ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್‌ 2022: ‘ತುರಹಳ್ಳಿ ಉಳಿಸಿ’ ಕಾಲ್ನಡಿಗೆಗೆ ಜೊತೆಯಾದ ನಾಗರಿಕರು

ಪಟ್ಟಿಯಿಂದ ಯೋಜನೆ ಕೈಬಿಡುವಂತೆ ಪಟ್ಟು
Last Updated 14 ಫೆಬ್ರುವರಿ 2021, 21:06 IST
ಅಕ್ಷರ ಗಾತ್ರ

ಬೆಂಗಳೂರು: ತುರಹಳ್ಳಿ ಮೀಸಲು ಅರಣ್ಯದಲ್ಲಿ ‘ಮರಗಳ ಉದ್ಯಾನ’ ನಿರ್ಮಿಸುವ ಸರ್ಕಾರದ ಕ್ರಮವನ್ನು ಖಂಡಿಸಿ ಪರಿಸರ ಪ್ರಿಯರು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ‘ತುರಹಳ್ಳಿ ಉಳಿಸಿ ಕಾಲ್ನಡಿಗೆ’ ಭಾನುವಾರ ನಡೆಯಿತು.

ಕಾಲ್ನಡಿಗೆಯಲ್ಲಿ ‘ಕ್ಲೀನಪ್ ತುರಹಳ್ಳಿ ಗ್ರೂಪ್’, ‘ಆರ್.ಆರ್ ನಗರ ಐ-ಕೇರ್ ಗ್ರೂಪ್’, ‘ಮಿಷನ್ ದಿಶಾ ಗ್ರೂಪ್’, ‘ತುರಹಳ್ಳಿ ಫಾರೆಸ್ಟ್ ಗ್ರೂಪ್’ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ನಾಗರಿಕರು, ಸ್ಥಳೀಯ ನಿವಾಸಿಗಳು, ಪರಿಸರವಾದಿಗಳೂ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು.

‘ತುರಹಳ್ಳಿ ಉಳಿಸಿ’ ಎಂಬ ಫಲಕಗಳು ಹಾಗೂ ಘೋಷಣೆಗಳನ್ನು ಕೂಗುತ್ತಾ ತುರಹಳ್ಳಿಮರಗಳ ಉದ್ಯಾನದ ಪ್ರವೇಶದ್ವಾರದಿಂದ ಕಾಲ್ನಡಿಗೆ ಆರಂಭಿಸಿದರು.

‘ತುರಹಳ್ಳಿ ಉಳಿಸಿ’ ಗುಂಪಿನ ಸ್ವಯಂಸೇವಕ ಡಾ.ಎ.ಭಾನು,‘ಅರಣ್ಯವನ್ನು ಉದ್ಯಾನ ಮಾಡುವ ಸರ್ಕಾರದ ನಿರ್ಧಾರ ಮೂರ್ಖತನದ್ದು. ಯಾವುದೇ ಕಾರಣಕ್ಕೂ ಈ ಕಾರ್ಯಕ್ಕೆ ಅವಕಾಶ ಕಲ್ಪಿಸಬಾರದು.ತುರಹಳ್ಳಿ ಅರಣ್ಯ ಪ್ರದೇಶ ಬೆಂಗಳೂರಿಗೆ ಹೊಂದಿಕೊಂಡಿರುವ ಕಾಡು. ಇದನ್ನು ಭವಿಷ್ಯದ ದೃಷ್ಟಿಯಿಂದಲೂ ರಕ್ಷಿಸಬೇಕಿದೆ’ ಎಂದರು.

‘ಅರಣ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ನೀಡಬಾರದು. ಈ ಪ್ರದೇಶ 120ಕ್ಕೂ ಹೆಚ್ಚು ವಿವಿಧ ಜೀವ ಸಂಕುಲಗಳ ತಾಣವಾಗಿದೆ.ರಾಜ್ಯ ಸರ್ಕಾರದ ‘ಮಿಷನ್‌ 2022’ ಯೋಜನೆಗಳ ಪಟ್ಟಿಯಿಂದ ತುರಹಳ್ಳಿ‘ಮರಗಳ ಉದ್ಯಾನ’ ನಿರ್ಮಿಸುವ ಅಂಶವನ್ನು ಕೈಬಿಡಬೇಕು. ಅಲ್ಲಿಯವರೆಗೆ ಈ ಆಂದೋಲನ ಮುಂದುವರಿಯಲಿದೆ’ ಎಂದೂ ಎಚ್ಚರಿಸಿದರು.

‘ಕಾಲ್ನಡಿಗೆಗೆ ಎಲ್ಲ ನಾಗರಿಕ ಸಂಘ ಸಂಸ್ಥೆಗಳನ್ನು ಆಹ್ವಾನಿಸಿದ್ದೆವು. ನಿರೀಕ್ಷೆಗೂ ಮೀರಿ ಜನರು ಕಾಲ್ನಡಿಗೆಯಲ್ಲಿ ಭಾಗವಹಿಸಿ, ತುರಹಳ್ಳಿ ಅರಣ್ಯ ರಕ್ಷಣೆಗೆ ಬೆಂಬಲ ಸೂಚಿಸಿದ್ದಾರೆ. ಸದ್ಯಕ್ಕೆ ಅರಣ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚೆ ನಡೆಯಲಿದ್ದು, ಬಳಿಕ ಮುಂದಿನ ನಡೆ ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಚೇಂಜ್ ಮೇಕರ್ಸ್‌ ಆಫ್ ಕನಕಪುರ ರೋಡ್‌ನ ಅಧ್ಯಕ್ಷ ಅಬ್ದುಲ್ ಅಲೀಂ,‘ಅರಣ್ಯ ಪ್ರದೇಶವನ್ನು ಉದ್ಯಾನವನ್ನಾಗಿ ಪರಿವರ್ತಿಸುವುದು ಬೇಡ. ಕಾಡು ಕಾಡಾಗಿಯೇ ಇರಲಿ. ಪ್ರಾಣಿ ಪಕ್ಷಿ, ವೃಕ್ಷ ಸಂಕುಲಗಳನ್ನು ಕಾಪಾಡುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿ. ಇಂದಿನ ಕಾಲ್ನಡಿಗೆಯು ಪರಿಸರ ರಕ್ಷಣೆಗೆ ನಾಗರಿಕರ ಒಲವನ್ನು ಸರ್ಕಾರಕ್ಕೆ ಮನದಟ್ಟು ಮಾಡಿದೆ. ಅರಣ್ಯದಲ್ಲಿ ಮಾನವ ಸಂಚಾರ ಇರಲೇಬಾರದು’ ಎಂದು ಆಗ್ರಹಿಸಿದರು.

‘ಅರಣ್ಯ ಇಲಾಖೆ ಅಧಿಕಾರಿಗಳು ತುರಹಳ್ಳಿ ಅರಣ್ಯದ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿದ್ದಾರೆ. ಅರಣ್ಯದ ಒಳಗೆ ಕಸ ಹಾಕುವುದು ಹಾಗೂ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ’ ಎಂದುತುರಹಳ್ಳಿ ನಗರ ಅರಣ್ಯ ಸಮಿತಿಯ ಅಧ್ಯಕ್ಷ ಲಿಯೋ ಸಲ್ಡಾನ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT