ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ: ಎಸಿಎಸ್‌ಗೆ ಮೇಯರ್‌ ಪತ್ರ

ಟೆಂಡರ್‌ ಪಡೆಯಲು ನಕಲಿ ದಾಖಲೆ– ಗುತ್ತಿಗೆ ರದ್ದತಿಗೆ ಒತ್ತಾಯ
Last Updated 13 ಆಗಸ್ಟ್ 2020, 22:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಕಲಿ ದಾಖಲೆ ನೀಡಿ ಟೆಂಡರ್‌ ಪಡೆದಿರುವ ಆರು ಕಾಮಗಾರಿಗಳ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮೇಯರ್‌ ಎ೦. ಗೌತಮ್‌ ಕುಮಾರ್‌ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.

ತಪ್ಪು ಮಾಹಿತಿ ನೀಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆಯೂ ಮೇಯರ್‌ ಸೂಚಿಸಿದ್ದಾರೆ.

ಕಾಮಗಾರಿಯ ಗುತ್ತಿಗೆ ನೀಡುವಾಗ ತಾಂತ್ರಿಕ ಮೌಲ್ಯಮಾಪನವನ್ನು ಅಧಿಕಾರಿಗಳು ಸರಿಯಾಗಿ ನಡೆಸಿಲ್ಲ. ಈ ಅಕ್ರಮಕ್ಕೆ ಸಹಕರಿಸಿದ ಕಾರ್ಯಪಾಲಕ ಎಂಜಿನಿಯರ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ‘ಕೆಲವು ಅಕ್ರಮಗಳ ಬಗ್ಗೆ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಗಮನಕ್ಕೆ ತಂದು ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೂ ಅವರು ಯಾವುದೇ ಕ್ರಮಕೈಗೊಂಡಿಲ್ಲ. ರಾಜಕಾಲುವೆ ವಿಭಾಗದ ಕಾಮಗಾರಿಗಳ ಗುತ್ತಿಗೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಈ ವಿಭಾಗದ ಮುಖ್ಯ ಎಂಜಿನಿಯರ್‌ ಗಮನಕ್ಕೆ ತಂದು ವರದಿ ನೀಡುವಂತೆ ಸೂಚಿಸಲಾಗಿತ್ತು. ಅವರಿಂದಲೂ ಪ್ರತಿಕ್ರಿಯೆ ಬಂದಿಲ್ಲ. ಎರಡೂ ವಿಭಾಗಗಳ ಮುಖ್ಯ ಎಂಜಿನಿಯರ್‌ಗಳೂ ಗುತ್ತಿಗೆದಾರರ ಜೊತೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ’ ಎಂದು ಪತ್ರದಲ್ಲಿ ಮೇಯರ್‌ ಆರೋಪಿಸಿದ್ದಾರೆ.

ಗುತ್ತಿಗೆದಾರರು ಸುಳ್ಳು ದಾಖಲೆ ಸಲ್ಲಿಸಿ ಕಾಮಗಾರಿ ಗುತ್ತಿಗೆ ಪಡೆಯುವ ವಿಚಾರ ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆ ಯಲ್ಲೂ ಚರ್ಚೆಯಾಗಿತ್ತು. ಬಿಬಿಎಂಪಿಯ ಎಂಜಿನಿಯರ್‌ಗಳು ದಾಖಲೆಗಳನ್ನು ಪರಿಶೀಲನೆ ನಡೆಸದಿರುವ ಬಗ್ಗೆ ಮೇಯರ್‌ ಹಾಗೂ ಕೆಲವು ಪಾಲಿಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

ಎಂಜಿನಿಯರ್‌ಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಇಂತಹ ಕೃತ್ಯ ನಡೆಸುತ್ತಿರುವ ಆರೋಪ ವ್ಯಕ್ತವಾಗಿತ್ತು. ಅಕ್ರಮ ಎಸಗುವ ಎಂಜಿನಿಯರ್‌ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಕೌನ್ಸಿಲ್‌ ಸಭೆಯಲ್ಲಿ ಒತ್ತಾಯಿಸಲಾಗಿತ್ತು.

ಅಕ್ರಮವಾಗಿ ಗುತ್ತಿಗೆ ನೀಡಿದ ಪ್ರಕರಣಗಳು

ಕಾಮಗಾರಿ; ಹೊಣೆ ಹೊತ್ತ ಎಂಜಿನಿಯರ್‌; ಗುತ್ತಿಗೆದಾರ; ನೀಡಿರುವ ತಪ್ಪು ಮಾಹಿತಿ (ಮೇಯರ್‌ ಪತ್ರದಲ್ಲಿರುವ ಪ್ರಕಾರ)

1) ಆರ್‌.ಆರ್‌.ನಗರ ವ್ಯಾಪ್ತಿಯಲ್ಲಿ ಗ್ರೇಡ್‌ ಸಪರೇಟರ್‌ ನಿರ್ಮಾಣ; ರಸ್ತೆಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಮತ್ತು ಆರ್.ಆರ್‌.ನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌; ಎ.ಅಭಿಜಿತ್‌; ಟೆಂಡರ್‌ನಲ್ಲಿ ತಾಂತ್ರಿಕ ಅರ್ಹತೆ ಪಡೆಯಲು ₹ 11.20 ಕೋಟಿ ಮೊತ್ತದ ಇದೇ ರೀತಿಯ ಗ್ರೇಡ್‌ ಸೆಪರೇಟರ್‌ ನಿರ್ಮಿಸಿರುವ ಅನುಭವ ಅಗತ್ಯ. ಗುತ್ತಿಗೆದಾರರು ಕಲಬುರ್ಗಿ ವಿಭಾಗದಲ್ಲಿ ಲೋಕೋಪಯೋಗಿ ಇಲಾಖೆಯಡಿ ₹16.09 ಕೋಟಿ ವೆಚ್ಚದಲ್ಲಿ ಇಂತಹದ್ದೇ ಕಾಮಗಾರಿ ನಡೆಸಿದ್ದಾಗಿ ನಕಲಿ ದಾಖಲೆ ನೀಡಿದ್ದರು. ಅವರು ನಮೂದಿಸಿದ ಕಾಮಗಾರಿಯನ್ನು ಯಂಕಪ್ಪ ಸಿ.ತಣಕೆದಾರ್‌ ಎಂಬ ಗುತ್ತಿಗೆದಾರರು ₹1.25 ಕೋಟಿ ವೆಚ್ಚದಲ್ಲಿ ನಡೆಸಿದ್ದರು.

ಯಲಹಂಕ ವಲಯದಲ್ಲಿ ಮುಖ್ಯರಸ್ತೆ ಮತ್ತು ಉಪಮುಖ್ಯ ರಸ್ತೆಗಳ ಪಕ್ಕದ ಪಾದಚಾರಿ ಮಾರ್ಗ ಮತ್ತು ಚರಂಡಿ ಅಭಿವೃದ್ಧಿ ಹಾಗೂ ಡಾಂಬರೀಕರಣ; ಯಲಹಂಕ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌; ಯೋಗೇಶ (ನಂದಿ ಕನ್ಸ್ಟ್ರಕ್ಷನ್‌); ಈ ಟೆ೦ಡರ್‌ನಲ್ಲಿ ತಾಂತ್ರಿಕ ಅರ್ಹತೆ ಪಡೆಯಲು ₹8.80 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಬೇಕಿತ್ತು. ಗುತ್ತಿಗೆದಾರರು ಕೆಂಗೇರಿ ವಿಭಾಗದಲ್ಲಿ ₹ 8.98 ಕೋಟಿ ವೆಚ್ಚದ ಕಾಮಗಾರಿ ನಡೆಸಿದ ದಾಖಲೆ ನೀಡಿದ್ದರು. ಆ ಕಾಮಗಾರಿಯ ವೆಚ್ಚ ₹ 7.55 ಕೋಟಿ ಮಾತ್ರ. ಗುತ್ತಿಗೆದಾರರು ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನೂ ತಿದ್ದಿದ್ದಾರೆ.

2) ರಾಜಕಾಲುವೆ ಶಾಖೆಯಲ್ಲಿ ನವ ನಗರೋತ್ಥಾನ ಯೋಜನೆಯಡಿಯ ₹ 168.28 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು; ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್‌; ಎ.ಚನ್ನಾರೆಡ್ಡಿ (ಎಸಿಆರ್‌ ಪ್ರಾಜೆಕ್ಟ್‌); ತಾಂತ್ರಿಕ ಅರ್ಹತೆ ಪಡೆಯಲು ಟಿಂಡರ್‌ ಮೊತ್ತದ ಶೇ 50 ರಷ್ಟು ಮೊತ್ತದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿರುವ ಪೂರ್ವಾನುಭವ ಅಗತ್ಯವಿತ್ತು. ಗುತ್ತಿಗೆದಾರರು ₹ 14.92 ಕೋಟಿಯ ಕಾಮಗಾರಿ ನಡೆಸಿದ ದಾಖಲೆ ನೀಡಿದ್ದರು. ಆದರೆ, ಅದು ರಾಜಕಾಲುವೆ ಕಾಮಗಾರಿಯ ಬದಲು ರಸ್ತೆ ಅಭಿವೃದ್ಧಿ ಕಾಮಗಾರಿಯದಾಗಿತ್ತು.

3) ರಾಜಕಾಲುವೆ ಶಾಖೆಯಲ್ಲಿ ನವ ನಗರೋತ್ಥಾನ ಯೋಜನೆಯಡಿಯ ₹ 168.28 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು; ರಾಜಕಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌; ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಪ್ರೈ.ಲಿ.ಸಂಸ್ಥೆ; ಗುತ್ತಿಗೆ ಮೊತ್ತಕ್ಕಿಂತ ಹೆಚ್ಚು ಬಿಡ್‌ ಸಾಮರ್ಥ್ಯ ಹೊಂದಿರಬೇಕೆಂಬ ಷರತ್ತನ್ನು ಉಲ್ಲಂಘಿಸಲಾಗಿದೆ. ಗುತ್ತಿಗೆದಾರ ಸಂಸ್ಥೆ ₹ 263.79 ಕೋಟಿ ಬಿಡ್‌ ಸಾಮರ್ಥ್ಯವಿದೆ ಎಂದು ಹೇಳಿಕೊಂಡಿತ್ತು. ಸಂಸ್ಥೆ ₹ 472.32 ಕೋಟಿ ವೆಚ್ಚದ ಕಾಮಗಾರಿ ವಹಿಸಿಕೊಂಡ ಬಗ್ಗೆಯೂ ಉಲ್ಲೇಖಿಸಿತ್ತು. ಆದರೆ, ಈ ಸಂಸ್ಥೆ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಲ್ಲಿ ₹ 594.38 ಕೋಟಿ ವೆಚ್ಚದ ಕಾಮಗಾರಿ ವಹಿಸಿಕೊಂಡಿದ್ದನ್ನು ಮರೆಮಾಚಿತ್ತು. ಇದು ಕೂಡಾ ಅಕ್ರಮ.

4) ವಿವಿಧ ಅಭಿವೃದ್ಧಿ ಕಾಮಗಾರಿಗಳು; ಮಹದೇವಪುರ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್; ವಿಶ್ವನಾಥ್‌ ಕೆ.ಜೆ; ತಾಂತ್ರಿಕ ಅರ್ಹತೆ ಪಡೆಯಲು ₹ 19 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಬೇಕಿತ್ತು. ದಾವಣಗೆರೆ ಯೋಜನಾ ವಿಭಾಗದಲ್ಲಿ ₹15.82 ಕೋಟಿ ವೆಚ್ಚದ ಕಾಮಗಾರಿ ನಡೆಸಿದ ದಾಖಲೆಯನ್ನು ಇ–ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ಗೆ ಗುತ್ತಿಗೆದಾರರು ಮೊದಲು ಅಪ್‌ಲೋಡ್‌ ಮಾಡಿದ್ದರು. ಬಳಿಕ ಆ ಕಾಮಗಾರಿಯನ್ನು ₹ 19.14 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾಗಿ ತಿದ್ದುಪಡಿ ಪತ್ರ ನೀಡಿದ್ದರು. ಈ ಬಗ್ಗೆ ಕಾರ್ಯಪಾಲಕ ಎಂಜಿನಿಯರ್‌ ದಾವಣಗೆರೆ ವಿಭಾಗದವರಲ್ಲಿ ಪರಿಶೀಲನೆ ನಡೆಸಿಲ್ಲ. ಗುತ್ತಿಗೆದಾರರು ತಮ್ಮ ಒಟ್ಟು ವಹಿವಾಟಿನ ಬಗ್ಗೆಯೂ ಸುಳ್ಳು ದಾಖಲೆ ನೀಡಿದ್ದರು.

*ಬೇಗೂರು ರಸ್ತೆ ವಿಸ್ತರಣೆ ಕಾಮಗಾರಿ; ಕಾರ್ಯಪಾಲಕ ಎಂಜಿನಿಯರ್‌, ರಸ್ತೆ ಮೂಲಸೌಕರ್ಯ ವಿಭಾಗದ ರಸ್ತೆ ವಿಸ್ತರಣೆ ಶಾಖೆ; ಎ.ಚನ್ನಾರೆಡ್ಡಿ; ಹೆವಿಡ್ಯೂಟಿ ಕಾಬಲ್‌ ಸ್ಟೋನ್‌ ಹಾಗೂ ಎಚ್‌ಡಿಪಿಇ ಕೊಳವೆ ಅಳವಡಿಕೆ ಸಂಬಂಧ ತಪ್ಪು ಮಾಹಿತಿ ನೀಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT