ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವತತ್ವದ ಅನುಯಾಯಿ ನಾನು: ಸಿದ್ದರಾಮಯ್ಯ ಪುನರುಚ್ಚಾರ

Last Updated 16 ಫೆಬ್ರುವರಿ 2020, 9:12 IST
ಅಕ್ಷರ ಗಾತ್ರ

ಬೆಂಗಳೂರು:ಬಸವತತ್ವಗಳನ್ನು ಅನುಸರಿಸುವವ ಮತ್ತು ಅವರ ಪ್ರಬಲ ಸಿದ್ಧಾಂತಗಳ ಪ್ರತಿಪಾದಕ ನಾನು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದರು.

‘ಅಸಂಖ್ಯ ಪ್ರಮಥರ ಗಣಮೇಳ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ವೈದಿಕ ಧರ್ಮಕ್ಕೆ ಪರ್ಯಾಯವಾಗಿ, ವೈಚಾರಿಕವಾಗಿ, ಧರ್ಮಾತೀತವಾಗಿ ಮತ್ತು ಜಾತ್ಯತೀತ, ಕರ್ಮ ಸಿದ್ಧಾಂತ, ಕಂದಾಚಾರ, ಮೌಢ್ಯಗಳನ್ನು ದೂರವಿಟ್ಟ ಧರ್ಮ ಎಂದರೆ ಅದು ಬಸವಾದಿ ಶಿವಶರಣರ ಲಿಂಗಾಯತ ಧರ್ಮ’ಎಂದು ಅಭಿಪ್ರಾಯಪಟ್ಟರು.

‘ಬಸವಣ್ಣನವರ ಕಾಲದಲ್ಲಿ ಮಾಡಿದ ಅಸಂಖ್ಯ ಪ್ರಮಥರ ಗಣಮೇಳವನ್ನು ಇಂದು ಶಿವಮೂರ್ತಿ ಶರಣರು ಮರುಕಳಿಸಿದ್ದಾರೆ. ಇಡೀ ಸಮಾಜದ ಶ್ಲಾಘನೆಗೆ ಪಾತ್ರರಾಗಿದ್ದಾರೆ. 900 ವರ್ಷಗಳ ನಂತರ ಜಗತ್ತಿನ ಸಾಮಾಜಿಕ ವ್ಯವಸ್ಥೆಗೆ ಪರಿವರ್ತನೆಗೆ ಇಂತಹ ಸಮಾವೇಶಗಳು ಪ್ರಸ್ತುತ ಹಾಗೂ ಅವಶ್ಯ’ಎಂದರು‌‌.

‘ನಮ್ಮ ದೇಶ ಅನೇಕ ಜನ ಸಮಾಜ ಸುಧಾರಕರನ್ನು, ದಾರ್ಶನಿಕರನ್ನು, ಸಂತರನ್ನು, ಶರಣರನ್ನು, ಸೂಫಿಗಳನ್ನು ನೀಡಿದೆ. ಅವರೆಲ್ಲಾ ಸಮಾಜದ ಪರಿವರ್ತನೆಗೆ, ಬದಲಾವಣೆಗೆ, ಮಾನವೀಯ ಮೌಲ್ಯಗಳ ಸ್ಥಾಪನೆಗೆ ಶತಮಾನಗಳಿಂದ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಜಾತಿ ವ್ಯವಸ್ಥೆಯನ್ನು, ಅಸಮಾನತೆಯನ್ನು ತೊಡೆದು ಹಾಕಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ’ಎಂದರು.

‘ಇವನಾರವ ಇವನಾರವ ಎಂದು ಕೇಳುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಚನಗಳು ಪಠಣ ಮಾಡಲಿಕ್ಕೆ ಅಲ್ಲ. ನುಡಿದಂತೆ ನಡೆದವರು ಬಸವಾದಿ ಶರಣರು. ಸಮಾಧಾನಕರವಾಗಿ ಬಾಳಿದರೆ ಅದು ಸಾರ್ಥಕ. ಇಲ್ಲದಿದ್ದರೆ ನಿರರ್ಥಕ’ ಎಂದರು.

‘ನಮ್ಮ ಸಂವಿಧಾನದಲ್ಲಿ ಭೇದ ಭಾವಗಳಿಗೆ ಆಸ್ಪದವಿಲ್ಲ. ಅದು ಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ ಸಾರುತ್ತದೆ. ಇದರಲ್ಲಿ ಅಗೌರವ, ಅಸಮಾನತೆಗೆ ಆಸ್ಪದವಿಲ್ಲ‌ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಶಿವಮೂರ್ತಿ ಮುರುಘಾ ಶರಣರು ನನಗೆ ನೈತಿಕ ಸ್ಥೈರ್ಯ ತುಂಬಿದ ಸ್ವಾಮೀಜಿಗಳ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ. ನನ್ನ ಅಹಿಂದ ಸಮಾವೇಶಗಳ ಕಾಲದಿಂದಲೂ ಅವರು ನನಗೆ ಶಕ್ತಿ ತುಂಬಿದವರು. ಅವರನ್ನು ಮರೆಯಲು ಸಾಧ್ಯವಿಲ್ಲ’ಎಂದರು.

‘ಅಸಮಾನತೆ, ಬಡತನ, ಭೇದ ಭಾವ, ತಾರತಮ್ಯ, ಸಾಮಾಜಿಕ ಅಸಮಾನತೆ ಇದೆ. ಯಾಕೆ ಸಮಾನತೆ ಬಂದಿಲ್ಲ ಎಂದರೆ, ಜಾತಿ ವ್ಯವಸ್ಥೆ ಅದಕ್ಕೆ ಅಡ್ಡಿಯಾಗಿದೆ. ಅದಕ್ಕೆ ಚಲನೆ ನೀಡಬೇಕಿದೆ. ಸಮಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಮಾಮತೆ ಸಾಧಿಸಬೇಕು’ ಎಂದು ತಿಳಿಸಿದರು.

‘ಇಂದು ಎಲ್ಲೆಡೆ ಜಾತಿ ವ್ಯವಸ್ಥೆ ಗಟ್ಟಿಯಾಗಿ ಕೂತಿದೆ. ಇದು ಹೋಗಬೇಕು. ಇದಕ್ಕಾಗಿ ಇಂತಹ ಪ್ರಯತ್ನ ಶ್ಲಾಘನೀಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT