ಶುಕ್ರವಾರ, ಮೇ 7, 2021
20 °C

ಉಪ ಚುನಾವಣೆ: 10 ಕೆ.ಜಿ. ಅಕ್ಕಿ, ಕೃಷಿ ಹೊಂಡ ಯೋಜನೆ ಪುನರಾರಂಭ -ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಾಜ್ಯದಲ್ಲಿ 2023ಕ್ಕೆ ಖಂಡಿತವಾಗಿಯೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಬಡವರಿಗೆ ಉಚಿತವಾಗಿ 10 ಕೆ.ಜಿ. ಅಕ್ಕಿ ಕೊಡುತ್ತೇವೆ. ಕೃಷಿ ಹೊಂಡ ಯೋಜನೆ ಪುನರಾರಂಭಿಸುತ್ತೇವೆ. ಇಂದಿರಾ ಕ್ಯಾಂಟೀನ್‌ಗಳನ್ನು ಹೆಚ್ಚು ಮಾಡುತ್ತೇವೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಸವದತ್ತಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ  ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮಾತೆತ್ತಿದರೆ ಹಣವಿಲ್ಲ, ಹಣವಿಲ್ಲ ಎನ್ನುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುರ್ಚಿ ಬಿಟ್ಟು ಇಳಿಯಲಿ. ನಾವು ಸರಿ ಮಾಡುತ್ತೇವೆ’ ಎಂದು ಸವಾಲು ಹಾಕಿದರು.

‘ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಲೂಟಿ ಹೊಡೆದ ಮೇಲೆ ಖಜಾನೆಯಲ್ಲಿ ಹಣ ಎಲ್ಲಿರುತ್ತದೆ?’ ಎಂದು ಕೇಳಿದರು.

‘ಮುಖ್ಯಮಂತ್ರಿಯು ಮಾತೆತ್ತಿದರೆ ಕೊರೊನಾ ಕೊರೊನಾ ಎನ್ನುತ್ತಾರೆ.  ಅದಕ್ಕೆ ಖರ್ಚು ಮಾಡಿರುವುದು ₹ 5,300 ಕೋಟಿ ಮಾತ್ರ, ರಾಜ್ಯದ ಬಜೆಟ್‌ ₹ 2.37 ಲಕ್ಷ ಕೋಟಿ. ಪ್ರತಿಯೊಬ್ಬರಿಗೂ ತಲಾ ₹ 10ಸಾವಿರ ಕೊಡಬಹುದಿತ್ತು ಕೋವಿಡ್ ಸಂದರ್ಭದಲ್ಲಿ. ಅದರಿಂದ ಜನರಿಗೆ ಅನುಕೂಲ ಆಗುತ್ತಿತ್ತು’ ಎಂದರು.

‘ರೈತರ ₹ 1 ಲಕ್ಷ ಸಾಲ ಮನ್ನಾ ಮಾಡುತ್ತೇನೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಆಗಿದೆಯೇ? ಆದರೂ ಹಸಿರು ಶಾಲು ಹಾಕಿಕೊಳ್ಳುತ್ತಾರೆ. ಅದಕ್ಕೆ ಬೆಲೆ ಇದೆಯೇ’ ಎಂದು ಪ್ರಶ್ನಿಸಿದರು. ‘ಇಂತಹ ಲಜ್ಜೆಗೆಟ್ಟವರು ಮತ್ತು ಮಾನಗೆಟ್ಟವರನ್ನು ರಾಜಕೀಯ ಜೀವನದಲ್ಲಿಯೇ ನೋಡಿರಲಿಲ್ಲ’ ಎಂದು ಟೀಕಾಸ್ತ್ರ ಪ್ರಯೋಗಿಸಿದರು.

‘ಸ್ವತಂತ್ರ ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವಷ್ಟು ಪ್ರಧಾನಿಯನ್ನು ಹಿಂದೆಂದೂ ಕಂಡಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದ ಅವರು, ‘ಸುಳ್ಳು ಹೇಳಿದ್ದಕ್ಕೆ ನೊಬೆಲ್ ಪ್ರಶಸ್ತಿ ಸಿಗಬೇಕಾದರೆ ಅದನ್ನು ಮೋದಿಗೆ ಕೊಡಬೇಕಾಗುತ್ತದೆ’ಎಂದು ವ್ಯಂಗ್ಯವಾಡಿದರು.

‘ಮೋದಿ ಪ್ರಧಾನಿಯಾಗಿ ಏಳು ವರ್ಷಗಳಾಗುತ್ತಿದೆ.  ವಿದೇಶದಲ್ಲಿರುವ ಲಕ್ಷಾಂತರ ಕೋಟಿ ರೂಪಾಯಿ ಕಪ್ಪುಹಣ ತರುತ್ತೇನೆ. ಪ್ರತಿ ಕುಟುಂಬಕ್ಕೆ ₹ 15 ಲಕ್ಷ ಜಮಾ ಮಾಡುತ್ತೇನೆ ಎಂದಿದ್ದರು. ಮಾಡಿದರೇ? 15 ಪೈಸೆಯನ್ನೂ ಕೊಡಲಿಲ್ಲ. ಒಂದು ರೂಪಾಯಿ ಕಪ್ಪುಹಣವನ್ನು ತರಲಿಲ್ಲ. ದೇಶದ ಯುವಕರಿಗೆ ನಂಬಿಕೆ ಹುಟ್ಟಿಸಿದರು. ಕೆಲಸ ಸಿಗುತ್ತದೆ ಎಂಬ ಭ್ರಮೆಯಲ್ಲಿ ಯುವಕರು ಮೋದಿ ಮೋದಿ ಮೋದಿ ಎಂದು ಕೂಗಿದರು. ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದರು. 10ಸಾವಿರ ಉದ್ಯೋಗ ಸೃಷ್ಟಿಸುವುದಕ್ಕೂ ಸಾಧ್ಯವಾಗಿಲ್ಲ. ಇರುವ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಸಣ್ಣ ಕೈಗಾರಿಕೆಗಳು ಮುಚ್ಚಿವೆ. ಕಾರ್ಮಿಕರು ಬೀದಿಪಾಲಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ನಮ್ಮ ಸರ್ಕಾರ ಬಂದರೆ ಒಳ್ಳೆಯ ದಿನಗಳು ಬರುತ್ತವೆ ಎಂದಿದ್ದರು. ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇವೆ ಎಂದಿದ್ದರು. ಆಗಿದೆಯೇ? ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಗಗನಕ್ಕೇರಿದೆ. ರಸಗೊಬ್ಬರ, ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ ಬೆಲೆಯೂ ದುಬಾರಿಯಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆಂದೂ ಇಷ್ಟು ಏರಿಕೆ ಆಗಿರಲಿಲ್ಲ. ರೈತರನ್ನು ಜೀವ ಹಿಂಡುವಂತಹ ಸರ್ಕಾರ ದೇಶದ ಇತಿಹಾಸದಲ್ಲೇ ಬಂದಿರಲಿಲ್ಲ. ಒಳ್ಳೆಯ ದಿನಗಳು ಎಂದರೆ ಇವೆಯೇ?’ ಎಂದು ಕೇಳಿದರು.

‘ಬೆಲೆ ಏರಿಕೆ ಬಗ್ಗೆ ಮೋದಿ ಒಮ್ಮೆಯೂ ಮಾತನಾಡುವುದಿಲ್ಲ. ಜನರ ಕಣ್ಣಿಗೆ ಮಣ್ಣೆರಚಿ, ದ್ರೋಹ ಮಾಡುತ್ತಿದ್ದಾರೆ. ಸರ್ವಾಧಿಕಾರಿ ಹಿಟ್ಲರ್‌ ನೀತಿ ಅನುಸರಿಸುತ್ತಿದ್ದಾರೆ. ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ. ಬೆಲೆ ಏರಿಕೆಯಿಂದ ಎಲ್ಲರ ಮನೆ ಮನೆಗೆ ಬೆಂಕಿ ಬಿದ್ದಿದೆ. ಇನ್ಮುಂದೆಯೂ ಅವರು ಸುಳ್ಳು ಹೇಳುವುದಕ್ಕೆ ಆಗುವುದಿಲ್ಲ’ ಎಂದರು.

‘ಕಳಸಾ ಬಂಡೂರಿ ನಾಲಾ ಅನುಷ್ಠಾನಕ್ಕೆ ಒಮ್ಮೆ ನಿಯೋಗ ಕರೆದುಕೊಂಡು ಹೋಗಿದ್ದೆ. ಆಗ ಪ್ರಧಾನಿ, ಗೋವಾದವರನ್ನು ಒಪ್ಪಿಸಿ ಎಂದರು. ಪ್ರಧಾನಿ ಹೇಳುವ ಮಾತೇ ಇದು?’ ಎಂದು ತಿಳಿಸಿದರು.

‘ಕೋವಿಡ್ ನಿಯಂತ್ರಣಕ್ಕೆ ಕ್ರಮ ವಹಿಸುವುದು ಬಿಟ್ಟು, ಚಪ್ಪಾಳೆ ತಟ್ಟಿ, ದೀಪ ಹಚ್ಚಿ, ಜಾಗಟೆ ಬಾರಿಸಿ ಎಂದರೆ ಕೊರೊನಾ ಹೋಗುತ್ತದೆಯೇ? ಮೋದಿ ಅವರಂತೂ ಜನರ ನಡುವೆ ಬರುವುದಿಲ್ಲ. ಜನರೇನು ಮಾಡಬೇಕು. ಜನರೊಂದಿಗೆ ಇರುವ ನನಗೆ ಕೋವಿಡ್ ಬಂತು. ಮತ್ತೆ ರಾಜ್ಯದಲ್ಲಿ ಸೋಂಕು ಹರಡುತ್ತಿದೆ. 

‘ಆಪರೇಷನ್ ಕಮಲ ಚಾಲ್ತಿಗೆ ತಂದ ಬಿ.ಎಸ್. ಯಡಿಯೂರಪ್ಪ ಯಾವಾಗಲೂ ಹಿಂಬಾಗಿಲಲ್ಲೇ ಅಧಿಕಾರಕ್ಕೆ ಬಂದಿದ್ದಾರೆ. ತಲಾ ₹ 30ರಿಂದ ₹ 40 ಕೋಟಿ ಖರ್ಚು ಮಾಡಿ ನಮ್ಮ ಶಾಸಕರನ್ನು ಖರೀದಿಸದರು.  ಆ ಹಣವನ್ನು ಅವರ ಮನೆಯಿಂದ ತಂದರೇ? ಲೂಟಿ ಮಾಡಿದ ಹಣವದು’ ಎಂದು ವಾಗ್ದಾಳಿ ನಡಸಿದರು.

‘ಬಡವರಿಗಾಗಿ ತೆರೆದ ಇಂದಿರಾ ಕ್ಯಾಂಟೀನ್ ಮುಚ್ಚುತ್ತಿರುವವರನ್ನು ಬಡವರ ವಿರೋಧಿ ಎನ್ನಬೇಕೋ ಬೇಡವೋ?’ ಎಂದರು.

‘ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ.  ಸಂಬಳ ಕೊಡುವುದಕ್ಕೆ ಹಣವಿಲ್ಲದ ಸ್ಥಿತಿ ಬಂದಿದೆ. ₹ 100 ಆದಾಯ ಬಂದರೆ ₹ 102 ಖರ್ಚಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ವರಮಾನ ಖೋತಾ ಆಗಿರಲಿಲ್ಲ. ಈಗ ಸಾಲ ಪಡೆದು ಸಂಬಳ ನೀಡುವಂತಹ ದುಃಸ್ಥಿತಿ ಇದೆ. ಹೀಗೆಯೇ ಆದರೆ ರಾಜ್ಯ ಉಳಿಯುತ್ತದೆಯೇ? ಉಳಿಸುವುದು ಜನರ ಕೈಯಲ್ಲಿದೆ. ಈ ಉಪ ಚುನಾವಣೆಯನ್ನು ಅದಕ್ಕೆ ಬಳಸಿಕೊಳ್ಳಬೇಕು’ ಎಂದು ಕೋರಿದರು.

ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ, ಶಾಸಕ ಎಂ.ಬಿ. ಪಾಟೀಲ, ಮುಖಂಡರಾದ ಕೆ.ಎಚ್. ಮುನಿಯಪ್ಪ, ಪ್ರಕಾಶ ಹುಕ್ಕೇರಿ, ಅಶೋಕ ಪಟ್ಟಣ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು