ಬೆಂಗಳೂರು: ‘ಬೆಂಗಳೂರು ವಕೀಲರ ಸಂಘದ (ಎಎಬಿ) ಕ್ಷೇಮಾಭಿವೃದ್ಧಿಗೆ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಅವರು ನೀಡಿರುವ ಕೊಡುಗೆ ಅನನ್ಯ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಪ್ರಶಂಸಿಸಿದರು.
ಹೈಕೋರ್ಟ್ ನ ಹಿರಿಯ ವಕೀಲ ಕೆ.ಎನ್.ಪುಟ್ಟೇಗೌಡ ಅವರಿಗೆ, ‘ಬೆಂಗಳೂರು ವಕೀಲರ ಸಂಘ’ದ ವತಿಯಿಂದ ಬುಧವಾರ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬೆಂಗಳೂರು ವಕೀಲರ ಸಹಕಾರ ಸಂಘವನ್ನು ಹುಟ್ಟು ಹಾಕಿದವರಲ್ಲಿ ಪುಟ್ಟೇಗೌಡರೂ ಪ್ರಮುಖರು. ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಶ್ರೇಯಸ್ಸು ಅವರದು. ಒಂದು ಕಾಲದಲ್ಲಿ ವಕೀಲರ ಸಂಘ ಎಂದರೆ ಪುಟ್ಟೇಗೌಡ, ಪುಟ್ಟೇಗೌಡ ಎಂದರೆ ವಕೀಲರ ಸಂಘ ಎಂಬಂತಹ ದಿನಗಳಿದ್ದವು’ ಎಂದು ನ್ಯಾ. ಅರವಿಂದ ಕುಮಾರ್ ಸ್ಮರಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ‘ಕೆ.ಎನ್.ಪುಟ್ಟೇಗೌಡ ಅವರು ವಕೀಲರ ಸಮುದಾಯಕ್ಕೆ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಸಿಟಿ ಸಿವಿಲ್ ಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ವಕೀಲರಿಗಾಗಿ ಅನೇಕ ಸೌಲಭ್ಯಗಳು ಬೆಳಕು ಕಂಡಿವೆ’ ಎಂದರು.
ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ‘ಟಿ.ಎನ್. ಸೀತಾರಾಂ, ಬಿ.ಎಲ್. ಶಂಕರ್, ಕೆ.ಎನ್. ಪುಟ್ಟೇಗೌಡ ನಾವೆಲ್ಲಾ ಉತ್ತಮ ಗೆಳೆಯರು. ನಾನು ಮತ್ತು ಪುಟ್ಟೇಗೌಡ ಒಂದೇ ದಿನ ವಕೀಲ ವೃತ್ತಿಗೆ ನೋಂದಣಿ ಮಾಡಿಸಿದ್ದೆವು. ನಾನು ರಾಜಕೀಯದತ್ತ ಮುಖ ಮಾಡಿದೆ. ಪುಟ್ಟೇಗೌಡರು ವಕೀಲಿಕೆ ಮುಂದುವರಿಸಿದರು’ ಎಂದು ನೆನಪಿಸಿಕೊಂಡರು.
ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಎಂ.ಟಿ.ಹರೀಶ್, ಮಾಜಿ ಸಭಾಪತಿ ಬಿ.ಎಲ್. ಶಂಕರ್, ನಿರ್ದೇಶಕ ಟಿ.ಎನ್. ಸೀತಾರಾಂ ಹೈಕೋರ್ಟ್ ಹಿರಿ-ಕಿರಿಯ ಇದ್ದರು.
"ಬೆಂಗಳೂರು ವಕೀಲರ ಸಂಘ"ದ ವತಿಯಿಂದ ಮಾಜಿ ಅಧ್ಯಕ್ಷ ಹಿರಿಯ ವಕೀಲ ಕೆ.ಎನ್.ಪುಟ್ಟೇಗೌಡ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ ಬಲಕ್ಕೆ) ಸಂಘದ ಖಜಾಂಚಿ ಎಂ.ಟಿ.ಹರೀಶ್, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ರಾಜ್ಯ ವಕೀಲರ ಪರಿಷತ್ ಸದಸ್ಯ ಆರ್.ರಾಜಣ್ಣ, ಸಂಘದ ಪದಾಧಿಕಾರಿ ಸಿ.ಆರ್.ಮುನಿಯಪ್ಪ ಗೌಡ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.