ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಶೋಭಾ ಕರಂದ್ಲಾಜೆ ಕಾರಿನ ಬಾಗಿಲು ತಾಗಿ ಅಪಘಾತ: ಸವಾರ ಸಾವು

Published 8 ಏಪ್ರಿಲ್ 2024, 9:41 IST
Last Updated 8 ಏಪ್ರಿಲ್ 2024, 9:41 IST
ಅಕ್ಷರ ಗಾತ್ರ

ಬೆಂಗಳೂರು: ಶೋಭಾ ಕರಂದ್ಲಾಜೆ ಅವರಿಗೆ ಸೇರಿದ್ದ ಕಾರಿನ ಬಾಗಿಲು ದ್ವಿಚಕ್ರ ವಾಹನಕ್ಕೆ ತಾಗಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಪ್ರಕಾಶ್ (60) ಎಂಬುವವರು ಮೃತಪಟ್ಟಿದ್ದಾರೆ.

ಕೆ.ಆರ್.ಪುರದ ಗಣಪತಿ ದೇವಸ್ಥಾನ ಬಳಿ ಸೋಮವಾರ ಮಧ್ಯಾಹ್ನ 12.30 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅಪಘಾತ ಸಂಬಂಧ ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಲೋಕಸಭಾ ಚುನಾವಣೆ ಪ್ರಚಾರ ರ‍್ಯಾಲಿಗೆಂದು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ‌ ಶೋಭಾ ಕರಂದ್ಲಾಜೆ ಅವರು ಸೋಮವಾರ ಕೆ.ಆರ್.ಪುರಕ್ಕೆ ಬಂದಿದ್ದರು. ಅವರಿಗೆ ಸೇರಿದ್ದ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಪ್ರಕಾಶ್ ಹೊರಟಿದ್ದರು.’

‘ಕಾರಿನ ಚಾಲಕ ದಿಢೀರ್ ಬಾಗಿಲು ತೆರೆದಿದ್ದ. ವೇಗವಾಗಿ ಹೊರಟಿದ್ದ ಪ್ರಕಾಶ್ ಅವರ ದ್ವಿಚಕ್ರ ವಾಹನ, ಕಾರಿನ ಬಾಗಿಲಿಗೆ ಗುದ್ದಿತ್ತು. ಇದರಿಂದಾಗಿ ದ್ವಿಚಕ್ರ ವಾಹನ ಸಮೇತ ಪ್ರಕಾಶ್, ರಸ್ತೆಗೆ ಬಿದ್ದಿದ್ದರು. ಇದೇ ಮಾರ್ಗದಲ್ಲಿ ಅತೀ ವೇಗವಾಗಿ ಹೊರಟಿದ್ದ ಖಾಸಗಿ ಬಸ್ಸಿನ ಚಕ್ರ, ಪ್ರಕಾಶ್ ಅವರ ಮೇಲೆ ಹರಿದಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತೀವ್ರ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಯೇ ಪ್ರಕಾಶ್ ಮೃತಪಟ್ಟಿದ್ದಾರೆ. ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲು ದಿಢೀರ್ ತೆರೆದಿದ್ದರಿಂದಲೇ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಕಾರಿನಲ್ಲಿ ಯಾರೆಲ್ಲ ಇದ್ದರು ಎಂಬುದನ್ನು ತಿಳಿದುಕೊಂಡು ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT