ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಸಿಡಿಆರ್ ನೆಪ: ನಿವೇಶನ ನೋಂದಣಿಗೆ ಮೀನಮೇಷ

Last Updated 23 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನಗಳ ಖಚಿತ ಅಳತೆ ವರದಿ (ಸಿಡಿಆರ್‌) ನೀಡುವ ವ್ಯವಸ್ಥೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆನ್‌ಲೈನ್ ವ್ಯವಸ್ಥೆಗೆ ಅಳವಡಿಸಿದ್ದು, ಇ–ಸಿಡಿಆರ್ ನೀಡುವ ವ್ಯವಸ್ಥೆ ಸೋಮವಾರದಿಂದಲೇ ಜಾರಿಗೆ ಬಂದಿದೆ.

ಸಿಡಿಆರ್‌ ನೀಡುವ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ಈ ಸುಧಾರಣಾ ಕ್ರಮವನ್ನೇ ಮುಂದಿಟ್ಟುಕೊಂಡು ಬಿಡಿಎ ಅಧಿಕಾರಿಗಳು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನದಾರರ ನಿವೇಶನಗಳ ನೋಂದಣಿ ಮಾಡಿಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ನಿವೇಶನ ನೋಂದಣಿಗೆ ಕಚೇರಿಗೆ ಬಂದ ಅನೇಕರನ್ನು ಸೋಮವಾರ ಹಿಂದಕ್ಕೆ ಕಳುಹಿಸಿದ್ದಾರೆ.

‘ನನ್ನ ನಿವೇಶನ ನೋಂದಣಿಗೆ ಎರಡು ತಿಂಗಳು ಹಿಂದೆಯೇ ಅರ್ಜಿ ಹಾಕಿದ್ದೆ. ನೋಂದಣಿಗೆ ಬಿಡಿಎ ಅಧಿಕಾರಿಗಳು ಸೋಮವಾರ (ಸೆ. 23) ದಿನವನ್ನು ನಿಗದಿಪಡಿಸಿದ್ದರು. ಇಂದು ಕಚೇರಿಗೆ ಹೋದಾಗ ನಿವೇಶನದ ಇ–ಸಿಡಿಆರ್ ಲಭ್ಯವಿಲ್ಲ ಎಂದು ಹೇಳಿ ನೋಂದಣಿಯನ್ನು ಅ. 31ಕ್ಕೆ ಮುಂದೂಡಿದರು’ ಎಂದು ಉಮಾದೇವಿ ಎಂಬುವರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ನನ್ನ ನಿವೇಶನ ನೋಂದಣಿಗೆ ಇದೇ 30ರಂದು ದಿನಾಂಕ ನಿಗದಿಪಡಿಸಿದ್ದರು. ಇದಕ್ಕೆ ಯಾವ ದಾಖಲೆಗಳನ್ನು ಒದಗಿಸಬೇಕು ಎಂದು ವಿಚಾರಿಸಲು ಉಪಕಾರ್ಯದರ್ಶಿ–2 ಕಚೇರಿಗೆ ಭೇಟಿ ನೀಡಿದ್ದೆ. ನಿವೇಶನದ ಇ– ಸಿಡಿಆರ್‌ ಇನ್ನೂ ಬಂದಿಲ್ಲ. ಅದಿಲ್ಲದೆ ನೋಂದಣಿ ಸಾಧ್ಯವಿಲ್ಲ. ನೋಂದಣಿಗೆ ಕನಿಷ್ಠ ಒಂದೂವರೆ ತಿಂಗಳು ಬೇಕಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು’ ಎಂದು ಇನ್ನೊಬ್ಬ ನಿವೇಶನದಾರ ಶಿವಣ್ಣ ತಿಳಿಸಿದರು.

‘ನಾನು 18 ವರ್ಷಗಳಿಂದ ಬಿಡಿಎ ನಿವೇಶನ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಮಂಜೂರಾದರೂ, ಕಚೇರಿ ಅಲೆದಾಟ ತಪ್ಪಿಲ್ಲ. ನಿವೇಶನ ನೋಂದಣಿ ಮುಗಿದರೆ ಬಹುಪಾಲು ಕೆಲಸ ಮುಗಿಯಿತು ಭಾವಿಸಿದ್ದೆ. ಕೊನೆ ಹಂತದಲ್ಲಿ ನೋಂದಣಿ ದಿನಾಂಕವನ್ನು ಮುಂದೂಡಿದ್ದಾರೆ. ಯಾವಾಗ ನೋಂದಣಿ ಮಾಡಿಕೊಡುತ್ತೇವೆ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಅಷ್ಟಕ್ಕೂ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳ ನೋಂದಣಿಗೆ ದಿನಾಂಕ ನಿಗದಿಪಡಿಸಿದ ಬಳಿಕ, ಅದೇ ದಿನವೇ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದಕ್ಕೂ ಇ–ಸಿಡಿಆರ್‌ಗೂ ಸಂಬಂಧವಿಲ್ಲ. ನಮ್ಮ ಅಧಿಕಾರಿಗಳು ಆ ರೀತಿ ಹೇಳಿದ್ದರೆ ಅವರಲ್ಲಿ ವಿವರಣೆ ಕೇಳುತ್ತೇನೆ. ನಿವೇಶನ ನೋಂದಣಿ ವಿಳಂಬ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಬಿಡಿಎ ಆಯುಕ್ತ ಜಿ.ಸಿ.ಪ್ರಕಾಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇ–ಸಿಡಿಆರ್‌ ಪಡೆಯುವುದಕ್ಕೆ ತಿಂಗಳುಗಟ್ಟಲೆ ಸಮಯ ಬೇಕಿಲ್ಲ. ಒಂದು ವಾರದೊಳಗೆ ಪ್ರಕ್ರಿಯೆ ಮುಗಿಯುತ್ತದೆ. ಈ ಹಿಂದೆ ಒಂದೇ ನಿವೇಶನದ ಖಚಿತ ಅಳತೆ ವರದಿಯನ್ನು 2–3 ಮಂದಿಗೆ ನೀಡಿದ್ದ ಬಗ್ಗೆ ದೂರುಗಳು ಬಂದಿದ್ದವು. ಪಾರದರ್ಶಕತೆ ತರುವ ಉದ್ದೇಶದಿಂದ ಸಿಡಿಆರ್‌ ನೀಡುವ ವ್ಯವಸ್ಥೆಯನ್ನು ಆನ್‌ಲೈನ್‌ ಮೂಲಕ ನಿರ್ವಹಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಇದರಿಂದ ರೈತರಿಗೆ ಹಾಗೂ ನಿವೇಶನದಾರರಿಗೆ ಅನುಕೂಲವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

‘ನಿವೇಶನ ನೋಂದಣಿ ವಿಳಂಬ ಆಗದಿರಲಿ’

‘ಇ–ಸಿಡಿಆರ್‌ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದು ಒಳ್ಳೆಯದೇ. ಇದನ್ನು ಬಯಸದ ಕೆಲವು ತಳಮಟ್ಟದ ಅಧಿಕಾರಿಗಳು ನಿವೇಶನದಾರರನ್ನು ಸತಾಯಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಅನೇಕರು ನಮ್ಮ ಬಳಿ ದೂರು ಹೇಳಿಕೊಂಡಿದ್ದಾರೆ’ ಎಂದುಎನ್‌ಪಿಕೆ ಮುಕ್ತ ವೇದಿಕೆಯ ಎ.ಎಸ್‌.ಸೂರ್ಯಕಿರಣ್‌ ತಿಳಿಸಿದರು.

‘ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆದ ಅನೇಕರು ಅದನ್ನು ನೋಂದಣಿ ಮಾಡಿಸಲು ಆರೇಳು ತಿಂಗಳುಗಳಿಂದ ಕಾಯುತ್ತಿದ್ದಾರೆ. ದಿನಕ್ಕೆ ಹೆಚ್ಚೆಂದರೆ 20–30 ಮಂದಿಯ ನಿವೇಶನಗಳನ್ನು ಮಾತ್ರ ನೋಂದಾಯಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಎಲ್ಲ ನಿವೇಶನಗಳ ನೋಂದಣಿಗೆ ವರ್ಷಗಟ್ಟಲೆ ತಗಲುತ್ತದೆ. ಕನಿಷ್ಠ ಪಕ್ಷ ನಿಗದಿತ ದಿನದಂದೇ ನಿವೇಶನ ನೋಂದಣಿ ಆಗುವಂತೆ ಹೊಸ ಆಯುಕ್ತರು ಕ್ರಮವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ವಿಳಂಬದ ಹಿಂದೆ ಲಂಚಾವತಾರ’

‘ನಿವೇಶನ ನೋಂದಣಿಗೆ ಹೋದಾಗ, ‘ನಿಮ್ಮ ಸಿಡಿಆರ್‌ ಇನ್ನೂ ಬಂದಿಲ್ಲ. ತೀರಾ ತುರ್ತಾಗಿ ನೋಂದಣಿ ಆಗಬೇಕಿದ್ದರೆ ನೀವೇ ವಲಯ ಕಚೇರಿಯಿಂದ ಸಿಡಿಆರ್‌ ತನ್ನಿ ಎಂದು ಬಿಡಿಎ ಕೇಂದ್ರ ಕಚೇರಿ ಸಿಬ್ಬಂದಿ ಹೇಳುತ್ತಾರೆ. ಸಿಡಿಆರ್‌ ಪಡೆಯಲು ವಲಯ ಕಚೇರಿ ಅಧಿಕಾರಿಗಳ ಕೈಬಿಸಿ ಮಾಡಬೇಕಿತ್ತು. ಈಗ ಇ– ಸಿಡಿಆರ್‌ ವ್ಯವಸ್ಥೆ ಬಂದಿದೆ. ಇದೊಂದು ಉತ್ತಮ ಬೆಳವಣಿಗೆ. ಇದನ್ನೇ ಮುಂದಿಟ್ಟುಕೊಂಡು ಬಿಡಿಎ ಅಧಿಕಾರಿಗಳು ನಿವೇಶನದಾರರನ್ನು ಮತ್ತಷ್ಟು ಸತಾಯಿಸುತ್ತಿರುವುದು ವಿಪರ್ಯಾಸ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ನಿವೇಶನದಾರರೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT