ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಫಲ್‌’ನಿಂದ ನವೋದ್ಯಮಗಳಿಗೆ ಉತ್ತೇಜನ: ಐಟಿಬಿಟಿ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ

Published 28 ಆಗಸ್ಟ್ 2024, 16:16 IST
Last Updated 28 ಆಗಸ್ಟ್ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಆರಂಭವಾದ ಸೆಮಿಕಂಡಕ್ಟರ್‌ ಫ್ಯಾಬ್‌ಲೆಸ್‌ ಆಕ್ಸಿಲರೇಟರ್‌ ಲ್ಯಾಬ್‌ (ಎಸ್‌ಎಫ್‌ಎಎಲ್‌–ಸಫಲ್‌)– ಉತ್ಕೃಷ್ಟತಾ ಕೇಂದ್ರವು 43 ನವೋದ್ಯಮಗಳ ಬೆಳವಣಿಗೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗಿದ್ದು, ನೂರಾರು ಕಂಪನಿಗಳ ಆರಂಭ ಹಾಗೂ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸೆಮಿಕಂಡಕ್ಟರ್‌ ಆಧಾರಿತ ನವೋದ್ಯಮಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಸಫಲ್‌ನಿಂದ, 95ಕ್ಕೂ ಹೆಚ್ಚು ಕಂಪನಿಗಳು ಪ್ರತ್ಯಕ್ಷ ಮತ್ತು ಪರೋಕ್ಷ ಫಲಾನುಭವಿಗಳಾಗಿವೆ. ಈ ಕಂಪನಿಗಳಿಂದ ಇಎಸ್‌ಡಿಎಂನಲ್ಲಿ (ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಆ್ಯಂಡ್‌ ಮ್ಯಾನುಫ್ಯಾಕ್ಚರಿಂಗ್‌) 800 ಉದ್ಯೋಗಗಳು ಸೃಷ್ಟಿಯಾಗಿವೆ’ ಎಂದರು.

‘ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಸಫಲ್‌, ಸೆಮಿಕಂಡಕ್ಟರ್‌ ಆಧಾರಿತ 200ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಉತ್ತೇಜನ ನೀಡಿದೆ. ಇದೊಂದು ವಿಶಿಷ್ಟ ಮಾದರಿಯಾಗಿದ್ದು, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳು ಈಗ ನಮ್ಮ ರಾಜ್ಯದ ಮಾದರಿಯನ್ನೇ ಅಳವಡಿಸಿಕೊಳ್ಳಲು ಮುಂದಾಗಿವೆ’ ಎಂದು ತಿಳಿಸಿದರು.

‘ಸಫಲ್‌ಗೆ ಸರ್ಕಾರ ಆರಂಭದಲ್ಲಿ ವೆಚ್ಚ ಮಾಡಿದ್ದು ₹21.56 ಕೋಟಿ. ಇದರಿಂದ ಪ್ರಯೋಜನ ಪಡೆದ ಕಂಪನಿಗಳಿಗೆ ₹114 ಕೋಟಿ ಹೂಡಿಕೆ ದೊರೆತಿದೆ. ಸಂಸ್ಥೆಯನ್ನು ಇನ್ನೂ ಐದು ವರ್ಷ ಮುಂದುವರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಇದೇ ವೇಳೆ ‘ಸಫಲ್’ನಿಂದ ವಿವಿಧ ರೀತಿಯಲ್ಲಿ ನೆರವು ಪಡೆದು, ಇಎಸ್‌ಡಿಎಂ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳೊಂದಿಗೆ ಸೆಮಿಕಂಡಕ್ಟರ್ ಚಿಪ್‌ಗಳನ್ನು ರೂಪಿಸಿದ ನವೋದ್ಯಮದ ಮುಖ್ಯಸ್ಥರು ತಮ್ಮ ಅನುಭವ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಐಟಿ–ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್‌ರೂಪ್ ಕೌರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT