ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿಗೆ ಸಾಲ ಪಡೆದು ಶುಲ್ಕ ಕಟ್ಟಿ!: ಖಾಸಗಿ ಶಾಲೆಗಳ ಒತ್ತಡ

ಸಾಲ ನೀಡುವ ಹಣಕಾಸು ಸಂಸ್ಥೆಗಳ ಜೊತೆ ಖಾಸಗಿ ಶಾಲೆಯ ಒಪ್ಪಂದ
Last Updated 12 ಜೂನ್ 2021, 1:52 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ನಿಂದ ಈಗಾಗಲೇ ಸಂಕಷ್ಟದಲ್ಲಿರುವ ಪೋಷಕರಿಗೆ ಈಗಲೇ ಬೋಧನಾ ಶುಲ್ಕ ಪಾವತಿಸಿ, ಹಣ ಇರದಿದ್ದರೆ ಬಡ್ಡಿಗೆ ಸಾಲ ತೆಗೆದಾದರೂ ಕೊಡಿ ಎಂದು ನಗರದ ಖಾಸಗಿ ಶಾಲೆಗಳು ಒತ್ತಡ ಹೇರಲು ಆರಂಭಿಸಿವೆ. ಅದರಲ್ಲಿಯೂ, ಪ್ರತಿಷ್ಠಿತ ಶಾಲೆಯೊಂದು ಪೋಷಕರಿಗೆ ಫೈನಾನ್ಸ್‌ ಸಂಸ್ಥೆಗಳಿಂದ ಬಡ್ಡಿಗೆ ಸಾಲ ಕೊಡಿಸಿ ಆ ಸಾಲದ ಮೊತ್ತವನ್ನು ಶುಲ್ಕಕ್ಕೆ ಜಮಾ ಮಾಡಿಕೊಳ್ಳಲು ಮುಂದಾಗಿದೆ.

ನಗರದ ಆರ್.ಟಿ. ನಗರದಲ್ಲಿರುವ ಖಾಸಗಿ ಶಾಲೆಯೊಂದು ಇಂತಹ ಕೆಲಸಕ್ಕೆ ಕೈ ಹಾಕಿದೆ. ಹೀಗೆ ಸಾಲ ಪಡೆಯುವ ಪೋಷಕರಿಗೆ ಆರು ತಿಂಗಳ ವರೆಗೆ ಬಡ್ಡಿ ವಿನಾಯಿತಿಯಂತಹ ಕೊಡುಗೆಗಳನ್ನೂ ನೀಡಲಾಗುತ್ತಿದೆ. ಆದರೆ, ಶುಲ್ಕ ಮೊತ್ತದಷ್ಟು ಸಾಲ ಬಿಟ್ಟು ಒಂದು ರೂಪಾಯಿ ಕೂಡ ಹೆಚ್ಚಿಗೆ ನೀಡುವುದಿಲ್ಲ !

ಆರು ತಿಂಗಳ ಬಳಿಕ 9 ತಿಂಗಳ ವರೆಗೆ ಶೇ 2ರಷ್ಟು ಬಡ್ಡಿ, 11 ತಿಂಗಳ ವರೆಗೆ ಶೇ 3.5ರಷ್ಟು ಬಡ್ಡಿದರದಲ್ಲಿ ಸಾಲ ತೀರಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಕೆಲವು ಪೋಷಕರು ಆರೋಪಿಸಿದ್ದಾರೆ.

ಟಿಸಿ ಒತ್ತೆ:

ಒಂದು ವೇಳೆ ಪೋಷಕರಿಗೆ ಸಾಲ ತೀರಿಸಲಾಗದಿದ್ದರೆ ಅವರ ಮಕ್ಕಳ ವರ್ಗಾವಣೆ ಪ್ರಮಾಣ ಪತ್ರವನ್ನು (ಟಿಸಿ) ಶಾಲೆಯವರು ಅಡ ಇಟ್ಟುಕೊಳ್ಳತ್ತಿದ್ದಾರೆ. ಸಾಲ ನೀಡುವಾಗ ಪೋಷಕರ ಬ್ಯಾಂಕ್ ಅಕೌಂಟ್‌ನ ಚೆಕ್‌ಗಳನ್ನು ಪಡೆಯಲಾಗುತ್ತಿದ್ದು, ಸಾಲ ತೀರಿಸದಿದ್ದರೆ ಚೆಕ್‌ಬೌನ್ಸ್‌ ಪ್ರಕರಣ ದಾಖಲಿಸುವ ಬೆದರಿಕೆ ಒಡ್ಡಲಾಗುತ್ತಿದೆ ಎಂದೂ ಕೆಲವು ಪೋಷಕರು ಆರೋಪ ಮಾಡಿದ್ದಾರೆ.

ಆದೇಶಕ್ಕೆ ಕಿಮ್ಮತ್ತಿಲ್ಲ:

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿರವ 2021-22ನೇ ಸಾಲಿನ ವೇಳಾಪಟ್ಟಿ ಪ್ರಕಾರ, ಜೂನ್‌ 15ರಿಂದ ಶಾಲಾ ದಾಖಲಾತಿಯನ್ನು, ಜುಲೈ 1ರಿಂದ ಆನ್‌ಲೈನ್ ತರಗತಿಗಳನ್ನು ಆರಂಭಿಸಬೇಕು. ಆದರೆ, ನಿಯಮ ಉಲ್ಲಂಘಿಸಿ ಈಗಾಗಲೇ ಹಲವು ಶಾಲೆಗಳು ಶುಲ್ಕ ಪಾವತಿಸಿ ಮಕ್ಕಳ ದಾಖಲಾತಿ ಮಾಡಿಕೊಳ್ಳುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿವೆ.

ಆನ್‌ಲೈನ್ ತರಗತಿಗಳನ್ನೂ ಆರಂಭಿಸಿರುವ ಕೆಲವು ಶಾಲೆಗಳು ಶುಲ್ಕ ಕಟ್ಟಿ ದಾಖಲಾತಿ ಮಾಡದಿದ್ದರೆ ಮತ್ತೆ ಆನ್‌ಲೈನ್ ತರಗತಿ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡುತ್ತಿವೆ. ಸರ್ಕಾರದ ಕಳೆದ ವರ್ಷದ ಆದೇಶದಂತೆ ಶೇ 70ರಷ್ಟು ಶುಲ್ಕ ಕಟ್ಟಲು ಕೂಡ ಒಪ್ಪುತ್ತಿಲ್ಲ. ಶುಲ್ಕ ವಿಚಾರ ಕೋರ್ಟ್‌ನಲ್ಲಿರುವುದರಿಂದ ನಮ್ಮ ಆಡಳಿತ ಮಂಡಳಿ ನಿರ್ಧರಿಸುವಷ್ಟು ಪೂರ್ಣ ಶುಲ್ಕ ಕಟ್ಟಬೇಕು. ಕಳೆದ ವರ್ಷದ್ದೂ ಬಾಕಿ ಶುಲ್ಕ ಪಾವತಿಸಬೇಕೆಂದು ಒತ್ತಾಯಿಸುತ್ತಿವೆ ಎಂದು ಪೋಷಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT