ಗುರುವಾರ , ಜನವರಿ 23, 2020
23 °C

ಸದಾಶಿವನಗರ ಕ್ಲಬ್‌: ತಡೆ ಆದೇಶ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸದಾಶಿವನಗರ ಕ್ಲಬ್ ಆವರಣದಲ್ಲಿ ಆರು ಮಹಡಿಯ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ ಕಳೆದ ತಿಂಗಳ 14ರಂದು ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ.

ಸದಾಶಿವನಗರದ ವಾಸಿಗಳಾದ ಲಕ್ಷ್ಮೀ ತಿಮ್ಮಯ್ಯ, ಬಿ.ಸುನೇತ್ರಾ ಮತ್ತು ವಿ.ಸವಿತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ಆದೇಶ ನೀಡಿ ವಿಚಾರಣೆ ಮುಂದೂಡಿತು.

ಕ್ಲಬ್ ಪರ ವಾದ ಮಂಡಿಸಿದ ಹಿರಿಯ ವಕೀಲರು, ‘ಕ್ಲಬ್ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿತ್ತು, ಹಾಗಾಗಿ ಟೆನಿಸ್ ಕೋರ್ಟ್ ಇದ್ದ ಜಾಗದಲ್ಲಿ ಪಾರ್ಕಿಂಗ್ ಜಾಗಕ್ಕಾಗಿ ಕಟ್ಟಡ ನಿರ್ಮಿ ಸಲು ಬಿಡಿಎ ಅನುಮತಿ ನೀಡಿದ್ದು. ಕಳೆದ ಫೆಬ್ರುವರಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಟ್ಟಡದ ಬಹುತೇಕ ಜಾಗವನ್ನು ಮುಂದೆ ವಾಹನ ನಿಲುಗಡೆಗೆ ಬಳಸಿಕೊಳ್ಳಲಾಗುವುದು. ಕಾಮಗಾರಿ ಮುಗಿಯುವ ಹಂತ ತಲುಪಿದೆ. ಹಾಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಕಾಮ ಗಾರಿಯನ್ನು ಪೂರ್ಣಗೊಳಿಸಲು ಅವ ಕಾಶ ನೀಡಬೇಕು’ ಎಂದು ಮನವಿ ಮಾಡಿದರು.

‘ಇದೇ 10ರಂದು ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಕ್ಲಬ್ ಹೊಸದಾಗಿ ಮನವಿ ಸಲ್ಲಿಸಿದ್ದು, ಅದನ್ನು ಪರಿಗಣಿಸುವಂತೆ ಆದೇಶ ನೀಡಬೇಕು’ ಎಂದೂ ಕೋರಿದರು. ಬಿಡಿಎ ಪರ ವಕೀಲರು, ‘ಕ್ಲಬ್‌ಗೆ ನೀಡಿದ್ದ ಅನುಮತಿ ಬಗ್ಗೆ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿಚಾರಣೆಯನ್ನು 2020ರ ಫೆಬ್ರುವರಿ 3ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿರುವ ತಡೆ ಆದೇಶ ಮುಂದುವರಿಸಲು ಆದೇಶಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು