ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಕ್ಕೆ ಧರ್ಮ, ಬಣ್ಣವಿಲ್ಲ: ಸಿ.ಎನ್. ಆರ್. ರಾವ್ ಬಣ್ಣನೆ

Last Updated 4 ಜನವರಿ 2020, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಜ್ಞಾನಕ್ಕೆ ಬಣ್ಣಗಳಿಲ್ಲ. ಅದು ಧರ್ಮಾತೀತವಾದದ್ದು. ಬದ್ಧತೆ ಮತ್ತು ತಾಳ್ಮೆ ಇದ್ದರೆ ಅನ್ವೇಷಣೆ ಸುಲಭ. ನೀವು ಉತ್ತಮ ವಿಜ್ಞಾನಿಗಳಾಗುತ್ತೀರಿ ಎಂಬ ಆಶಾಭಾವ ನನ್ನದು. ಈ ಹೊಸ ದಶಕದಲ್ಲಿ ಅದನ್ನು ಸಾಧಿಸಿ’

ವಿಜ್ಞಾನ ಕಾಂಗ್ರೆಸ್‌ ಸಮಾವೇಶದಲ್ಲಿ ಹಿರಿಯ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರು ಹೀಗೆ ಹೇಳುತ್ತಿದ್ದಂತೆ ಮುಂದೆ ಕುಳಿತಿದ್ದ ಸಾವಿರಾರು ವಿದ್ಯಾರ್ಥಿಗಳಿಂದ ಚಪ್ಪಾಳೆ ಹಾಗೂ ಸಂಭ್ರಮ ಮುಗಿಲುಮುಟ್ಟಿತ್ತು.

‘ನಾನು ವಿಜ್ಞಾನಿಯಾಗಿ 71 ವರ್ಷ ಪೂರೈಸಿದ್ದೇನೆ. ಅಧ್ಯಾಪಕನಾಗಿ 61 ವರ್ಷ ಪೂರೈಸಿದ್ದೇನೆ. ಈ ಸಾಧನೆಗೆ ನಾನು 16ನೇ ವಯಸ್ಸಿನಲ್ಲಿಯೇ ಮಾಡಿಕೊಂಡ ತಯಾರಿ ಹಾಗೂ ನನ್ನಲ್ಲಿದ್ದ ಕುತೂಹಲಗಳನ್ನು ಭಟ್ಟಿ ಇಳಿಸಿರುವುದೇ ಕಾರಣ’ ಎಂದು ಹೇಳಿದರು.

‘ವಿಜ್ಞಾನ ಜೀವನದ ಭಾಗವಾಗ ಬೇಕಾದರೆ ಅದನ್ನು ಅದಮ್ಯವಾಗಿ ಪ್ರೀತಿಸಬೇಕು. ಆಗ ಅದಕ್ಕೊಂದು ರೂಪ ಸಿಗುತ್ತದೆ. ನಾವು ಅಂದುಕೊಂಡಿ ದ್ದನ್ನು ಸಾಕಾರಗೊಳಿಸಲು ಸಾಧ್ಯವಾಗು ತ್ತದೆ. ಇಲ್ಲದಿದ್ದರೆ ನಿರಾಶೆ ಹಾಗೂ ಹತಾಶೆ ನಮ್ಮನ್ನು ಕಾಡುತ್ತದೆ’ ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಶೋಧನೆಗಳಾಗುತ್ತಿವೆ. ಆದರೆ, ನಗರ ಪ್ರದೇಶಕ್ಕೆ ಬಂದಾಗ ಅದೇ ಸಂಶೋಧನೆಗಳು ಸೋಲು ಕಾಣುತ್ತವೆ. ಅದೇಕೆ ಎಂಬುದೇ ನನಗೆ ಅರ್ಥವಾಗು ತ್ತಿಲ್ಲ. ಕಡಿಮೆ ಮೂಲಸೌಕರ್ಯದಲ್ಲಿ ಮಾಡುವ ಸಾಧನೆಗೆ ನಗರದಲ್ಲಿ ನೀರು ಎರೆಯಬೇಕು’ ಎಂದು ಮಾರ್ಮಿಕವಾಗಿಯೇ ಎಚ್ಚರಿಸಿದರು.

‘ಭಾರತದಲ್ಲಿ ಗಾಂಧಿ ಒಬ್ಬ ಮಹಾನ್ ಸಂಶೋಧಕ. ಗಾಂಧಿ ಹೋರಾಟಗಾರ ಮಾತ್ರ ಎಂದೆಣಿಸಿದರೆ ಅದು ಪೂರ್ತಿ ಸುಳ್ಳು. ಒಬ್ಬನೇ ವ್ಯಕ್ತಿ ಬ್ರಿಟಿಷ್ ಸಾಮ್ರಾಜ್ಯ ಉರುಳಿಸಿದರು. ಅವರು ಕಡಿಮೆ ಮೂಲಸೌಕರ್ಯ ಇಟ್ಟುಕೊಂಡು ಹೋರಾಟ ಮಾಡಿದರು. ಈಗ ಮೊಬೈಲ್‌ನಲ್ಲಿಯೇ ಎಲ್ಲವೂ ಇವೆ. ಇನ್ನೇಕೆ ತಡ. ಮಾತು ಕಡಿಮೆ ಮಾಡಿ. ಮನೆಯ ಹಿತ್ತಲಿಗೆ ಹೋಗಿ ಮೂಲೆಯಲ್ಲಿ ಯಾವ ಗಿಡ ಹಾಕಿದರೆ ಹೇಗೆ ಬೆಳೆಯಬಹುದು ಎಂಬುದರ ಸಂಶೋಧನೆ ಮಾಡಿ. ಆ ಸಂಶೋಧನೆಯೇ ನಿಮ್ಮನ್ನು ಚಂದ್ರನಲ್ಲಿಗೆ ಕರೆದುಕೊಂಡು ಹೋಗುತ್ತದೆ’ ಎಂದು ಸೂಚ್ಯವಾಗಿ ಹೇಳಿದರು.

‘ಮಕ್ಕಳೇ ಮನದಲ್ಲಿ ಹೊಳೆದ ಕಲ್ಪನೆಗಳನ್ನು ಬರೆಯಿರಿ. ವಿವಿಧ ನಿಯತ ಕಾಲಿಕೆಗಳಿಗೆ ಲೇಖನ ಬರೆಯುತ್ತಲೇ ಇರಿ. ಸಾಕಷ್ಟು ಓದಿ. ಒಂದು ದಿನ ಅವುಗಳು ಕೈಹಿಡಿಯುತ್ತವೆ’ ಎಂದು ತುಸು ಗಟ್ಟಿಯಾಗಿಯೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT