ಶುಕ್ರವಾರ, ಜನವರಿ 27, 2023
25 °C
ಕಬ್ಬನ್‌ ಉದ್ಯಾನ: ವಿವಿಧ ಪ್ರಭೇದಗಳ ಹೆಸರು, ವೈಶಿಷ್ಟ್ಯಗಳ ದಾಖಲೀಕರಣ l 2021ರಲ್ಲೇ ಆರಂಭವಾಗಿದ್ದ ಕಾರ್ಯ

ಕಬ್ಬನ್‌ ಉದ್ಯಾನದ ಮರಗಳ ವಿವರ ಗುರುತಿಸುವ ಕಾರ್ಯಕ್ಕೆ ‌ಹಿನ್ನಡೆ

ಖಲೀಲಅಹ್ಮದ ಶೇಖ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿರುವ ಪ್ರತಿ ಮರದ ಹೆಸರು, ಮೂಲ, ವೈಶಿಷ್ಟ್ಯ ಒಳಗೊಂಡಂತೆ ಸಂಪೂರ್ಣ ವಿವರಗಳನ್ನು ದಾಖಲಿಸಿ, ಈ ಮೂಲಕ ಜನರಲ್ಲಿ ಅರಿವು ಮೂಡಿಸುವ ಉದ್ದೇಶದ ಯೋಜನೆಗೆ ಹಿನ್ನಡೆಯಾಗಿದೆ.

‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ₹23 ಲಕ್ಷ ವೆಚ್ಚದಲ್ಲಿ ‘ಐಡೆಂಟಿಫಿಕೇಷನ್ ಆ್ಯಂಡ್ ಟ್ರೇಸಿಂಗ್‌’ ಹೆಸರಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಜುಲೈ 2021ರಲ್ಲಿ ಚಾಲನೆ ನೀಡಿದ್ದು, 2022ರ ಜೂನ್‌ನಲ್ಲೇ ಮುಗಿಯಬೇಕಾಗಿತ್ತು. ಆದರೆ, ಯೋಜನೆಯ ಜಾರಿ ಆಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದೆ.

ಕಬ್ಬನ್‌ ಉದ್ಯಾನದಲ್ಲಿ ವಿವಿಧ ಜಾತಿಯ 8,837 ಮರಗಳಿವೆ. ಇವುಗಳಲ್ಲಿ 197ಕ್ಕೂ ಹೆಚ್ಚು ಪಾರಂಪರಿಕ ಪ್ರಭೇದಗಳು ಎಂದು ಗುರುತಿಸಲಾಗಿದೆ. ಆದರೆ, ಅವುಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಇಲ್ಲ. 

‘ಕಬ್ಬನ್ ಉದ್ಯಾನದ ಪ್ರತಿ ಮರವೂ ವಿಭಿನ್ನ ಗುಣಲಕ್ಷಣಗಳನ್ನು ಒಳಗೊಂಡಿದೆ. ಅವುಗಳ ಸಂಪೂರ್ಣ ವಿವರ ದಾಖಲಿಸುವ ಕಾರ್ಯವನ್ನು
ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಮತ್ತು ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ’ ಎಂದು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ ಒತ್ತಾಯಿಸಿದರು.

ಮರಕ್ಕೆ ಹಾನಿಯಾಗದಂತೆ ಫಲಕ: ‘ಯೋಜನೆಯಡಿ ಅಳವಡಿಸುವ ಫಲಕಗಳು ಮರಗಳಿಗೆ ಹಾನಿ
ಉಂಟುಮಾಡುವುದಿಲ್ಲ. ಮೊಳೆ ಹೊಡೆಯುವುದು, ರಾಸಾಯನಿಕ ಲೇ‍ಪನ ಸೇರಿ ಅಪಾಯಕಾರಿ ವಿಧಾನಗಳನ್ನು ಬಳಸುವುದಿಲ್ಲ. ಫಲಕ ಅಳವಡಿಕೆಗೆ ಆಧುನಿಕ ವಿಧಾನ ಅನುಸರಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ( ಕಬ್ಬನ್ ಉದ್ಯಾನ) ಎಚ್.ಪಿ.ಬಾಲಕೃಷ್ಣ ವಿವರಿಸಿದರು.‌

‘ಕಾಮಗಾರಿ ಕೈಗೊಂಡ ಸಂಸ್ಥೆ ಮರಗಳಿಗೆ ಜಿಪಿಎಸ್, ಕ್ಯೂಆರ್ ಕೋಡ್ ಅಳವಡಿಸುವ ಪ್ರಸ್ತಾವವನ್ನು
ಸ್ಮಾರ್ಟ್‌ಸಿಟಿಯವರಿಗೆ ಸಲ್ಲಿಸಲಾಗಿದೆ. ಅದು ಮಾತುಕತೆಯ ಹಂತದಲ್ಲಿದ್ದು, ಇನ್ನೂ ಅಂತಿಮಗೊಂಡಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಕಬ್ಬನ್‌ ಉದ್ಯಾನ: ಮರಗಳ ಮಾಹಿತಿ ಸಿದ್ಧ

 ‘ಯೋಜನೆಯ ಮೊದಲ ಹಂತದಲ್ಲಿ ಕಬ್ಬನ್‌ ಉದ್ಯಾನದ ಮರಗಳ ಗಣತಿ ಮತ್ತು ಹೆಸರು, ಅವುಗಳ ಮೂಲ, ವೈಶಿಷ್ಟ್ಯ ಹಾಗೂ ಪ್ರಭೇದದ ಮಾಹಿತಿ ಕಲೆಹಾಕಲಾಗಿದೆ’ ಎಂದು ಯೋಜನೆಯ ಗುತ್ತಿಗೆ ಪಡೆದಿರುವ ಫ್ಲಿಪ್ಪರ್ ಸಂಸ್ಥೆಯ ನಿರ್ದೇಶಕ ವಿವೇಕ್ ಮಹಾವೀರ್ ಮಾಹಿತಿ ನೀಡಿದರು.

‘20 ಸಸ್ಯವಿಜ್ಞಾನ ವಿದ್ಯಾರ್ಥಿಗಳ ನೆರವಿನಿಂದ ಪ್ರತಿ ಮರದ ಹೆಸರು, ವಯಸ್ಸು, ಗುಣ, ಮೂಲ ಒಳಗೊಂಡು ವಿಶೇಷಗಳ ಬಗ್ಗೆ 300 ಪುಟಗಳ ವರದಿ ಸಿದ್ಧವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇಬ್ಬರೂ ಸಸ್ಯವಿಜ್ಞಾನ ತಜ್ಞರು ಇದನ್ನು ಅಂತಿಮಗೊಳಿಸಿದ್ದಾರೆ’ ಎಂದು
ತಿಳಿಸಿದರು.

ಉದ್ಯಾನವನ್ನು 18 ವಲಯಗಳನ್ನಾಗಿ ವಿಂಗಡಿಸಿದ್ದು, ವಲಯವಾರು ಮರಗಳಿಗೆ ಕ್ಯೂಆರ್ ಕೋಡ್‌ ಮತ್ತು ಫಲಕ ಅಳವಡಿಸುವ ಕಾರ್ಯ ಎರಡನೇ ಹಂತದಲ್ಲಿ ನಡೆಯಲಿದೆ’ ಎಂದು ತಿಳಿಸಿದರು.

***

ಕಬ್ಬನ್‌ ಉದ್ಯಾನದಲ್ಲಿ ಐಡೆಂಟಿಫಿಕೇಷನ್ ಆ್ಯಂಡ್ ಟ್ರೇಸಿಂಗ್‌ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್‌ ಅಂತ್ಯದೊಳಗೆ ಮುಗಿಯಲಿದೆ.

ಎಚ್.ಪಿ.ಬಾಲಕೃಷ್ಣ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆಯ (ಕಬ್ಬನ್‌ ಉದ್ಯಾನ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು