ಶನಿವಾರ, ಜನವರಿ 28, 2023
16 °C
ಮಕ್ಕಳ ಪುಸ್ತಕಗಳ ಮರು ಓದು ವಿಚಾರ ಸಂಕಿರಣ, ಅನುವಾದ ಕಾರ್ಯಾಗಾರ

‘ಭಾಷೆಯ ಸಂಸ್ಕೃತಿ ಅರಿವು ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅನುವಾದಕನಿಗೆ ಕೆಲವು ಪದಗಳು ತಿಳಿದಿದ್ದರೆ ಸಾಲದು. ಯಾವ ಭಾಷೆಗೆ ಅನುವಾದಿಸುತ್ತಾರೋ ಅದರ ಸಂಸ್ಕೃತಿ, ಸಾಹಿತ್ಯಿಕ ವಾತಾವರಣ ಮತ್ತು ನುಡಿಗಟ್ಟುಗಳು ಅರಿತಿರಬೇಕು’ ಎಂದು ಸಾಹಿತಿ ಸಿದ್ಧಲಿಂಗಯ್ಯ ಹೇಳಿದರು. 

ಶಬ್ದನಾ, ಸಾಹಿತ್ಯ ಅಕಾಡೆಮಿ, ಪ್ರಥಮ ಬುಕ್ಸ್‌ ಮತ್ತು ಜೈನ ವಿಶ್ವವಿದ್ಯಾಲಯದ ವತಿಯಿಂದ ಮಕ್ಕಳ ಜನಪ್ರಿಯ ಪುಸ್ತಕಗಳ ಮರು ಓದು ಕುರಿತ ವಿಚಾರ ಸಂಕಿರಣ ಮತ್ತು ಅನುವಾದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವವರು, ಅನುವಾದಿತ ಪದ್ಯದ ಪಕ್ಕದಲ್ಲಿಯೇ ಮೂಲ ಪದ್ಯವನ್ನು ಹಾಕಬೇಕು. ಆಗ, ಭಾಷಾಂತರದ ಗುಣಮಟ್ಟ ತಿಳಿಯುತ್ತದೆ’ ಎಂದರು. 

‘ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಹುಟ್ಟಿನಿಂದಲೇ ಇರುತ್ತದೆ. ಇಂತಹ ಮನೋಭಾವಗಳೇ ಜ್ಞಾನ, ವಿಜ್ಞಾನ ಹಾಗೂ ಹೊಸ ಸಂಶೋಧನೆಗೆ ಕಾರಣವಾಗಿದೆ. ಮಕ್ಕಳ ಕವಿತೆಯಲ್ಲಿನ ಸರಳತೆ, ಸಂವಹನಶೀಲತೆ, ಮುಗ್ಧತೆಯಂತಹ ಅಂಶಗಳು ಓದುಗರನ್ನು ಆಕರ್ಷಿಸುತ್ತವೆ. ಮಕ್ಕಳನ್ನು ಕುರಿತು ಬರೆಯುವವರೂ ಅದೇ ಉತ್ಸಾಹದಲ್ಲಿ ಸರಳವಾಗಿ ಕೃತಿ ರಚಿಸಬೇಕು. ಆಗ ಓದುಗರೂ ಖುಷಿಯಿಂದ ಓದುತ್ತಾರೆ’ ಎಂದರು.

ಲೇಖಕ ಎ.ವಿ. ನಾವಡ, ‘ಕನ್ನಡ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಕುರಿತ ಚರ್ಚೆ ಅನಿವಾರ್ಯವಾಗಿದೆ. ಕನ್ನಡ ಶಾಲೆಗಳು ಮಕ್ಕಳ ಸಾಹಿತ್ಯದ ಉಗಮದ ತಾಣಗಳು. ಕನ್ನಡದ ಅನೇಕ ಸಾಹಿತಿಗಳು ಪ್ರಾಥಮಿಕ ಶಾಲೆಯ ಶಿಕ್ಷಕರು, ಅಧ್ಯಾಪಕರು ಆಗಿದ್ದವರು. ಹೀಗಾಗಿ, ಶಾಲೆಯಲ್ಲಿ, ಮನೆಯಲ್ಲಿ ಕನ್ನಡ ಪರಿಸರ ಇತ್ತು’ ಎಂದು ಹೇಳಿದರು. 

‘ಮಕ್ಕಳ ಸಾಹಿತ್ಯವನ್ನು ಓದುವವರು ಇದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವ ಜೊತೆಗೆ, ಈ ಸಾಹಿತ್ಯವನ್ನು ಓದುವ ಹಾಗೆ ಮಾಡುವ ಹಟಮಾರಿ ಭೀಷ್ಮಾಚಾರ್ಯರು ಇಂದು ಬೇಕಾಗಿದ್ದಾರೆ’ ಎಂದು ಹೇಳಿದರು. 

ವಿಜ್ಞಾನ ಲೇಖಕ ನಾಗೇಶ ಹೆಗಡೆ, ‘ಇಂದಿನ ಮಕ್ಕಳ ಮುಂದಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ರಚನೆಯಾಗಬೇಕಿದೆ. ಪರಿಸರ, ಬದಲಾಗುತ್ತಿರುವ ಜಗತ್ತು, ತಂತ್ರಜ್ಞಾನದಂತಹ ಅಂಶಗಳನ್ನು ಇಂದಿನ ಮಕ್ಕಳಿಗೆ ಅರ್ಥ ಮಾಡಿಸುವ ರೀತಿಯಲ್ಲಿ ಸಾಹಿತ್ಯ ರಚನೆ ಇರಬೇಕು’ ಎಂದರು. 

ಮಕ್ಕಳ ಸಾಹಿತ್ಯದ ಪುಸ್ತಕಗಳು, ಕಥೆ–ಕವನಗಳ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಜೈನ್‌ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮಂಗಳವಾರವೂ ವಿಚಾರ ಸಂಕಿರಣ ಮುಂದುವರಿಯಲಿದೆ. 

‘ರಾಜ್ಯಾಧಿಕಾರ ರಾಜ್ಯ ವಿದ್ಯುತ್‌ ಆಗಿತ್ತು!’

‘ಮ್ಯಾಕ್ಸಿಂಗಾರ್ಕಿ ಬರೆದಿದ್ದ ಕಾದಂಬರಿಯೊಂದರ ಕನ್ನಡ ಅನುವಾದಿತ ನಾಟಕದ (ತಾಯಿ) ಪ್ರದರ್ಶನವಿತ್ತು. ‍ಪ್ರಸನ್ನ ನಿರ್ದೇಶಿಸಿದ್ದ ಆ ನಾಟಕಕ್ಕೆ ಬಿ.ವಿ. ಕಾರಂತರು ಸಂಗೀತ ನೀಡಿದ್ದರು. ‘ರಾಜ್ಯ ವಿದ್ಯುತ್‌, ರಾಜ್ಯ ವಿದ್ಯುತ್‌’’ ಎಂಬ ಹಾಡನ್ನು ಕಲಾವಿದರು ಹೇಳುತ್ತಿದ್ದರು. 1900ಕ್ಕೂ ಮೊದಲಿನ ಕಥೆ ಹೊಂದಿರುವ ಈ ನಾಟಕದಲ್ಲಿ ವಿದ್ಯುತ್‌ ಎಂಬ ಪದ ಹೇಗೆ ಬರುತ್ತದೆ ಎಂಬ ಅನುಮಾನ ಮೂಡಿ, ಆ ಹಾಡಿನ ಮೂಲ ಪ್ರತಿ ನೋಡಿದೆ. ಅದರಲ್ಲಿ ‘ಸ್ಟೇಟ್‌ ಪವರ್‌ ಟು ದಿ ವರ್ಕರ್ಸ್‌’ ಎಂದಿತ್ತು. ಅಂದರೆ, ಕಾರ್ಮಿಕರಿಗೆ ರಾಜ್ಯಾಧಿಕಾರ ಆಗಬೇಕು ಎಂಬ ಒತ್ತಾಯದ ಹಾಡು ಅದಾಗಿತ್ತು. ಪವರ್‌ ಎನ್ನುವ ಪದವನ್ನು ವಿದ್ಯುತ್‌ ಎಂದು ಭಾವಿಸಿ, ಕಾರ್ಮಿಕರಿಗೆ ವಿದ್ಯುತ್‌ ಬೇಕು ಎಂಬರ್ಥದಲ್ಲಿ ಹಾಡು ಬರೆಯಲಾಗಿತ್ತು’ ಎಂದು ಸಿದ್ದಲಿಂಗಯ್ಯ ನಗುತ್ತಾ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು