ಆರು ವರ್ಷ ಪ್ರೀತಿ: ಪ್ರೇಯಸಿ ದೂರವಾಗಿದ್ದಕ್ಕೆ ಆತ್ಮಹತ್ಯೆ

ಬೆಂಗಳೂರು: ಉಲ್ಲಾಳ ಉಪನಗರದಲ್ಲಿ ರೋಹಿತ್ (24) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸ್ಥಳೀಯ ನಿವಾಸಿ ಲೋಹಿತ್, ಕೋರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಈ ಸಂಗತಿ ಮನೆಯವರಿಗೆ ಗೊತ್ತಾಗಿದೆ. ಅವರ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ಹೇಳಿದರು.
‘ರೋಹಿತ್, ಸ್ಥಳೀಯ ಯುವತಿಯೊಬ್ಬರನ್ನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿ, ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರಿಬ್ಬರು ಹಲವೆಡೆ ಸುತ್ತಾಡುತ್ತಿದ್ದರು. ಇವರ ಪ್ರೀತಿಯ ವಿಷಯ ಮನೆಯವರಿಗೂ ಗೊತ್ತಾಗಿತ್ತು’ ಎಂದು ತಿಳಿಸಿದರು.
‘ಇಬ್ಬರ ನಡುವೆ ಇತ್ತೀಚೆಗೆ ಗಲಾಟೆ ಆಗಿತ್ತು. ಪ್ರೀತಿ ಮುಂದುವರಿಸಲು ಸಾಧ್ಯವಿಲ್ಲವೆಂದು ಹೇಳಿದ್ದ ಯುವತಿ, ರೋಹಿತ್ ಅವರಿಂದ ದೂರವಾಗಲು ಮುಂದಾಗಿದ್ದರು. ರೋಹಿತ್ ಜೊತೆ ಮಾತನಾಡುವುದನ್ನೂ ನಿಲ್ಲಿಸಿದ್ದರು.’
‘ಪ್ರೀತಿ ಮುಂದುವರಿಸುವಂತೆ ದುಂಬಾಲು ಬಿದ್ದಿದ್ದ ರೋಹಿತ್, ಯುವತಿ ಕಾಲೇಜು ಬಳಿ ಹೋಗಿ ಮನವೋಲಿಸಲು ಯತ್ನಿಸಿದ್ದರು. ಅದಕ್ಕೆ ಯುವತಿ ಒಪ್ಪಿರಲಿಲ್ಲ. ಪ್ರೀತಿ ಮುಂದುವರಿಸಲು ಸಾಧ್ಯವಿಲ್ಲವೆಂದು ಪುನಃ ಹೇಳಿದ್ದರು. ಅದರಿಂದ ನೊಂದಿದ್ದರು ಎನ್ನಲಾದ ರೋಹಿತ್, ಮನೆಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ರೋಹಿತ್–ಯುವತಿ ನಡುವಿನ ಪ್ರೀತಿಯ ವಿಚಾರವಾಗಿ ಸ್ನೇಹಿತರು ಹೇಳಿಕೆ ನೀಡಿದ್ದಾರೆ. ಯುವತಿಯಿಂದಲೂ ಮಾಹಿತಿ ಪಡೆಯಲಾಗಿದೆ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.