ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಮೇಲಿನ ವೆಚ್ಚ ಹೆಚ್ಚಲಿ: ಪ್ರಶಾಂತ್‌ ಭೂಷಣ್‌

ರಾಷ್ಟ್ರಮಟ್ಟದ ಶೈಕ್ಷಣಿಕ ಕಾರ್ಯಾಗಾರ
Last Updated 8 ನವೆಂಬರ್ 2020, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ರೀತಿಯ ಶಿಕ್ಷಣ ನೀತಿ ರೂಪಿಸಿದರೂ ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಖರ್ಚು ಮಾಡದಿದ್ದರೆ ಪ್ರಯೋಜನವಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಜಿಡಿಪಿಯ ಶೇ 6ರಷ್ಟು ಮೊತ್ತವನ್ನು ಈ ಕ್ಷೇತ್ರಕ್ಕೆ ಮೀಸಲಿಡಬೇಕು ಎಂಬ ಮಾರ್ಗಸೂಚಿ ರೂಪಿಸಲಾಗಿದೆ. ಅದು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರುವ ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿದರು.

ಅಖಿಲ ಭಾರತ ಶಿಕ್ಷಣ ಸಮಿತಿಯು ಭಾನುವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಖಾಸಗೀಕರಣಗೊಳಿಸುವ ರೀತಿಯಲ್ಲಿ ಎನ್‌ಇಪಿ ಇದೆ. ಎಷ್ಟಾದರೂ ಹಣ ಸ್ವೀಕರಿಸಿ, ಎಷ್ಟಾದರೂ ಲಾಭ ಗಳಿಸಿ, ಆದರೆ ಅದರ ಲೆಕ್ಕ ಕೊಡಿ ಎಂಬ ಅಂಶ ನೀತಿಯಲ್ಲಿದೆ. ಪ್ರಾಥಮಿಕ ಶಿಕ್ಷಣವನ್ನಾದರೂ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮೂಲಕ ಉಚಿತವಾಗಿ ನೀಡುವ ಕೆಲಸವಾಗಬೇಕು’ ಎಂದರು.

‘ಮೊದಲ ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣ ವಿಷಯವನ್ನು ನಂತರ ಸಮವರ್ತಿ ಪಟ್ಟಿಗೆ ತರಲಾಯಿತು. ಅಂದರೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡೂ ಕಾನೂನು ರೂಪಿಸಬಹುದು. ಆದರೆ, ಕೇಂದ್ರ ಒಂದು ಕಾನೂನು ರೂಪಿಸಿದರೆ, ರಾಜ್ಯ ಸರ್ಕಾರಗಳು ಅದನ್ನು ಮೀರಿ ಕಾನೂನು ಮಾಡಲು ಸಾಧ್ಯವಿಲ್ಲ. ನಮ್ಮ ದೇಶ ಹಲವು ಭಾಷೆ, ವಿಭಿನ್ನ ಸಂಸ್ಕೃತಿ ಹೊಂದಿರುವುದರಿಂದ ಶಿಕ್ಷಣ ಕ್ಷೇತ್ರ ವಿಕೇಂದ್ರೀಕರಣಗೊಳಿಸುವುದು ಉತ್ತಮ’ ಎಂದರು.

‘ಶಿಕ್ಷಣ ನೀತಿಯನ್ನು 20 ವರ್ಷಗಳಿಗೊಮ್ಮೆ ರೂಪಿಸಲಾಗುತ್ತಿದೆ. ಹೀಗೆ ನೀತಿ ಮಾಡುವಾಗ ಸಂಬಂಧಿಸಿದ ಎಲ್ಲರ ಜೊತೆಗೆ ಚರ್ಚೆ ನಡೆಸುವುದು, ಸಲಹೆ ಪಡೆಯುವುದು ಅಗತ್ಯ. ಆದರೆ, ಈ ಎನ್ಇಪಿ ರೂಪಿಸುವಾಗ ಇಂತಹ ಚರ್ಚೆ, ಸಂವಾದಗಳು ಹೆಚ್ಚಾಗಿ ನಡೆಯಲಿಲ್ಲ’ ಎಂದರು.

‘ಹೊಸ ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯುಜಿಸಿ ಮಾದರಿಯಲ್ಲಿ ಕೇಂದ್ರ ನಿಯಂತ್ರಣ ಪ್ರಾಧಿಕಾರವೊಂದನ್ನು ರಚಿಸಬೇಕು’ ಎಂದೂ ಅವರು ಸಲಹೆ ನೀಡಿದರು.

ಶಿಕ್ಷಣ ತಜ್ಞ ಪ್ರೊ.ಎಲ್. ಜವಾಹರ್‌ ನೇಸನ್, ‘ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ನೀತಿ ರೂಪಿಸುವಾಗಲೂ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನೂ ಅಧ್ಯಯನ ಮಾಡಬೇಕು. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯು ಶಿಕ್ಷಣದ ಮೇಲೆಯೂ ಪ್ರಭಾವ ಬೀರುತ್ತದೆ. ಈ ವಲಯಗಳನ್ನು ಗಮನದಲ್ಲಿಟ್ಟುಕೊಳ್ಳದೆ ರೂಪಿಸುವ ಮಾನದಂಡಗಳು ಅಥವಾ ನೀತಿಗಳು ಪರಿಪೂರ್ಣವಾಗಲಾರವು. ನೂತನ ಎನ್‌ಇಪಿಯಲ್ಲಿ ಈ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ–ಗತಿಯ ಕಡೆಗೆ ಗಮನ ಹರಿಸಿಲ್ಲ’ ಎಂದರು.

ಕೋಲ್ಕತ್ತದ ಜಾಧವಪುರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರದೀಪ್‌ಕುಮಾರ್‌ ಘೋಷ್, ಎಐಎಸ್‌ಇಸಿ ಪ್ರಧಾನ ಕಾರ್ಯದರ್ಶಿ ಪ್ರೊ. ಅನಿಸ್‌ ರಾಯ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT