ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವನೀತ ಚೋರನ ಗುಣಗಾನ, ಭಕ್ತಿಯ ನಮನ

ನಗರದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ l ಮಕ್ಕಳಿಗೆ ಕೃಷ್ಣ–ರಾಧೆಯರ ವೇಷ ಹಾಕಿ ಸಂಭ್ರಮಿಸಿದ ಪಾಲಕರು
Last Updated 22 ಆಗಸ್ಟ್ 2019, 8:49 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಕೃಷ್ಣ ಜಯಂತಿ ಅಂಗವಾಗಿ ನಗರದಲ್ಲಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಸಂಭ್ರಮಿಸಿದರು.

ಸಂಘ–ಸಂಸ್ಥೆಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಿ ವಿಭಿನ್ನ ವೇಷ ಹಾಕಿ ನೃತ್ಯ ಮಾಡಿದರು. ವಿವಿಧ ದೇವಾಲಯಗಳಲ್ಲಿ ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಮಾಡಲಾಯಿತು. ಭಕ್ತರು ಕೃಷ್ಣನ ಆರಾಧನೆ ಮಾಡುವ ಮೂಲಕ ಭಕ್ತಿ ಸಾಗರದಲ್ಲಿ ಮಿಂದೆದ್ದರು. ಕೆಲವೆಡೆ ಕೃಷ್ಣ ಭಕ್ತರು ಉಪವಾಸ ಮಾಡಿದರು.

‘ಈ ಹಬ್ಬ ಭಾನುವಾರ ಬಂದಿರುವ ಕಾರಣ ಕೆಲವು ಸಂಘಟನೆಗಳು ಹಾಗೂ ಶಾಲೆಗಳಲ್ಲಿ ಶನಿವಾರ ಕೂಡ ಆಚರಿಸಿದ್ದಾರೆ. ಇನ್ನು ಕೆಲವರು ಸೋಮವಾರವೂ ಆಚರಿಸಲಿದ್ದಾರೆ’ ಎಂದು ಕೃಷ್ಣ ಭಕ್ತರು ಅಭಿಪ್ರಾಯಪಟ್ಟರು.

ಇಸ್ಕಾನ್‌ ಸೇರಿದಂತೆ ನಗರದ ಕೆಲವು ದೇವಾಲಯಗಳಲ್ಲಿ ಹಾಲು, ಜೇನು ತುಪ್ಪದಿಂದ ಅಭಿಷೇಕ ಮಾಡಲಾಯಿತು. ವಿಶೇಷ ಪ್ರವಚನವನ್ನು ಆಯೋಜಿಸಿ ಭಕ್ತರಿಗೆ ಪ್ರಸಾದ ಹಂಚಲಾಯಿತು. ಕೃಷ್ಣನ ತೊಟ್ಟಿಲೋತ್ಸವವನ್ನು ಕೂಡ ಕೆಲವು ದೇವಾಲಯಗಳು ಸಂಭ್ರಮದಿಂದ ಆಚರಿಸಿವೆ.

ವೇಷಭೂಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದರು.

ಮಥುರಾ ನಗರಿ ಸೃಷ್ಟಿ
ನೆಲಮಂಗಲ: ಇಲ್ಲಿಗೆ ಸಮೀಪದ ನಂದರಾಮಯ್ಯನಪಾಳ್ಯದ ಬ್ಲೂಮೂನ್ ಶಾಲೆಯಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮಥುರಾ ನಗರದ ಮಾದರಿಯನ್ನೇ ಸೃಷ್ಟಿಸಿ ಸಾಂಸ್ಕೃತಿಕ ಚಟುವಟಿಕೆ ನಡೆಸಲಾಯಿತು.

ಮಕ್ಕಳು ಕೃಷ್ಣ, ರಾಧೆಯರ ವೇಷದಲ್ಲಿ ಶೃಂಗಾರಗೊಂಡಿದ್ದರು, ಕೃಷ್ಣನ ಚೆಲ್ಲಾಟ, ಚೇಷ್ಟೆ, ಯಶೋದೆಯ ಮಮತೆಯ ಆಟಗಳನ್ನು ಆಡಿಸುವ ಮೂಲಕ ಮಕ್ಕಳಲ್ಲಿ ಕೃಷ್ಣನ ಅವತಾರಗಳ ಬಗ್ಗೆ ತಿಳಿಸಿಕೊಡಲಾಯಿತು. ಕೃಷ್ಣನ ವಿಗ್ರಹ ಪ್ರತಿಷ್ಠಾಪಿಸಿ, ಗೋ ಪೂಜೆ, ತುಲಾಭಾರ ಮಾಡಲಾಯಿತು.


ಶ್ರೀಕೃಷ್ಣ ಜನ್ಮಾಷ್ಟಮಿ: ವೇಷ ಭೂಷಣ ಸ್ಪರ್ಧೆ
ಬೆಂಗಳೂರು:
ಪೀಣ್ಯದಾಸರಹಳ್ಳಿ ಸಮೀಪ ಬಾಗಲಗುಂಟೆಯ ತ್ರಿವೇಣಿ ಮೆಮೋರಿಯಲ್ ವಿದ್ಯಾಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣರಾಧಾ ವೇಷಭೂಷಣ ಸ್ಪರ್ಧೆ ನಡೆಯಿತು.

ಶ್ಲೋಕ, ಸಂಗೀತ, ಸಾಮೂಹಿಕ ನೃತ್ಯ, ಮಡಿಕೆ ಒಡೆಯುವುದು, ರ‍್ಯಾಂಪ್‌ ನಡಿಗೆಗಳಲ್ಲಿ ಪುಟಾಣಿ ಮಕ್ಕಳು ಸಂಭ್ರಮಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪೋಷಕರು ಮೊಬೈಲ್‌ನಲ್ಲಿ ಛಾಯಾಚಿತ್ರ ತೆಗೆದು ಸಂತಸಪಟ್ಟರು. ಶೈಕ್ಷಣಿಕ ಸಲಹೆಗಾರರಾದ ನಾಗರಾಜು, ಪ್ರಮೋದ್ ಜೋಷಿ, ಪ್ರಾಂಶುಪಾಲರಾದ ಸುನೀತಾ ಶ್ರೀವತ್ಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT