ಶನಿವಾರ, ಸೆಪ್ಟೆಂಬರ್ 18, 2021
31 °C
ಶಿವರಾಮ ಕಾರಂತ ಬಡಾವಣೆ– ಮನೆಗಳ ಧ್ವಂಸ ಬೇಡ

ಒತ್ತುವರಿ ತೆರವು| ಕಾನೂನು ಹೋರಾಟ ಬೆಂಬಲಿಸಲು ಸಿದ್ಧ: ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಹೆಸರಿನಲ್ಲಿ ಬಡ, ಮಧ್ಯಮ ಹಾಗೂ ರೈತರ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದೌರ್ಜನ್ಯ ನಡೆಸುತ್ತಿದೆ. ಈ ಸಂಬಂಧ ಕಾನೂನಾತ್ಮಕವಾಗಿ ಸ್ಪಷ್ಟ ಚಿತ್ರಣ ಹೊರಬೀಳುವವರೆಗೆ ಈ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಕೆಡವಬಾರದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿ ಕಳೆದುಕೊಂಡವರ ಜೊತೆಗೆ ದಾಸರಹಳ್ಳಿ ಕ್ಷೇತ್ರದ ಸೋಮಶೆಟ್ಟಿಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಸಾಂತ್ವನ ಸಭೆಯಲ್ಲಿ ಅವರು ಮಾತನಾಡಿದರು.

‘ಸಂತ್ರಸ್ತರ ಪರವಾಗಿ ಕಾನೂನು ಹೋರಾಟಕ್ಕೆ ಕೈಜೋಡಿಸುತ್ತೇನೆ. ಮುಖ್ಯಮಂತ್ರಿಯವರು, ಹಿರಿಯ ಅಧಿಕಾರಿಗಳು ಹಾಗೂ ಈ ಸಂಬಂಧ ರಚನೆಗೊಂಡಿರುವ ಸಮಿತಿ ಅಧ್ಯಕ್ಷರೊಂದಿಗೆ ಈ ಕುರಿತು ಚರ್ಚಿಸಿ ಮನೆ ಕೆಡಹುವುದನ್ನು ನಿಲ್ಲಿಸುವಂತೆ ಕೋರುತ್ತೇನೆ’ ಎಂದರು.

‘ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿ ಕಳೆದುಕೊಂಡವರಿಂದ ಈಗಷ್ಟೇ ಅರ್ಜಿ ಪಡೆಯಲಾಗುತ್ತಿದೆ. ಅದರ ಪರಿಶೀಲನೆಯನ್ನೂ ಮಾಡದೇ, ಇಲ್ಲಿ ಕಟ್ಟಿದ ಮನೆಗಳನ್ನು ಏಕಾಏಕಿ ಬೀಳಿಸುವುದು ಸರಿಯಲ್ಲ. ಈ ಭಾಗದ ಶಾಸಕರೇ ಬಿಡಿಎ ಅಧ್ಯಕ್ಷರಾಗಿದ್ದಾರೆ. ಅವರೇ ಇಂತಹ ಕೆಲಸಕ್ಕೆ ಮುಂದಾಗಿರುವುದು ದುರದೃಷ್ಟಕರ’ ಎಂದೂ ಬೇಸರ ವ್ಯಕ್ತಪಡಿಸಿದರು.

‘30 ಸಾವಿರ ಕುಟುಂಬಗಳನ್ನು ಬೀದಿಗೆ ತಳ್ಳಿ 25 ಸಾವಿರ ನಿವೇಶನಗಳ ನಿರ್ಮಾಣ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ’ ಎಂದು ಪ್ರಶ್ನಿಸಿದ ಅವರು, ‘ಈ ಬಡಾವಣೆ ನಿರ್ಮಾಣ ಕೈಬಿಡುವಂತೆ ಹೈಕೋರ್ಟ್ 2014 ರಲ್ಲಿ ಆದೇಶ ಮಾಡಿತ್ತು. ಆದರೆ, ಸುಪ್ರೀಂ ಕೋರ್ಟ್‌ಗೆ ಸುಳ್ಳು ದಾಖಲೆಗಳನ್ನು ನೀಡಿದ ಬಿಡಿಎ, ರೈತ ವಿರೋಧಿ ಆದೇಶಗಳು ಪ್ರಕಟವಾಗುವುದಕ್ಕೆ ಕಾರಣವಾಗಿದೆ’ ಎಂದೂ ದೂರಿದರು.

‘ಈಗಲೂ ಅಡ್ವೊಕೇಟ್ ಜನರಲ್ ಮೂಲಕ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಬಿಡಬಹುದು’ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಸ್ಥಳೀಯ ಮುಖಂಡರಾದ ನಂಜುಂಡಪ್ಪ, ನಾಗಭೂಷಣ್, ಕೆ.ಸಿ. ವೆಂಕಟೇಶ್, ಚರಣ್ ಗೌಡ ಹಾಜರಿದ್ದರು. ಭೂಮಿ ಕಳೆದುಕೊಂಡ ಸಂತ್ರಸ್ತರು ಸಭೆಯಲ್ಲಿ ಇದ್ದರು.

‘ನಟ ದರ್ಶನ್‌, ಶಿವಶಂಕರಪ್ಪಗೆ ಅನ್ವಯಿಸುವುದಿಲ್ಲವೆ?’

‘ಸುಪ್ರೀಂ ಕೋರ್ಟ್‌ ತೀರ್ಪನ್ನು ಮುಂದಿಟ್ಟುಕೊಂಡು ಬಡವರ ಮನೆಗಳನ್ನು ಕೆಡವಲಾಗುತ್ತಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದವರ ಮನೆಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹಸಿರು ಮಂಡಳಿ ತೀರ್ಪು ನೀಡಿದಾಗಲೂ ಬಡವರ ಮನೆಗಳನ್ನು ಮಾತ್ರ ಧ್ವಂಸಗೊಳಿಸಲಾಯಿತು. ನಟ ದರ್ಶನ್, ಕಾಂಗ್ರೆಸ್‌ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ಮಾತ್ರ ಈ ತೀರ್ಪನ್ನು ಅನ್ವಯಿಸಲಿಲ್ಲ’ ಎಂದು ಶಾಸಕ ಆರ್. ಮಂಜುನಾಥ್‌ ದೂರಿದರು.

‘ಈ ಜನರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದರೆ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ, ತಾವು ಉಳುಮೆಗಾಗಿ ಇಟ್ಟುಕೊಂಡಿದ್ದ ಜಾಗದಲ್ಲಿ ಮನೆ ಕಟ್ಟಿದ್ದಾರೆ’ ಎಂದರು.

‘ಭೂಮಿ ಕಳೆದುಕೊಳ್ಳುತ್ತಿರುವ ಸಂತ್ರಸ್ತರು ಅರ್ಜಿ ಸಲ್ಲಿಸಲು 2022 ಫೆ.15ರವರೆಗೆ ಅವಕಾಶವಿದೆ. ಆದರೆ ಬಿಡಿಎ ಅಧಿಕಾರಿಗಳು ನ್ಯಾಯಾಲಯದ ಆದೇಶದ ನೆಪದಲ್ಲಿ ಮನೆಗಳನ್ನು ಉರುಳಿಸಿ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು