ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಕ್ಕೆ ಬೀಗ

ಮೂರು ಸ್ಕ್ಯಾನಿಂಗ್ ಉಪಕರಣಗಳು ಮುಟ್ಟುಗೋಲು
Last Updated 4 ಸೆಪ್ಟೆಂಬರ್ 2021, 21:47 IST
ಅಕ್ಷರ ಗಾತ್ರ

ಬೆಂಗಳೂರು:ಹೊಸೂರು ರಸ್ತೆಯ ರೂಪೇನ ಅಗ್ರಹಾರದಲ್ಲಿರುವ ಅಸ್ವದ್ ಆಸ್ಪತ್ರೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಸ್ಕ್ಯಾನಿಂಗ್ ಕೇಂದ್ರವನ್ನು ಮುಚ್ಚಿ,ಮೂರು ಸ್ಕ್ಯಾನಿಂಗ್ ಉಪಕರಣಗಳನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ.

ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆಯ ಅನ್ವಯ ಬೆಂಗಳೂರು ನಗರ ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರು ಆಸ್ಪತ್ರೆಗೆ ಭೇಟಿನೀಡಿ, ತಪಾಸಣೆ ನಡೆಸಿದರು. ಈ ವೇಳೆ ಅನಧಿಕೃತವಾಗಿ ಕೇಂದ್ರವನ್ನು ನಡೆಸಲಾಗುತ್ತಿದೆ ಎನ್ನುವುದು ದೃಢಪಟ್ಟಿದೆ.

‘2018ರಲ್ಲಿಯೇ ಕೇಂದ್ರದ ಸ್ಕ್ಯಾನಿಂಗ್ ನೋಂದಣಿ ಅವಧಿ ಮುಗಿದಿದೆ. ಸ್ಕ್ಯಾನಿಂಗ್ ಮಾಡಿಸಲು ಅನುಸರಿಸಬೇಕಾದ ಪ್ರಕ್ರಿಯೆಗಳಲ್ಲಿಯೂ ಲೋಪದೋಷಗಳು ಕಂಡುಬಂದಿವೆ’ ಎಂದುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದರು.

‘ಆಸ್ಪತ್ರೆ ಶುಚಿತ್ವದಲ್ಲೂ ಹಿಂದುಳಿದಿದ್ದು, ಕಿರಿದಾದ ಕೊಠಡಿಯಲ್ಲಿ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಸ್ಕ್ಯಾನಿಂಗ್‌ಗೆ ಸಂಬಂಧಿಸಿದಂತೆ ನೋಂದಣಿ ಕೂಡ ನಿರ್ವಹಿಸದಿರುವುದು ಕಂಡುಬಂದಿದೆ. ಕೆಪಿಎಂಇ ನೋಂದಣಿ ಅವಧಿ ಮುಗಿದಿದ್ದು, ಭ್ರೂಣ ಹತ್ಯೆ ಹಾಗೂ ಭ್ರೂಣಲಿಂಗ ಪತ್ತೆ ಕುರಿತು ಆವರಣದಲ್ಲಿ ಇರಬೇಕಾದ ಮಾಹಿತಿ ಭಿತ್ತಿಪತ್ರಗಳ‌ನ್ನೂ ಸಮರ್ಪಕವಾಗಿ ಪ್ರದರ್ಶಿಸಿಲ್ಲ. ಸ್ಕ್ಯಾನಿಂಗ್ ನೋಂದಣಿ ಪ್ರಮಾಣಪತ್ರ ಹಾಗೂ ವೈದ್ಯರ ಮಾಹಿತಿಗಳನ್ನು ಸರಿಯಾಗಿ ನಮೂದಿಸಿಲ್ಲ. ಹಾಗಾಗಿ, ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಿ,ಸಮಿತಿಯ ಸದಸ್ಯರ ಅಭಿಪ್ರಾಯದಂತೆ ಸ್ಕ್ಯಾನಿಂಗ್ ಕೇಂದ್ರವನ್ನು ಮುಚ್ಚಲಾಗಿದೆ’ ಎಂದರು.

ತಪಾಸಣಾ ಭೇಟಿಯಲ್ಲಿ ಸಮಿತಿ ಸದಸ್ಯರಾದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚನ್ನಕೃಷ್ಣ, ಕೆ.ಆರ್. ಪುರ ಸಾರ್ವಜನಿಕ ಆಸ್ಪತ್ರೆಯ ವಿಕಿರಣ ತಜ್ಞೆ ಡಾ. ಲೀಲಾ, ಡಾ. ವಿಜಯ್ ಸಾರಥಿ, ಡಾ. ಶಿಲ್ಪಾ, ಕೆ.ಸಿ. ಜನರಲ್ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ. ಶೀಲಾಮಾನೆ, ಡಾ. ಚೇತನ್, ವಕೀಲರಾದ ಸುಮನಾ ಬಳಿಗಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT