ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ಇಲಾಖೆಯಿಂದ ಸಿರಸಂಗಿ ಲಿಂಗರಾಜರ ಜಯಂತಿ ಆಚರಿಸಿ’

ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ
Last Updated 10 ಜನವರಿ 2021, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾವಿತ್ರಿಬಾಯಿ ಫುಲೆ ಜಯಂತಿ ಮಾದರಿಯಲ್ಲಿರಾಜ್ಯದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಜ.10ರಂದು ‘ಸಿರಸಂಗಿ ಲಿಂಗರಾಜ ದೇಸಾಯಿ’ ಅವರ ಜಯಂತಿಯನ್ನು ಆಚರಿಸಬೇಕು’ ಎಂದುಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಸಿರಸಂಗಿ ಲಿಂಗರಾಜರ ಅಭಿಮಾನಿ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಿರಸಂಗಿ ಲಿಂಗರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ನಿಜವಾಗಿ ಅಭಿಮಾನವಿದ್ದರೆ, ಮುಂದಿನ ವರ್ಷದಿಂದಲೇ ಲಿಂಗರಾಜರ ಜಯಂತಿ ಆಚರಿಸಬೇಕು. ಈ ಮೂಲಕ ಶಿಕ್ಷಣ ಪ್ರಭು ಸಿರಸಂಗಿ ಲಿಂಗರಾಜರ ಕೊಡುಗೆಯನ್ನು ದೇಶಕ್ಕೆ ಹಾಗೂ ಮುಂದಿನ ಪೀಳಿಗೆಗೆ ತಲುಪಿಸಬೇಕು’ ಎಂದು ಆಗ್ರಹಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ತನ್ನ ಸಂಸ್ಥಾನದ ಆಸ್ತಿಯನ್ನು ಸಮಾಜದ ಮಕ್ಕಳ ಶಿಕ್ಷಣಕ್ಕೆ ಮುಡಿಪಿಟ್ಟ ಏಕೈಕ ಸಂಸ್ಥಾನ ಸಿರಸಂಗಿ. ಲಿಂಗರಾಜ ದೇಸಾಯಿ ಅವರ ದೂರದೃಷ್ಟಿಯ ಫಲ ಬಿ.ಡಿ.ಜತ್ತಿ, ವಿ.ಜಿ.ಮಳಿಮಠ, ಡಿ.ಸಿ.ಪಾವಟೆ ಅವರಂಥ ಮಹನೀಯರು ಹೊರಹೊಮ್ಮಲು ಕಾರಣವಾಯಿತು’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ‘ಶಿಕ್ಷಣ ಕ್ಷೇತ್ರಕ್ಕೆ ಲಿಂಗರಾಜರ ಕೊಡುಗೆ ಅಪಾರ.ಮುಂದಿನ ವರ್ಷ ಅವರ ಕಾರ್ಯಕ್ರಮ ದೆಹಲಿಯಲ್ಲಿ ಹಮ್ಮಿಕೊಂಡು ಪ್ರಧಾನಿ ಅವರಿಗೆ ಆಹ್ವಾನ ನೀಡಬೇಕು. ಇದಕ್ಕಾಗಿ ಸರ್ಕಾರಕ್ಕೆೆ ಭಿಕ್ಷೆೆ ಬೇಡುವುದು ಬೇಡ. ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಆಯೋಜಿಸೋಣ. ಒಪ್ಪಿದರೆ, ನನ್ನ ನೇತೃತ್ವದಲ್ಲೇ ಧಾರವಾಡದಲ್ಲೂ ಕಾರ್ಯಕ್ರಮ ಏರ್ಪಡಿಸಲಾಗುವುದು’ ಎಂದರು.

ಶಾಸಕ ಎಂ.ಬಿ. ಪಾಟೀಲ, ‘ರಾಜ್ಯದಲ್ಲಿ ಶೇ 18ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಲಿಂಗಾಯತರು ಉಪಪಂಗಡಗಳಲ್ಲಿ ಹಂಚಿಹೋಗದೆ, ಒಗ್ಗಟ್ಟಾಗಿ ಸಮುದಾಯದ ಹಕ್ಕು ಪ್ರತಿಪಾದಿಸಬೇಕು. ಸಮಸ್ತ ವೀರಶೈವ-ಲಿಂಗಾಯತ ಸಮುದಾಯಕ್ಕೆ ಭದ್ರ ಅಡಿಪಾಯ ಹಾಕಿದ ಲಿಂಗರಾಜರನ್ನು ಪರಿಚಯಿಸುವ ಕಾರ್ಯ ಮಾಡಿಲ್ಲ. ಮುಂದಿನ ದಿನಗಳಲ್ಲಿ ಲಿಂಗರಾಜ ಶಿಕ್ಷಣ ಟ್ರಸ್ಟ್‌ನಿಂದ ಸಿಇಟಿ ಸೀಟು ಪಡೆದವರಿಗೆ ಶಿಷ್ಯವೇತನ ನೀಡಲಾಗುವುದು’ ಎಂದರು.

ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ‘ಲಿಂಗರಾಜರು ಒಬ್ಬ ವ್ಯಕ್ತಿ ಹಾಗೂ ಶಕ್ತಿಯೂ ಹೌದು. ಆದರೆ, ನಾವು ಅವರನ್ನು ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ಇದೇ ಸ್ಥಿತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ವಿಚಾರದಲ್ಲೂ ಆಗಿದೆ.ಲಿಂಗರಾಜರ ಕೊಡುಗೆಗಳನ್ನು ಜನರಿಗೆ ಕೊಂಡೊಯ್ಯಲು ಈಗಲಾದರೂ ಎಚ್ಚೆತ್ತುಕೊಳ್ಳಬೇಕು’ ಎಂದರು.

ಗದುಗಿನ ಯಡಿಯೂರು ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಸ್ವರೂಪಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT