ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸತಜ್ಞನ ಇತಿಹಾಸಕಾರ ಶೆಟ್ಟರ್‌: ವಿಮರ್ಶಕ ರಾಜೇಂದ್ರ ಚೆನ್ನಿ ಅಭಿಪ್ರಾಯ

'ಸ್ಥಾಪಿತ ಗ್ರಹಿಕೆಗಳ ಬದಲಿಸಿದವರು'
Last Updated 10 ಮಾರ್ಚ್ 2020, 22:14 IST
ಅಕ್ಷರ ಗಾತ್ರ

ಬೆಂಗಳೂರು: ‘ಷ. ಶೆಟ್ಟರ್‌ ಅವರು ಇತಿಹಾಸತಜ್ಞನ ಇತಿಹಾಸ ಬರೆದ ಸಂಶೋಧಕ’ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಹೇಳಿದರು.

ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ ಮತ್ತು ಪ್ರೊ. ಡಿ. ಎಸ್‌. ಅಚ್ಯುತ ರಾವ್‌ ಎಂಡೊಮೆಂಟ್‌ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಶೆಟ್ಟರ್‌ ಅವರ ‘ಅರ್ಲಿ ಬುದ್ಧಿಸ್ಟ್‌ ಆರ್ಟಿಸನ್ಸ್‌ ಆ್ಯಂಡ್‌ ದೇರ್‌ ಆರ್ಕಿಟೆಕ್ಚರಲ್‌ ವಕ್ಯಾಬುಲರಿ’ (ಪ್ರಾಚೀನ ಬೌದ್ಧಶಿಲ್ಪಿಗಳು ಮತ್ತು ಅವರ ವಾಸ್ತುಶಾಸ್ತ್ರೀಯ ಪದಕೋಶ) ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತಿಹಾಸದ ಅಧ್ಯಯನ ಹಲವು ರೀತಿಯ ಒತ್ತಡಗಳನ್ನು ಎದುರಿಸುತ್ತಿರುತ್ತದೆ. ಈ ಒತ್ತಡಗಳಿಂದ ಬಿಡುಗಡೆಗೊಳಿಸಿಕೊಂಡು, ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಸಂಶೋಧನೆ ಮಾಡಿದವರು ಷ. ಶೆಟ್ಟರ್‌. ಭೂತಕಾಲದ ಬಗ್ಗೆ ಈಗಾಗಲೇ ಸ್ಥಾಪಿತವಾಗಿರುವ ನಮ್ಮ ಗ್ರಹಿಕೆಗಳನ್ನು ಬದಲಿಸಿದವರು ಅವರು. ಶಿಲ್ಪಿಗಳು ಕೂಡ ಶಿಕ್ಷಿತರಾಗಿದ್ದರು ಎಂಬುದನ್ನು ಅವರ ಈ ಹೊಸ ಕೃತಿ ಹೇಳುತ್ತದೆ. ಇತಿಹಾಸದ ಚಲನಶೀಲತೆಯನ್ನು ಗುರುತಿಸಲು ಅವರ ಸಂಶೋಧನೆ ನೆರವಾಗುತ್ತದೆ’ ಎಂದೂ ಅವರು ವಿವರಿಸಿದರು.

ಪುಸ್ತಕದ ಬಗ್ಗೆ ಮಾತನಾಡಿದ ಐಸಿಎಚ್‌ಆರ್‌ನ ಪ್ರಾಂತೀಯ ನಿರ್ದೇಶಕ ಎಸ್‌.ಕೆ.ಅರುಣಿ, ‘ಸ್ತೂಪಗಳನ್ನು ನಿರ್ಮಾಣ ಮಾಡುವಾಗ ಶಿಲ್ಪಿಗಳಾಗಿದ್ದವರು ಜೀತದಾಳುಗಳಲ್ಲ; ಅವರು ಕೂಲಿಗಾರರು ಎಂಬ ಮಹತ್ವದ ಮಾಹಿತಿಯನ್ನು ಶೆಟ್ಟರ್‌ ಅವರ ಈ ಪುಸ್ತಕದಲ್ಲಿ ನೋಡಬಹುದು. ಶಿಲ್ಪಗಳಿಗೆ ಸಿಗುವಂಥ ಮನ್ನಣೆಶಿಲ್ಪಿಗಳಿಗೂ ಸಿಗಬೇಕು ಎಂಬ ಕಾಳಜಿ ಅವರ ಸಂಶೋಧನೆಯಲ್ಲಿದೆ’ ಎಂದು ವಿವರಿಸಿದರು.

ಇತಿಹಾಸತಜ್ಞ ಎಚ್‌.ಎಸ್‌.ಗೋಪಾಲರಾವ್‌, ‘ಕಲಾ ಇತಿಹಾಸಕ್ಕೆ ಶೆಟ್ಟರ್‌ ಅವರ ಕೊಡುಗೆ ಅಪೂರ್ವವಾದುದು. ಅಶೋಕನ ಕಾಲದಲ್ಲಿ ಶಿಲ್ಪಿಗಳು ಹಲವು ರೀತಿಯ ಕೆಲಸಗಳನ್ನು ಬಲ್ಲವರಾಗಿದ್ದರು; ಅದಕ್ಕೆ ತಕ್ಕಂತೆ ಅವರ ಹೆಸರುಗಳೂ ಇದ್ದವು. ಅವರು ಜೀತದಾಳುಗಳಲ್ಲ – ಎಂಬ ಹಲವು ಮಹತ್ವದ ಸಂಗತಿಗಳನ್ನು ಶೆಟ್ಟರ್‌ ಈ ಕೃತಿಯಲ್ಲಿ ದಾಖಲಿಸಿದ್ದಾರೆ’ ಎಂದು ಹೇಳಿದರು.

ಪುಸ್ತಕ ಬಿಡುಗಡೆಗೊಳಿಸಿದ ವಿಜ್ಞಾನಿ ರೊದ್ದಂ ನರಸಿಂಹ, ‘ಶೆಟ್ಟರ್‌ ಅವರು ಆಳವಾದ ವಿದ್ವತ್ತಿನಿಂದ ಕರ್ನಾಟಕದ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸಿದರು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗಲು ಅವರ ಸಂಶೋಧನಾ ಕೃತಿಯಿಂದ ಸಹಾಯವಾಯಿತು’ ಎಂದರು.

ಲೇಖಕಿ ವನಮಾಲಾ ವಿಶ್ವನಾಥ, ‘ಒಂದು ಯುಗದ ವಿವೇಕವಿದ್ದ ಶ್ರೇಷ್ಠ ಸಂಶೋಧಕರಾಗಿದ್ದವರು ಶೆಟ್ಟರ್‌. ಸಂಶೋಧನೆಗೆ ಮಾರ್ಗದರ್ಶಕ ಸೂತ್ರಗಳನ್ನು ಒದಗಿಸಿದ ಅವರ ಹಲವು ಕ್ಷೇತ್ರಗಳಲ್ಲಿಯ ಸಾಧನೆ ಬೆರಗನ್ನು ಮೂಡಿಸುತ್ತದೆ. ಅವರ ಪಾಂಡಿತ್ಯವೇ ಹೊರೆಯಾಗದಂತೆ, ಒಬ್ಬ ಪುನರುತ್ಥಾನಕಾರರಂತೆ ಬದುಕಿದರು’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT