ಬುಧವಾರ, ಅಕ್ಟೋಬರ್ 21, 2020
21 °C
ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ವೇಗ ನೀಡಲು ಮಹತ್ವದ ನಿರ್ಧಾರ

ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ: ಬಿಲ್‌ ಪಾವತಿಗೆ ಪ್ರತ್ಯೇಕ ವರ್ಗೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಮಗಾರಿಗಳ ಬಗ್ಗೆ ‘ಪ್ರಜಾವಾಣಿ’ ಪ್ರಕಟಿಸಿರುವ ‘ಕಾಮಗಾರಿಗೂ ಲಾಕ್‌ಡೌನ್‌’ ಸರಣಿ ವರದಿ ರಾಜ್ಯ ಸರ್ಕಾರದ ಕಣ್ತೆರೆಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲೂ ಈ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ.

ಕಾಮಗಾರಿಗಳು ಸ್ಥಗಿತಗೊಳ್ಳುವುದಕ್ಕೆ ನಿಜವಾದ ಕಾರಣಗಳೇನು ಎಂಬ ಬಗ್ಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಸಭೆಯಲ್ಲಿ ವಿವರಿಸಿದ್ದಾರೆ. ರಾಜ್ಯ ಸರ್ಕಾರದ ನಗರೋತ್ಥಾನ ಮತ್ತು ನವನಗರೋತ್ಥಾನ ಯೋಜನೆಗಳಡಿ ಬಿಬಿಎಂಪಿಯು ಜನರು ಅತಿ ಹೆಚ್ಚಾಗಿ ಬಳಸುವ ಪ್ರಮುಖ ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು, ವೈಟ್‌ಟಾಪಿಂಗ್‌ ನಡೆಸುವುದು ಹಾಗೂ ಮೇಲ್ಸೇತುವೆಗಳ ನಿರ್ಮಾಣದಂತಹ ದೊಡ್ಡ ಪ್ರಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಈಜಿಪುರ ಮೇಲ್ಸೇತುವೆ, ಪಶ್ಚಿಮ ಕಾರ್ಡ್‌ ರಸ್ತೆಯ ಮೇಲ್ಸೇತುವೆಗಳು, ಓಕಳಿಪುರದ ಅಷ್ಟಪಥಗಳ ಕಾರಿಡಾರ್‌, ವೈಟ್‌ಟಾಪಿಂಗ್‌ ಹಾಗೂ ಟೆಂಡರ್‌ ಶ್ಯೂರ್‌ ರಸ್ತೆಗಳು ಸೇರಿದಂತೆ ಅನೇಕ ಕಾಮಗಾರಿಗಳು ಆರಂಭದಲ್ಲಿ ಚುರು
ಕಾಗಿ ನಡೆದಿದ್ದವು. ಗುತ್ತಿಗೆದಾರರಿಗೆ ಹಣ ಪಾವತಿ ವಿಳಂಬವೂ ಈ ಕಾಮಗಾರಿಗಳು ಏಳೆಂಟು ತಿಂಗಳುಗ
ಳಿಂದ ಸ್ಥಗಿತಗೊಂಡಿರುವುದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದು.

‘ಈ ಹಿಂದೆ ಬಿಬಿಎಂಪಿಯು ಮುಖ್ಯಮಂತ್ರಿಯವರ ನಗರೋತ್ಥಾನ/ ನವ ನಗರೋತ್ಥಾನ ಯೋಜನೆ ಅಡಿ ದೊಡ್ಡ ಪ್ರಮಾಣದ ಪ್ರಮುಖ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳುತ್ತಿತ್ತು. ಈ ಕಾಮಗಾರಿಗಳ ಅನುಷ್ಠಾನಕ್ಕೆ ಹೆಚ್ಚು ಸಮಯ ತಗಲುತ್ತದೆ. ಆದರೆ, 2019–20ನೇ ಸಾಲಿನಲ್ಲಿ ಸಣ್ಣ ಪುಟ್ಟ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನೂ ಈ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ಪುಟ್ಟ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಿ ಗುತ್ತಿಗೆದಾರರು ಬಿಲ್‌ಗಳನ್ನು ಸಲ್ಲಿಸುತ್ತಾರೆ. ಜ್ಯೇಷ್ಠತೆ ಆಧಾರದಲ್ಲಿ ಮೊದಲು ಬಿಲ್‌ ಸಲ್ಲಿಸಿದವರಿಗೆ ಮೊದಲು ಪಾವತಿ ಮಾಡಬೇಕಾಗುತ್ತದೆ’ ಎನ್ನುತ್ತಾರೆ ಬಿಬಿಎಂಪಿ ಆಯುಕ್ತರು.

‘ನವನಗರೋತ್ಥಾನ ಯೋಜನೆಯಡಿ ಪ್ರತಿ ಮೂರು ತಿಂಗಳಿಗೆ ₹ 500 ಕೋಟಿಗಳಷ್ಟು ಅನುದಾನ ಸರ್ಕಾರ
ದಿಂದ ಬಿಬಿಎಂಪಿಗೆ ಬಿಡುಗಡೆಯಾಗುತ್ತದೆ. ಈ ಅನುದಾನದ ಬಹುಪಾಲು ಸಣ್ಣ ಕಾಮಗಾರಿಗಳ ಬಿಲ್‌ ಪಾವತಿಗೆ ಬಳಕೆಯಾಗುತ್ತಿದೆ. ಈ ಹಿಂದೆ ₹ 500 ಕೋಟಿ ಅನುದಾನ ಬಿಡುಗಡೆಯಾಗುವಾಗ ₹ 300 ಕೋಟಿಗಳಷ್ಟು ಬಿಲ್‌ ಸಲ್ಲಿಕೆ ಆಗಿರುತ್ತಿತ್ತು. ಆದರೆ, ಸಣ್ಣ ಸಣ್ಣ ಕಾಮಗಾರಿಗಳು ಬೇಗನೇ ಪೂರ್ಣಗೊಳ್ಳುವುದರಿಂದ ಅವುಗಳ ಬಿಲ್‌ ತಕ್ಷಣ ಪಾವತಿ ಮಾಡಲಾಗುತ್ತಿದೆ. ದೊಡ್ಡ ಯೋಜನೆಗಳ ಬಿಲ್‌ ಪಾವತಿಗೆ ಇದರಿಂದ ಹಿನ್ನಡೆ ಆಗುತ್ತಿದೆ’ ಎಂದು ವಿವರಿಸುತ್ತಾರೆ ಆಯುಕ್ತರು.

ನವನಗರೋತ್ಥಾನ ಯೋಜನೆಯಡಿ ₹ 1,100 ಕೋಟಿಗೂ ಅಧಿಕ ಬಿಲ್‌ ಪಾವತಿ ಬಾಕಿ ಇದೆ. ಆದರೆ, ಇದರ ಖಾತೆಯಲ್ಲಿರುವುದೇ ₹ 500 ಕೋಟಿ ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಪರಿಹಾರೋಪಾಯ ಕಂಡುಕೊಳ್ಳುವ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ. ದೊಡ್ಡ ಯೋಜನೆಗಳ ಬಿಲ್‌ ಪಾವತಿಗೆ ಪ್ರತ್ಯೇಕ ವರ್ಗೀಕರಣ ಮಾಡಬೇಕು. ಅವುಗಳಿಗೆ ಆದ್ಯತೆ ಮೇರೆಗೆ ಬಿಲ್‌ ಪಾವತಿ ಮಾಡುವ ಮೂಲಕ ನಗರದ ಪ್ರಮುಖ ಯೋಜನೆಗಳ ಕಾಮಗಾರಿಗಳಿಗೆ ಹಿನ್ನಡೆ ಆಗದಂತೆ ನೋಡಿಕೊಳ್ಳ
ಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 

ಕೆಆರ್‌ಡಿಸಿಎಲ್‌ನಿಂದ ಕಾಮಗಾರಿ– ಬಿಲ್ವಿದ್ಯೆಯ ರಹಸ್ಯ

‘ಕಳೆದ ವರ್ಷ ರಾಜ್ಯದಲ್ಲಿ ಸರ್ಕಾರ ಬದಲಾದ ಸಂದರ್ಭದಲ್ಲಿ ನಗರದ ಕೆಲವು ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಒಟ್ಟು ₹ 2 ಸಾವಿರ ಕೋಟಿಗೂ ಅಧಿಕ ಅನುದಾನ ಹಂಚಿಕೆ ಮಾಡಲಾಗಿತ್ತು. ರಸ್ತೆ ಅಭಿವೃದ್ಧಿ, ಮೋರಿ ದುರಸ್ತಿಯಂತಹ ಸಣ್ಣ ಪ್ರಮಾಣದ ಕಾಮಗಾರಿಗಳಿಗೂ ನವನಗರೋತ್ಥಾನ ಯೋಜನೆ ಹಣ ಬಳಸಲಾಗಿದೆ. ಈ ಕಾಮಗಾರಿಗಳನ್ನು ಟೆಂಡರ್‌ ಕರೆದು ನಿರ್ವಹಿಸುವ ಬದಲು ತ್ವರಿತವಾಗಿ ಬಿಲ್‌ ಪಾವತಿ ಮಾಡಿಸಿಕೊಳ್ಳುವ ಉದ್ದೇಶದಿಂದಲೇ ಕೆಆರ್‌ಡಿಸಿಎಲ್‌ ಮೂಲಕ ಅನುಷ್ಠಾನಗೊಳಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು