ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಹಗರಣ: ಕೂಡಲೇ ನಿರ್ಧಾರ ತಿಳಿಸಲು ಹೈಕೋರ್ಟ್ ನಿರ್ದೇಶನ

Last Updated 15 ಜನವರಿ 2021, 16:54 IST
ಅಕ್ಷರ ಗಾತ್ರ

ಬೆಂಗಳೂರು: ಬಹುಕೋಟಿ ಭೂ ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಲ್ಲಿಸಿರುವ ಪ್ರಸ್ತಾವನೆ ಸಂಬಂಧ ಒಂದು ತಿಂಗಳೊಳಗೆ ನಿರ್ಧಾರ ಕೈಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರು ಉತ್ತರ, ಪೂರ್ವ ಮತ್ತು ಯಲಹಂಕ ತಾಲ್ಲೂಕಿನಲ್ಲಿ ನಡೆದಿರುವ ಭೂಹಗರಣದ ಮೂಲ ದೂರುದಾರ ಕೃಷ್ಣರಾಮಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿದೆ.

‘ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಭ್ರಷ್ಟಾಚಾರ ತಡೆ(ಪಿ.ಸಿ) ಕಾಯ್ದೆಯ ಸೆಕ್ಷನ್ 17ಎ ಪ್ರಕಾರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಅದರಂತೆ ‌2020ರ ನವೆಂಬರ್ 25 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ(ಡಿಪಿಎಆರ್) ಅನುಮತಿ ಕೋರಲಾಗಿದೆ’ ಎಂದು ಎಸಿಬಿ ಪರ ವಕೀಲರು ಮಾಹಿತಿ ನೀಡಿದರು.

ಅನುಮತಿ ಕೋರಿರುವ ಪ್ರಸ್ತಾವನೆ ಮುಖ್ಯಮಂತ್ರಿ ಬಳಿ ಇದೆ. ಕಾಯ್ದೆಯ ಪ್ರಕಾರ ಪ್ರಸ್ತಾವನೆ ಸಲ್ಲಿಸಿದ ಮೂರು ತಿಂಗಳ ಅವಧಿಯಲ್ಲಿ ಸರ್ಕಾರ ತನ್ನ ನಿರ್ಧಾರ ತೆಗೆದುಕೊಳ್ಳಬೇಕು. ಒಂದು ತಿಂಗಳ ಕಾಲ ವಿಸ್ತರಣೆಗೆ ಅವಕಾಶ ಇದೆ. ಆದರೆ, ಅದಕ್ಕೆ ಕಾರಣವನ್ನು ದಾಖಲಿಸಬೇಕಾಗುತ್ತದೆ. ‘ಆದರೂ, ಸರ್ಕಾರ ಮೂರು ತಿಂಗಳ ಅವಧಿ ಮುಗಿಯುವ ತನಕ ಕಾಯುವ ಅಗತ್ಯವಿಲ್ಲ. ಆದ್ದರಿಂದ ಒಂದು ತಿಂಗಳೊಳಗೆ ಈ ವಿಷಯದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು’ ಎಂದು ಪೀಠ ತಿಳಿಸಿತು.

ಬೆಂಗಳೂರು ಪೂರ್ವ, ಉತ್ತರ ಮತ್ತು ಯಲಹಂಕ ತಾಲ್ಲೂಕಿನಲ್ಲಿ 37 ಎಕರೆ ಸರ್ಕಾರಿ ಗೋಮಾಳವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾನೂನನ್ನು ಗಾಳಿಗೆ ತೂರಲಾಗಿದೆ ಎಂದು 2020ರ ಜುಲೈ 26ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಎನ್.ಮಂಜುನಾಥಪ್ರಸಾದ್ ವರದಿ ಸಲ್ಲಿಸಿದ್ದರು. ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಕೆ.ರಂಗನಾಥ್ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT