ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಉಪಗ್ರಹ ತಂತ್ರಜ್ಞಾನ

Last Updated 7 ಜನವರಿ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು:‘ದೇಶದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ನೀತಿಗಳನ್ನು ರೂಪಿಸಲು ಅಗತ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ರಾಜಸ್ಥಾನದಲ್ಲಿ ಈಗಾಗಲೇ ಇದನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ರಾಜಸ್ಥಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮುಗ್ದಾ ಸಿನ್ಹಾ ಅವರು ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಮುಕ್ತಾಯವಾದ ‘107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌’ನಲ್ಲಿ ಅವರು ಈ ಮಾಹಿತಿ ನೀಡಿದರು. ಗ್ರಾಮೀಣ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ವಿಷಯ ಕುರಿತ ಗೋಷ್ಠಿಯಲ್ಲಿ, ‘ನೀತಿ ರೂಪಣೆ ಮೂಲಕ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

‘ರಾಜಸ್ಥಾನದಲ್ಲಿ ಈಗ ಬಹುತೇಕ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಕ್ರೋಢೀಕರಿಸುವ ಮತ್ತು ವಿಶ್ಲೇಷಿಸುವ ಸೇವೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮಾಡುತ್ತಿದೆ. ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪ್ರತಿ ತಿಂಗಳೂ ಒಂದೆಡೆ ಸಭೆ ಸೇರುತ್ತಾರೆ. ಆ ಸಭೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಬಂದು ಚರ್ಚೆ ನಡೆಸುತ್ತಾರೆ. ನೀತಿ ರೂಪಣೆಯಲ್ಲಿ ತಂತ್ರಜ್ಞಾನ ಬಳಕೆಗೆ ಇದರಿಂದ ನೆರವಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

‘ಪರಿಸರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ (ಎನ್‌ಜಿಟಿ) ರಾಜಸ್ಥಾನದ ವಿವಿಧ ಇಲಾಖೆಗಳ ವಿರುದ್ಧ 15 ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಸರ್ಕಾರವು ಸಲ್ಲಿಸುತ್ತಿರುವ ವರದಿ ಮತ್ತು ದತ್ತಾಂಶಗಳನ್ನು ಉಪಗ್ರಹ ಚಿತ್ರಗಳ ಮೂಲಕವೇ ಕ್ರೋಢೀಕರಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹೊರೆ ಕಡಿಮೆಯಾಗಿದೆ’ ಎಂದು ಅವರು ವಿವರಿಸಿದರು.

‘ರಾಜಸ್ಥಾನದ ಹಲವು ಕುಗ್ರಾಮಗಳ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಲ್ಲ. ಈ ಶಾಲೆಗಳಲ್ಲಿ ಉಪಗ್ರಹ ಆಧರಿತ ಬೋಧನಾ ಕ್ರಮವನ್ನು ಜಾರಿಗೆ ತರುವ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಇದಕ್ಕಾಗಿ 600 ಗಂಟೆ ಪ್ರಸಾರ ಮಾಡಬಹುದಾದ ಪಠ್ಯಕ್ರಮ ವಿಡಿಯೊವನ್ನು ಸಿದ್ಧಪಡಿಸಲಾಗಿದೆ’ ಎಂದು ಅವರು ವಿವರಿಸಿದರು.

ಮೂತ್ರನಾಳದ ಸೋಂಕು ಪತ್ತೆಗೆ ಅಗ್ಗದ ಕಿಟ್‌

‘ಭಾರತದ ಬಹುತೇಕ ಮಹಿಳೆಯರಿಗೆ, ತಾವುಮೂತ್ರನಾಳದ ಸೋಂಕಿಗೆ ತುತ್ತಾಗಿರುವುದರ ಅರಿವು ಇರುವುದಿಲ್ಲ. ಸ್ವತಂತ್ರ ಬಂದು 70 ವರ್ಷಗಳು ಕಳೆದರೂ ಈ ಸಮಸ್ಯೆಯನ್ನು ನಿವಾರಿಸಲು ನಮಗೆ ಸಾಧ್ಯವಾಗಿಲ್ಲ’ ಎಂದು ಮುಗ್ದಾ ಸಿನ್ಹಾ ಅವರು ಕಳವಳ ವ್ಯಕ್ತಪಡಿಸಿದರು.

‘ಭಾರತದಲ್ಲಿ ಮೂತ್ರನಾಳದ ಸೋಂಕಿನ ಪತ್ತೆಗೆ ತೀರಾ ಹಳೆಯ ವಿಧಾನದ ಪರೀಕ್ಷೆಯನ್ನೇ ಅವಲಂಬಿಸಲಾಗಿದೆ. ಈ ಪರೀಕ್ಷೆಗೆ ಕನಿಷ್ಠ ₹ 650 ವೆಚ್ಚವಾಗುತ್ತದೆ. ಜತೆಗೆ ಪರೀಕ್ಷೆಯ ವರದಿ ದೊರೆಯಲು 2ರಿಂದ 4 ದಿನ ಬೇಕು. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅತ್ಯಾಧುನಿಕ ವಿಧಾನವನ್ನು ಬಳಸಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಭಾರತದಲ್ಲಿ ಈ ಸೋಂಕಿನ ಪತ್ತೆಗೆ, ಮೂತ್ರವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ನೀಡಬೇಕಿದೆ. ಆದರೆ ವಿದೇಶಗಳಲ್ಲಿ, ಗರ್ಭ ಪತ್ತೆ ಕಿಟ್‌ನಲ್ಲಿ ಪರೀಕ್ಷೆ ನಡೆಸುವಂತೆಯೇ ಮೂತ್ರನಾಳದ ಸೋಂಕಿನ ಪತ್ತೆ ಕಿಟ್ ಬಳಸಿ ಪರೀಕ್ಷೆ ನಡೆಸಲಾಗುತ್ತಿದೆ. ಈ ವಿಧಾನದ ಮೂಲಕ ಕೇವಲ 2 ಗಂಟೆಗಳಲ್ಲಿ, ಫಲಿತಾಂಶ ಪಡೆಯಬಹುದು’ ಎಂದು ಅವರು ವಿವರಿಸಿದರು.

‘ಈ ತಂತ್ರಜ್ಞಾನವನ್ನು ಭಾರತದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ. ಈ ಕಿಟ್‌ ಇದೇ ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇದರ ಬೆಲೆ ₹ 150 ಇರಲಿದೆ’ ಎಂದು ಅವರು ವಿವರಿಸಿದರು.

***

ನೀತಿ ಮತ್ತು ಯೋಜನೆ ರೂಪಿಸುವಲ್ಲಿ ಅಭಿವೃದ್ಧಿ ರಾಷ್ಟ್ರಗಳು ಉಪಗ್ರಹ ಆಧರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿವೆ. ಇದರಲ್ಲಿ ನಾವು ಸುಮಾರು 30 ವರ್ಷ ಹಿಂದೆ ಉಳಿದಿದ್ದೇವೆ
-ಮುಗ್ದಾ ಸಿನ್ಹಾ, ರಾಜಸ್ಥಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT