ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಶ್ರೂಷಕರ ಅಂತರಂಗ: ‘ಸೋಂಕಿತ ಅಪರಾಧಿಗಳ ಚಿಕಿತ್ಸೆ ಸವಾಲು’

Last Updated 2 ಮೇ 2021, 17:07 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಮೊದಲ ಬಾರಿ ಕಾಣಿಸಿಕೊಂಡಾಗ, ಅಂದರೆ ಕಳೆದ ವರ್ಷ ಯಾವುದೇ ವ್ಯವಸ್ಥೆ ಸರಿಯಾಗಿರಲಿಲ್ಲ. ಸರ್ಕಾರಕ್ಕೂ ಈ ಮಾದರಿಯ ಸಮಸ್ಯೆ ಹೊಸದಾಗಿದ್ದರಿಂದ ಎಲ್ಲರಿಗೂ ಹೆಚ್ಚು ಆತಂಕವಿತ್ತು. ಪಿಪಿಇ ಕಿಟ್, ಮಾಸ್ಕ್‌, ಸ್ಯಾನಿಟೈಸರ್‌ ಸೌಲಭ್ಯ ಒದಗಿಸುವವರೆಗೆ ಅಳುಕಿನಿಂದಲೇ ರೋಗಿಗಳ ಶುಶ್ರೂಷೆ ಮಾಡಬೇಕಾಯಿತು. ಹಿರಿಯ ವೈದ್ಯರು, ಸೂಪರಿಂಟೆಂಡೆಂಟ್‌ ಎಲ್ಲರೂ ಧೈರ್ಯ ನೀಡಿದ್ದರಿಂದ ಕೆಲಸ ಸುಲಭವಾಯಿತು.’

‘ಈ ಬಾರಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ರೋಗಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಹಲವು ಆಸ್ಪತ್ರೆಗಳಲ್ಲಿ ತಂದೆ–ತಾಯಿ ಮಕ್ಕಳು ಎಲ್ಲರಿಗೂ ಏಕಕಾಲಕ್ಕೆ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.’

‘ನಾನು ಕೆಲಸ ಮಾಡುತ್ತಿರುವ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲಿಯೂ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ 45 ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’

‘ಈ ಕೈದಿಗಳು ಅಪರಾಧ ಹಿನ್ನೆಲೆ ಹೊಂದಿರುವುದರಿಂದ ಆತಂಕ ಇದ್ದೇ ಇರುತ್ತದೆ. ಅವರಿಗೆ ಏನೇ ಚಿಕಿತ್ಸೆ, ಔಷಧ ಕೊಡಬೇಕಾದರೆ ಪೊಲೀಸರ ಉಪಸ್ಥಿತಿ ಇರಬೇಕು. ಪೊಲೀಸರು ಜೊತೆಗಿದ್ದರೂ ಅಳಕು ಇದ್ದೇ ಇರುತ್ತದೆ. ಸೋಂಕು ಹರಡುವ ಭೀತಿಯೊಂದಿಗೆ ಇಂತಹ ಅಳಕನ್ನೂ ನಾವು ಎದುರಿಸಿದ್ದೇವೆ’

‘ನನ್ನ ಪತಿ ಬಿಬಿಎಂಪಿ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಅವರೂ ಈಗ ಕೋವಿಡ್ ಕರ್ತವ್ಯ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಕೊರೊನಾ ಸೇನಾನಿಗಳು ಇದ್ದೇವೆ. ಕರ್ತವ್ಯ ನಿಭಾಯಿಸುವುದರೊಂದಿಗೆ ಮಕ್ಕಳ ಬಗ್ಗೆಯೂ ಕಾಳಜಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ’

‘1992ರಲ್ಲಿ ನನ್ನ ವೃತ್ತಿ ಜೀವನ ಆರಂಭವಾಯಿತು. ಸಿ.ವಿ. ರಾಮನ್‌ ನಗರದಲ್ಲಿರುವ ಕ್ಷಯರೋಗ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದೆ. ಈಗ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’

‘ಸೋಂಕಿನ ಸೌಮ್ಯ ಸ್ವಭಾವದ ಲಕ್ಷಣ ಹೊಂದಿರುವಂಥವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಪರಿಸ್ಥಿತಿಗೆ ತಲುಪಿಸಿದರೆ ಆ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನನಗೂ ಸೋಂಕು ತಗುಲಿದ್ದು ಸದ್ಯ ಹೋಂ ಐಸೊಲೇಷನ್‌ನಲ್ಲಿದ್ದೇನೆ. ಸೋಂಕಿನ ಬಗ್ಗೆ ಆತಂಕ ಪಡುವುದಕ್ಕಿಂತ ಎಚ್ಚರಿಕೆಯಿಂದಿರುವುದು ಉತ್ತಮ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT