ಬುಧವಾರ, ಮಾರ್ಚ್ 29, 2023
27 °C

ಚಿಕ್ಕಪೇಟೆ ಕ್ಷೇತ್ರ ಸ್ಥಿತಿ ಗತಿ: ಬಹುಭಾಷಿಕರ ನೆಲದಲ್ಲಿ ಟಿಕೆಟ್‌ಗೆ ಪೈಪೋಟಿ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಹುಭಾಷಿಕರ ನೆಲ, ಜವಳಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿರುವ ಚಿಕ್ಕಪೇಟೆ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್‌ಗೆ ಚಿನ್ನಾಭರಣ ವ್ಯಾಪಾರಿಗಳು ಹಾಗೂ ಬಿಲ್ಡರ್‌ಗಳಂತಹ ಕುಬೇರರೇ ತುದಿಗಾಲಿನಲ್ಲಿ ನಿಂತಿದ್ದಾರೆ.

ಮತ್ತೊಂದು ಜಯದೊಂದಿಗೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಕಸರತ್ತು ನಡೆಸುತ್ತಿದ್ದರೆ, ಬಿಜೆಪಿಯ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌ ‘ತಂತ್ರ’ ರೂಪಿಸುತ್ತಿದೆ. ಎಸ್‌ಡಿಪಿಐ, ಜೆಡಿಎಸ್‌ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಯ ಶೋಧದಲ್ಲಿದೆ. ಕ್ಷೇತ್ರದಿಂದ ಸ್ಪರ್ಧಿಸಲು ಅಭ್ಯರ್ಥಿಗಳ ದಂಡೇ ಇದೆ.

ಕಳೆದ ಕೆಲ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆಯೇ ಜಯ ತೂಗುಯ್ಯಾಲೆ ಆಡುತ್ತಿದೆ. 1999ರಲ್ಲಿ ಜಿ.ಡಿ.ನಾಯಕ್‌ (ಕಾಂಗ್ರೆಸ್‌), 2004ರಲ್ಲಿ ನಾಯಕ್‌ ಶಿವಾನಂದ್ ನಾರಾಯಣ (ಬಿಜೆಪಿ), 2008ರಲ್ಲಿ ಡಾ.ಹೇಮಚಂದ್ರ ಸಾಗರ್‌ (ಬಿಜೆಪಿ), 2013ರಲ್ಲಿ ಆರ್‌.ವಿ.ದೇವರಾಜು (ಕಾಂಗ್ರೆಸ್‌), 2018ರಲ್ಲಿ ಉದಯ್‌ ಗರುಡಾಚಾರ್‌ (ಬಿಜೆಪಿ) ಗೆಲುವು ಸಾಧಿಸಿದ್ದಾರೆ.

ರಾಜಸ್ಥಾನ ಹಾಗೂ ಗುಜರಾತ್‌ನಿಂದ ಬಂದಿರುವ ವ್ಯಾಪಾರಸ್ಥರು, ತಮಿಳು ಹಾಗೂ ತೆಲುಗು ಭಾಷಿಕರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗರು, ಪರಿಶಿಷ್ಟರು, ಮುಸ್ಲಿಮರೂ ನೆಲೆಸಿದ್ದಾರೆ. ಕ್ಷೇತ್ರದಲ್ಲಿ ಕೊಳೆಗೇರಿಗಳೂ ಸಾಕಷ್ಟಿವೆ. ಜಾತಿ ಸಮೀಕರಣಕ್ಕಿಂತ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಮೇಲೆ ಫಲಿತಾಂಶ ನಿರ್ಧಾರ ಆಗಿರುವುದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.


Caption

ಮತದಾರರ ಖಾಸಗಿ ಮಾಹಿತಿ ಕಳವು ಮಾಡಿದ್ದ ಆರೋಪವು ಈ ಕ್ಷೇತ್ರದಲ್ಲೂ ಕೇಳಿಬಂದಿತ್ತು. ಆ ಕಾರಣಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಲಾಗಿದೆ.

ಮತ್ತೊಮ್ಮೆ ಬಿಜೆಪಿಯ ಟಿಕೆಟ್ ನಿರೀಕ್ಷೆಯಲ್ಲಿ ಶಾಸಕ ಉದಯ್‌ ಗರುಡಾಚಾರ್‌ ಇದ್ದರೆ, ಪಕ್ಷದ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಹೆಸರೂ ಚಾಲ್ತಿಯಲ್ಲಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಆರ್‌.ವಿ.ದೇವರಾಜ್‌ ಹಾಗೂ ಅವರ ಪುತ್ರ, ಬಿಬಿಎಂಪಿ ಮಾಜಿ ಸದಸ್ಯ ಯುವರಾಜ್‌ ಪ್ರಬಲ ಆಕಾಂಕ್ಷಿಗಳು. ಪಿ.ಆರ್‌.ರಮೇಶ್‌, ಗಂಗಾಬಿಕೆ ಸಹ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದರೂ ‘ಕೆಜಿಎಫ್‌’ ಬಾಬು ಅದೇ ಪಕ್ಷದಿಂದ ಟಿಕೆಟ್‌ ಪಡೆಯುವ ಪ್ರಯತ್ನದಲ್ಲಿದ್ದಾರೆ.

ಜೆಡಿಎಸ್‌ನಿಂದ ಸಾಯಿ ಗೋಲ್ಡ್‌ ಪ್ಯಾಲೇಸ್‌ನ ಮಾಲೀಕ, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಕ್ಷೇತ್ರದ ಜೆಡಿಎಸ್‌ ಘಟಕದ ಅಧ್ಯಕ್ಷೆ ಲತಾ ಶಿವಕುಮಾರ್ ಟಿಕೆಟ್‌ ಬಯಸಿದ್ದಾರೆ. ಕಾಂಗ್ರೆಸ್‌ ತೊರೆದು ಎಎಪಿ ಸೇರಿರುವ ಸುಪ್ರೀಂ ಕೋರ್ಟ್‌ ವಕೀಲ ಬ್ರಜೇಶ್ ಕಾಳಪ್ಪ ಈ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದಾರೆ.

ಎಸ್‌ಡಿಪಿಐ ಪ್ರಭಾವ:

ಕ್ಷೇತ್ರದ ಚುನಾವಣೆ ಫಲಿತಾಂಶ ಮೇಲೆ ಎಸ್‌ಡಿಪಿಐ ಮಹತ್ವ ಪಾತ್ರ ವಹಿಸುತ್ತಿದೆ. 2013ರ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಮುಜೀರ್‌ ಪಾಷಾ 4,821 ಮತಗಳನ್ನು ಪಡೆದಿದ್ದರು. 2018ರ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಪಾಷಾ 11,700 ಮತ ಪಡೆದಿದ್ದರು. ಎಸ್‌ಡಿಪಿಐ ಮತ ಗಳಿಕೆ ಪ್ರಮಾಣ ಏರಿದೆ. ಈ ಎಲ್ಲ ಲೆಕ್ಕಾಚಾರಗಳನ್ನು ಗಮನಿಸಿಯೇ ಪ್ರಮುಖ ಪಕ್ಷಗಳು ಟಿಕೆಟ್‌ ನೀಡುವ ಸಾಧ್ಯತೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು