ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಡ್ತಿ ಭೀತಿಯಲ್ಲಿದ್ದ ಆರು ಐಎಎಸ್‌ ಅಧಿಕಾರಿಗಳು ನಿರಾಳ

ಕೆಪಿಎಸ್‌ಸಿ ಪರಿಷ್ಕೃತ ಆಯ್ಕೆ ಪಟ್ಟಿ ರದ್ದುಗೊಳಿಸಿದ ಕೆಎಟಿ
Last Updated 6 ಅಕ್ಟೋಬರ್ 2020, 19:27 IST
ಅಕ್ಷರ ಗಾತ್ರ

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಕುರಿತು ಹೈಕೋರ್ಟ್ ತೀರ್ಪಿನಂತೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) 2019ರ ಜ. 25 ಮತ್ತು ಆ. 22ರಂದು ಪ್ರಕಟಿಸಿದ್ದ ಎರಡು ಪರಿಷ್ಕೃತ ಆಯ್ಕೆ ಪಟ್ಟಿಗಳನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಗೊಳಿಸಿದೆ. ಆ ಆದೇಶದಿಂದ ಹಿಂಬಡ್ತಿ ಭೀತಿಯಲ್ಲಿದ್ದ ಆರು ಐಎಎಸ್ ಅಧಿಕಾರಿಗಳು ಈ ಆದೇಶದಿಂದ
ನಿರಾಳರಾಗಿದ್ದಾರೆ.

ಕೆಪಿಎಸ್‌ಸಿ ಹೊರಡಿಸಿದ್ದ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಐಎಎಸ್ ಅಧಿಕಾರಿ ಜಿ.ಸಿ. ವೃಷಬೇಂದ್ರ ಮೂರ್ತಿ ಸೇರಿದಂತೆ ಇತರ ಐದು ಮಂದಿ ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ಕೆಎಟಿ ಅಧ್ಯಕ್ಷ ನ್ಯಾಯಮೂರ್ತಿ ಡಾ.ಕೆ. ಭಕ್ತವತ್ಸಲಾ ಮತ್ತು ಸದಸ್ಯ ಎಸ್.ಕೆ. ಪಟ್ಟಾನಾಯಕ್ ಅವರಿದ್ದ ಪೀಠ ಈ ಆದೇಶ ನೀಡಿದೆ.

2019ರಲ್ಲಿ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಮೀಸಲಾತಿ ನಿಯಮವನ್ನು ಸರ್ಕಾರ ಜಾರಿಗೊಳಿಸಿಲ್ಲ. ‘ಕರ್ನಾಟಕ ನಾಗರಿಕ ಸೇವೆಗಳ (ನೇಮಕಾತಿ ಸಂದರ್ಭಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ) ಕಾಯ್ದೆ– 2018’ನ್ನು ಜಾರಿಗೆ ತಂದಿದ್ದು ಮೀಸಲಾತಿ ಬದಲಾವಣೆ ಮಾಡಿಲ್ಲ. ಒಂದನೇ ಮತ್ತು ಎರಡನೇ ಮೌಲ್ಯಮಾಪನದಲ್ಲಿ 90 ಅಂಕ ವ್ಯತ್ಯಾಸವಿದ್ದರೆ ಅಂಥ ಉತ್ತರ ಪತ್ರಿಕೆಗಳನ್ನು ಮೂರನೇ ಮೌಲ್ಯಮೌಪನಕ್ಕೆ ಒಪ್ಪಿಸಬೇಕು ಎಂದು ನೀಡಿದ್ದ ಆದೇಶ ಪಾಲಿಸಿಲ್ಲ. ಆದ್ದರಿಂದ, ಪರಿಷ್ಕೃತ ಪಟ್ಟಿಗಳನ್ನು ರದ್ದುಪಡಿಸುತ್ತಿರುವುದಾಗಿ ಪೀಠ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಎಸ್. ಭಾಗವತ್, ‘ಹೈಕೋರ್ಟ್ ಆದೇಶದಂತೆ, 91 ಉತ್ತರ ಪತ್ರಿಕೆಗಳ ಮೂರನೇ ಮೌಲ್ಯಮಾಪನದ ಅಂಕ ಪರಿಗಣಿಸಬೇಕಿತ್ತು, ಆದರೆ, ಕೆಪಿಎಸ್‌ಸಿ 91 ಅಭ್ಯರ್ಥಿಗಳ ಅಂಕಗಳನ್ನು ಪರಿಗಣಿಸಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಅಲ್ಲದೆ, ‘ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ, ಪಟ್ಟಿ ಪರಿಷ್ಕರಣೆಯಿಂದ ಯಾವುದೇ ರೀತಿಯ ತೊಂದರೆಯಾದಲ್ಲಿ ಅಭ್ಯರ್ಥಿ ಕೆಎಟಿಯಲ್ಲಿ ಪ್ರಶ್ನಿಸಿ ಪರಿಹಾರ ಕಂಡುಕೊಳ್ಳಬಹುದು ಎಂದಿದೆ. ಆದ್ದರಿಂದ, ಕೆಪಿಎಸ್‌ಸಿ ಹೊರಡಿಸಿರುವ ಪರಿಷ್ಕೃತ ಆಯ್ಕೆ ಪಟ್ಟಿಗಳನ್ನು ರದ್ದುಗೊಳಿಸಬೇಕು. ಜೊತೆಗೆ, ಅರ್ಜಿದಾರರ ಅದೇ ಹುದ್ದೆಯಲ್ಲಿ ಮುಂದುವರೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕು’ ಎಂದು ಕೋರಿದ್ದರು.

ಕೆಪಿಎಸ್‌ಸಿ ಪರ ವಾದ ಮಂಡಿಸಿದ್ದ ವಕೀಲರು, ‘ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಹೈಕೋರ್ಟ್ ತೀರ್ಪಿನಂತೆ ಸಿದ್ಧಪಡಿಸಿರುವ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ಒಪ್ಪಿದೆ. ಸುಪ್ರೀಂಕೋರ್ಟ್ ಕೂಡ ಅನುಮೋದಿಸಿದೆ. ಹೀಗಾಗಿ ಯಾವುದೇ ಅಭ್ಯರ್ಥಿ ಕೆಎಟಿ ಮುಂದೆ ತಮ್ಮ ಕುಂದುಕೊರತೆ ಮಂಡಿಸಲು ಅವಕಾಶವಿಲ್ಲ. ಅರ್ಜಿದಾರರ ಅರ್ಜಿಗಳನ್ನು ವಜಾಗೊಳಿಸಬೇಕು’ ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT