ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರೇಶ್ ಕೊಲೆ: ಆರೋಪಿ ಜಾಮೀನು ಅರ್ಜಿ ವಜಾ

Last Updated 2 ಆಗಸ್ಟ್ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಐದನೇ ಆರೋಪಿ ಅಸೀಂ ಶರೀಫ್‌ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಈ ಕುರಿತಂತೆ ಕಾಯ್ದಿರಿಸಲಾಗಿದ್ದ ತೀರ್ಪನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ.

‘ಹತ್ಯೆ ನಡೆಸುವುದಕ್ಕೂ ಮನ್ನ ಆರೋಪಿಗಳ ಫೋನ್‌ ಕಾಲ್‌ ವಿವರಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967ರ ಕಲಂ 43ರ ಅನುಸಾರ ಮೇಲ್ನೋಟಕ್ಕೆ ಅಸೀಂ ಶರೀಫ್‌ ಮೇಲಿನ ಆರೋಪಗಳಲ್ಲಿ ಹುರುಳಿದೆ’ ಎಂಬ ಎನ್‌ಐಎ ವಾದವನ್ನು ನ್ಯಾಯಪೀಠ ಮನ್ನಿಸಿದೆ.

ಎನ್‌ಐಎ ಪರ ಪಿ.ಪ್ರಸನ್ನಕುಮಾರ್ ಹಾಗೂ ಅಸೀಂ ಶರೀಫ್‌ ಪರ ಎಸ್‌.ಬಾಲಕೃಷ್ಣನ್‌ ವಾದ ಮಂಡಿಸಿದ್ದರು. ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ಗಣವೇಷಧಾರಿಯಾಗಿ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿತ್ತು. ಅಂದು ಆ ಪ್ರದೇಶದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಇತ್ತು.

ಪ್ರಕರಣದ ಆರೋಪಿಗಳಾದ ಅಸೀಮ್‌ ಶರೀಫ್, ಇರ್ಫಾನ್ ಪಾಷಾ, ವಸೀಂ ಅಹಮದ್, ಮೊಹಮದ್‌ ಸಾದಿಕ್‌ ಅಲಿಯಾಸ್ ಮಜಹರ್ ಮತ್ತು ಮಹಮ್ಮದ್ ಮುಬೀಬುಲ್ಲಾ ಅಲಿಯಾಸ್ ಮೌಲಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ‘ನನ್ನನ್ನು ಪ್ರಕರಣದಿಂದ ಕೈಬಿಡಬೇಕು’ ಎಂಬ ಅಸೀಂ ಶರೀಫ್‌ ಅರ್ಜಿಯನ್ನು ಈಗಾಗಲೇ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT