರುವ ಆರೋಪದಡಿ ‘ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ರಿಚ್ಮಂಡ್ ರಸ್ತೆಯಲ್ಲಿರುವ ‘ಕಾಲ್ಕ್ಯೂ ಇನ್ಫೊ ಸರ್ವೀಸ್’ ಕಂಪನಿ ಪಾಲುದಾರ ಅನೂಪ್ ಕಿರಣ್ ಎಂಬುವರು ದೂರು ನೀಡಿದ್ದಾರೆ. ’ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿ ಮುಖ್ಯಸ್ಥ ವಿವೇಕ್‌ ನಾಗಪಾಲ್, ಪಾಲುದಾರರಾದ ಕರಣ್‌ ನಾಗಪಾಲ್, ಗೌರವ್ ನಾಗಪಾಲ್, ಪಂಕಜ್‌ ಮದನ್, ಸಂದೀಪ್ ಮಲ್ಲಿಕ್, ಸಾಹೇಂದ್ರ ಪಾಲ್ ಸಿಂಗ್, ಮೊಹಮ್ಮದ್ ತಬ್ರೇಜ್ ಅಹ್ಮದ್, ಸುಭೂದ್‌ಕುಮಾರ್ ಜಯಸ್ವಾಲ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘₹ 13 ಕೋಟಿ ವಂಚಿಸಿದ್ದ ಆರೋಪದಡಿ ಕಂಪನಿ ವಿರುದ್ಧ ಮೈಸೂರಿನಲ್ಲಿ ಈಗಾಗಲೇ ಒಂದು ಎಫ್‌ಐಆರ್ ದಾಖಲಾಗಿದೆ. ಇದರ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಬೆಂಗಳೂರಿನ ಅಶೋಕನಗರದಲ್ಲಿ ದಾಖಲಾಗಿರುವ ಈ ಪ್ರಕರಣವನ್ನೂ ಸಿಐಡಿಗೆ ಹಸ್ತಾಂತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.

ಉಪಗುತ್ತಿಗೆ ನೆಪದಲ್ಲಿ ವಂಚನೆ: ‘ಕಾಲ್ಕ್ಯೂ ಇನ್ಫೊ ಸರ್ವೀಸ್’ ಕಂಪನಿ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದ ಆರೋಪಿಗಳು, ‘ದೇಶದ ಎಲ್ಲ ರಾಜ್ಯಗಳ ಸಾರಿಗೆ ಇಲಾಖೆಯ ಆರ್‌ಟಿಒ ಕಚೇರಿಗೆ ಸಂಬಂಧಪಟ್ಟ ಸ್ಮಾರ್ಟ್‌ಕಾರ್ಡ್‌ಗಳನ್ನು ತಯಾರಿಸಿ ಪೂರೈಸುವ ಟೆಂಡರ್‌, ನಮ್ಮ ರೋಸ್‌ಮೆರ್ಟಾ ಟೆಕ್ನಾಲಜಿಸ್ ಕಂಪನಿಗೆ ಸಿಕ್ಕಿದೆ. ಚಾಲನಾ ಪರವಾನಗಿ, ವಾಹನ ನೋಂದಣಿ ಸೇರಿ ಎಲ್ಲ ಬಗೆಯ ಸ್ಮಾರ್ಟ್‌ಕಾರ್ಡ್‌ಗಳನ್ನು ನಿಗದಿತ ದಿನದೊಳಗೆ ಪೂರೈಸುವ ಜವಾಬ್ದಾರಿ ಕಂಪನಿ ಮೇಲಿದೆ’ ಎಂಬುದಾಗಿ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ವಿವರಿಸಿವೆ.

‘ನಮ್ಮ ಯೋಜನೆಗೆ ಅಗತ್ಯವಿರುವ ಹಣಕಾಸಿನ ಸೌಲಭ್ಯವಿಲ್ಲ. ಕಾಲ್ಕ್ಯೂ ಇನ್ಫೊ ಸರ್ವೀಸ್ ಕಂಪನಿಯನ್ನು ಪಾಲುದಾರರನ್ನಾಗಿಸಿಕೊಂಡು, ಉಪಗುತ್ತಿಗೆ ಮೂಲಕ ಸ್ಮಾರ್ಟ್‌ಕಾರ್ಡ್‌ ಪೂರೈಸುವ ಒಪ್ಪಂದ ಮಾಡಿಕೊಳ್ಳುತ್ತೇವೆ’ ಎಂದೂ ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ಕಾಲ್ಕ್ಯೂ ಇನ್ಫೊ ಸರ್ವೀಸ್ ಕಂಪನಿ ಪಾಲುದಾರರು, ₹ 12 ಕೋಟಿಯನ್ನು ರೋಸ್‌ಮೆರ್ಟಾ ಟೆಕ್ನಾಲಜಿಸ್ ಕಂಪನಿಗೆ ನೀಡಿ ಒಪ್ಪಂದ ಮಾಡಿಕೊಂಡಿದ್ದರು’ ಎಂದೂ ಮೂಲಗಳು ಹೇಳಿವೆ.

‘ಹಣ ಪಡೆದ ನಂತರ ಆರೋಪಿಗಳು, ಯಾವುದೇ ಉಪಗುತ್ತಿಗೆ ನೀಡಿಲ್ಲ. ಹಣ ವಾಪಸು ಕೇಳಿದಾಗ, ಜೀವ ಬೆದರಿಕೆ ಹಾಕಲಾರಂಭಿಸಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ತಿಳಿಸಿವೆ.

ಖಾಸಗಿ ಮೊಕದ್ದಮೆ ಹೂಡಿದ್ದ ದೂರುದಾರ: ರೋಸ್‌ಮೆರ್ಟಾ ಟೆಕ್ನಾಲಜಿಸ್ ಕಂಪನಿ ವಿರುದ್ಧ ಪೊಲೀಸರು ಆರಂಭದಲ್ಲಿ ದೂರು ದಾಖಲಿಸಿಕೊಂಡಿರಲಿಲ್ಲ. ನೊಂದ ಕಾಲ್ಕ್ಯೂ ಇನ್ಫೊ ಸರ್ವೀಸ್ ಕಂಪನಿ ಪಾಲುದಾರರು, 4ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಇದರನ್ವಯ ಇದೀಗ ಎಫ್‌ಐಆರ್ ದಾಖಲಾಗಿದೆ.

ಮುಖ್ಯಸ್ಥನನ್ನು ವಶಕ್ಕೆ ಪಡೆದಿದ್ದ ಸಿಐಡಿ

₹ 13 ಕೋಟಿ ವಂಚನೆ ಆರೋಪದಡಿ ಮೈಸೂರಿನಲ್ಲಿ 2016ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ‘ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿ ಮುಖ್ಯಸ್ಥ ವಿವೇಕ್ ನಾಗಪಾಲ್‌ನನ್ನು ಇತ್ತೀಚೆಗೆ ಸಿಐಡಿ ವಶಕ್ಕೆ ಪಡೆದಿತ್ತು. ವಿಚಾರಣೆ ನಡೆಸಿ ಆತನ ಹೇಳಿಕೆ ಪಡೆದಿರುವುದಾಗಿ ಗೊತ್ತಾಗಿದೆ. ಹೆಚ್ಚಿನ ಮಾಹಿತಿ ನೀಡಲು ಸಿಐಡಿ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು