ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಎಸ್‌ಸಿ–ಎಸ್‌ಟಿ ವಸತಿಗೃಹಗಳಲ್ಲಿ ಸಿಬ್ಬಂದಿ ಕೊರತೆ: ನೋಟಿಸ್‌

Published 14 ಡಿಸೆಂಬರ್ 2023, 16:17 IST
Last Updated 14 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಬಾಲಕ–ಬಾಲಕಿಯರ ವಸತಿಗೃಹಗಳಲ್ಲಿ ಸಿಬ್ಬಂದಿ ಕೊರತೆಗೆ ಸಂಬಂಧಿಸಿದಂತೆ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಬೆಳಗಾವಿಯ, ‘ತರುಣ ಭಾರತ್’ ಮರಾಠಿ ದಿನಪತ್ರಿಕೆಯಲ್ಲಿ ಇದೇ 7ರಂದು ಪ್ರಕಟವಾದ ವರದಿ ಆಧರಿಸಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೋಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ಹಾಜರಾಗಿ, ‘ಪ್ರಕರಣದ ಕುರಿತು ಗಮನ ಹರಿಸಲಾಗುವುದು. ಮುಂದಿನ ವಿಚಾರಣೆ ವೇಳೆಗೆ ವಸ್ತುಸ್ಥಿತಿ ವರದಿ ಸಲ್ಲಿಸಲಾಗುವುದು‘ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದೇ ವೇಳೆ ನ್ಯಾಯಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಗತ್ಯ ನೆರವು ಹಾಗೂ ಸಲಹೆ ನೀಡಲು ಮಾಜಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ನಿತಿನ್‌ ರಮೇಶ್‌ ಅವರನ್ನು ಅಮಿಕಸ್‌ ಕ್ಯೂರಿ ಆಗಿ ನೇಮಕ ಮಾಡಿದೆ. ಪ್ರಕರಣದ ಕುರಿತಂತೆ ಅರ್ಜಿಯ ಪ್ರತಿ ಹಾಗೂ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ರಿಜಿಸ್ಟ್ರಾರ್‌ ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ವರದಿಯಲ್ಲಿ ಏನಿತ್ತು?

‘ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಾಲಕ–ಬಾಲಕಿಯರ ವಸತಿಗೃಹಗಳಲ್ಲಿ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲ. ಸಿಬ್ಬಂದಿ ನೇಮಕಾತಿಗೆ ನಿರ್ದಿಷ್ಟ ಮಾರ್ಗಸೂಚಿ ಇದ್ದರೂ ನೇಮಕಾತಿ ನಡೆದಿಲ್ಲ. ಕೆಲವು ಜಿಲ್ಲೆಗಳಲ್ಲಿ 3-4 ಹಾಸ್ಟೆಲ್‌ಗಳಲ್ಲಿ ಕೇವಲ ಒಬ್ಬ ವಾರ್ಡನ್‌ ಇದ್ದಾರೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

‘ರಾಜ್ಯದಲ್ಲಿ 1,297 ಮೆಟ್ರಿಕ್‌ ಪೂರ್ವ ವಸತಿಗೃಹಗಳಿವೆ. 1,165 ಮೆಟ್ರಿಕ್‌ ನಂತರದ ವಸತಿಗೃಹಗಳಿವೆ. ಆದರೆ, ವಾರ್ಡನ್‌ ಮತ್ತು ಅಧೀಕ್ಷಕರು 1,200ಕ್ಕಿಂತ ಕಡಿಮೆ ಇದ್ದಾರೆ. ಕಾಲಕಾಲಕ್ಕೆ ಸಿಬ್ಬಂದಿ ನೇಮಕಾತಿ ನಡೆಯುತ್ತಿಲ್ಲ’ ಎಂದು ವಿವರಿಸಲಾಗಿತ್ತು.

ಅರ್ಹ ಪ್ರಕರಣ

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 400 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. 200 ಖಾಯಂ ಹುದ್ದೆಗಳ ಅಧೀಕ್ಷಕರ ಹುದ್ದೆಗಳನ್ನು ಹಂತ ಹಂತದಲ್ಲಿ ನೇಮಿಸಲಾಗುವುದು ಎಂದು ಇಲಾಖೆಯ ಕಾರ್ಯದರ್ಶಿಯೊಬ್ಬರು ಹೇಳಿದ್ದಾರೆ. ಆದರೆ, ಕಾಲಕಾಲಕ್ಕೆ, ಕಾಯಂ ಸಿಬ್ಬಂದಿ ನೇಮಕಾತಿಗೆ ಯಾವುದೇ ಪ್ರಯತ್ನ ನಡೆಸಿಲ್ಲ ಎಂಬುದು ಪತ್ರಿಕೆಯ ವರದಿಯಿಂದ ತಿಳಿದು ಬರುತ್ತದೆ. ಹಾಗಾಗಿ, ಸ್ವಯಂ ಪ್ರೇರಿತ ಪಿಐಎಲ್‌ ದಾಖಲಿಸಿಕೊಳ್ಳಲು ಇದು ಅರ್ಹ ಪ್ರಕರಣವಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT