ಸೋಮವಾರ, ಜುಲೈ 4, 2022
22 °C
ಮಹಿಳೆಯರು, ಮಕ್ಕಳು, ಗರ್ಭಿಣಿಯರು ಕಣ್ಣೀರು

ಬೆಂಗಳೂರು: ಕೊಳೆಗೇರಿ ನಿವಾಸಿಗಳು ಬೀದಿಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿದ್ರೆಯಿಂದ ಎಚ್ಚರಗೊಳ್ಳುವಷ್ಟರಲ್ಲಿ ಮನೆಗಳ ಮುಂದೆ ಪೊಲೀಸರ ದಂಡು ನೆರೆದಿತ್ತು. ಅವರ ನೆರವಿನಲ್ಲಿ ಮನೆಗಳಿಗೆ ನುಗ್ಗಿದ ಅಧಿಕಾರಿಗಳು ಸರಕು– ಸರಂಜಾಮು, ಪಾತ್ರೆ–ಪಗಡೆ ಸಮೇತ ನಿವಾಸಿಗಳನ್ನು ಹೊರದಬ್ಬಿದರು.‌ ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಬಾಗಿಲಿಗೆ ಬೀಗ ಬಿದ್ದಿತ್ತು. ಕೆಲವೇ ಕ್ಷಣಗಳಲ್ಲಿ ನಿವಾಸಿಗಳು ನಿರಾಶ್ರಿತರಾಗಿ ಬೀದಿಯಲ್ಲಿ ನಿಂತಿದ್ದರು.

ಇದೆಲ್ಲವೂ ನಡೆದಿದ್ದು ಉತ್ತರಹಳ್ಳಿ ಭುವನೇಶ್ವರಿನಗರದಲ್ಲಿ. ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಮನೆಗಳಲ್ಲಿ ವಾಸವಿದ್ದ ನಿವಾಸಿಗಳ ಪಾಲಿಗೆ ಶುಕ್ರವಾರ ಕರಾಳವಾಗಿ ಕಾಡಿತು.

400ಕ್ಕೂ ಹೆಚ್ಚು ಪೊಲೀಸರೊಂದಿಗೆ ಬಂದ ಅಧಿಕಾರಿಗಳು, ಮನೆಗಳ ಸರಕು ಹೊರಹಾಕಲು 100ಕ್ಕೂ ಹೆಚ್ಚು ಕಾರ್ಮಿಕರನ್ನೂ ಜೊತೆಯಲ್ಲಿ ಕರೆ ತಂದಿದ್ದರು. ಏಕ ಕಾಲದಲ್ಲಿ ಕಾರ್ಯಾಚರಣೆ ಆರಂಭಿಸಿ ಕೆಲವೇ ಹೊತ್ತಿನಲ್ಲಿ 300ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿಗೆ ತಳ್ಳಲಾಯಿತು.

ಕೂಲಿ ಅರಸಿ ಹೋಗುವ ಪುರುಷರು ಮತ್ತು ಮನೆಗೆಲಸಕ್ಕೆ ಹೋಗುವ ಮಹಿಳೆಯರು ಬೆಳಗಿನ ಜಾವವೇ ಮನೆಯಿಂದ ಹೊರಟು ಹೋಗಿದ್ದರು. ಕೆಲವು ಮನೆಗಳಲ್ಲಿ ಗರ್ಭಿಣಿಯರು ಮತ್ತು ಮಕ್ಕಳು ಮಾತ್ರ ಇದ್ದರು. ಮನೆಯಿಂದ ಹೊರ ಹಾಕದಂತೆ ಗೋಗರೆದರೂ ಕನಿಕರ ತೋರದೆ ಅಧಿಕಾರಿಗಳು ಕೇಳಿಸಿಕೊಳ್ಳಲಿಲ್ಲ. ಬಿಸಾಡಿದ್ದ ಸರಕುಗಳ ಮುಂದೆ ಕುಳಿತ ಮಕ್ಕಳು, ಗರ್ಭಿಯರು ಕಣ್ಣೀರಿಟ್ಟರು.

ನಿವಾಸಿಗಳ ಪರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ವಕೀಲ ಮಂಜುನಾಥಸ್ವಾಮಿ ಮತ್ತು ‌‌ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ನಿವಾಸಿಗಳಿಗೆ ನೋಟಿಸ್ ನೀಡದೆ, ಪರ್ಯಾಯ ವ್ಯವಸ್ಥೆಯನ್ನೂ ಮಾಡದೆ ಬೀದಿಗೆ ತಳ್ಳುವುದು ಸರಿಯಲ್ಲ. ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಎಎಪಿ ಮುಖಂಡ ಭಾಸ್ಕರ ರಾವ್ ಆಕ್ರೋಶ ವ್ಯಕ್ತಪಡಿಸಿದರು.

ವಿವಾದ ಏನು?
ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ಕಟ್ಟಿಕೊಡುವ ಪ್ರಕ್ರಿಯೆ 2011ರಿಂದ ಆರಂಭವಾಗಿದೆ. ಗುಡಿಸಲು, ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಿದ್ದ ಜನರನ್ನು ಬೇರೆಡೆ ಸ್ಥಳಾಂತರಿಸಿ ಅದೇ ಜಾಗದಲ್ಲಿ ನಾಲ್ಕು ಮತ್ತು ಐದು ಅಂತಸ್ತುಗಳ 47 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಒಟ್ಟು 880 ಮನೆಗಳಿವೆ.

‘ಇವುಗಳಲ್ಲಿ 549 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಉಳಿದ ಖಾಲಿ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮನೆಗಳನ್ನು ಕಟ್ಟುವುದಕ್ಕೂ ಮುಂಚಿನಿಂದ ಇಲ್ಲೇ ವಾಸ ಇರುವ ಕುಟುಂಬಗಳನ್ನು ಬಿಟ್ಟು ಹೊರಗಿನವರನ್ನು ಆಯ್ಕೆ ಮಾಡಲಾಗಿದೆ. ನಮ್ಮನ್ನು ಅಕ್ರಮ ವಲಸಿಗರೆಂದು ಹೊರ ದಬ್ಬಲಾಗುತ್ತಿದೆ’ ಎಂಬುದು ನಿವಾಸಿಗಳ ಆರೋಪ.

ಪ್ರತಿಭಟನೆ: ಮತ್ತೆ ಮನೆ ಸೇರಿದ ನಿವಾಸಿಗಳು
ದಿಡೀರ್ ಕಾರ್ಯಾಚರಣೆ ಖಂಡಿಸಿ ಎಎಪಿ ನೇತೃತ್ವದಲ್ಲಿ ನಿವಾಸಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಮತ್ತು ಸಂಸದ ಡಿ.ಕೆ. ಸುರೇಶ್ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದರು. ‘ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿ ಬಡವರನ್ನು ಬೀದಿಪಾಲು ಮಾಡಲು ಮುಂದಾಗಿದ್ದಾರೆ. ಬೇರೆಡೆ ವಾಸ ಇದ್ದವರನ್ನು ಕರೆಸಿ ₹2 ಲಕ್ಷದಿಂದ ₹3 ಲಕ್ಷದ ತನಕ ಲಂಚ ಪಡೆದು ಮನೆಗಳನ್ನು ಮಂಜೂರು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಅಥವಾ ನ್ಯಾಯಾಲಯದ ಆದೇಶ ಇಲ್ಲದೆ ಮನೆ ಖಾಲಿ ಮಾಡಿಸಲಾಗುತ್ತಿದೆ. ಬಡವರ ಮೇಲೆ ಬುಲ್ಡೋಜರ್ ನುಗ್ಗಿಸಲು ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ಹಾಕಿರುವ ಬೀಗ ಒಡೆದು ತಮ್ಮ ಮನೆಗಳಿಗೆ ವಾಪಸ್ ಹೋಗಿ. ಯಾರ ಬೆದರಿಕೆಗೂ ಹೆದರಬೇಡಿ’ ಎಂದು ನಿವಾಸಿಗಳಿಗೆ ಭಾಸ್ಕರ ರಾವ್ ಅಭಯ ನೀಡಿದರು. ಬಳಿಕ ನಿವಾಸಿಗಳು ಮನೆಗಳಿಗೆ ಮರಳಿದರು.

‘ಅಕ್ರಮವಾಗಿ ವಾಸವಿದ್ದವರ ತೆರವು’
‘ಮನೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದವರನ್ನು ಮಾತ್ರ ಖಾಲಿ ಮಾಡಿಸಲಾಗಿದೆ’ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಯೋಜನಾ ನಿರ್ದೇಶಕ ಎನ್‌.ಪಿ. ಬಾಲರಾಜ್ ತಿಳಿಸಿದರು.

‘ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಮೊದಲು ಈ ಜಾಗದಲ್ಲಿ ನಿವಾಸಿಗಳು ಗುಡಿಸಲು ಮತ್ತು ಶೆಡ್‌ಗಳಲ್ಲಿ ವಾಸವಿದ್ದರು. ಅವರ ಪಟ್ಟಿ ಸಿದ್ಧಪಡಿಸಿಕೊಂಡು ಅದೇ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಆ ಪಟ್ಟಿಯಲ್ಲಿದ್ದ 549 ಕುಟುಂಬಗಳಿಗೆ ಮನೆಗಳನ್ನು ಒದಗಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಪಕ್ಕದಲ್ಲೇ ಇರುವ ಆಶ್ರಯ ಕಾಲೊನಿಯಲ್ಲಿ 331 ಕುಟುಂಬಗಳು ನೆಲೆಸಿದ್ದು, ಇಲ್ಲಿರುವ ಉಳಿಕೆ ಮನೆಗಳನ್ನು ಅವರಿಗೆ ಹಂಚುವ ಉದ್ದೇಶ ಇತ್ತು. ಆದರೆ, ಆ ನಿವಾಸಿಗಳು ಈ ಕಟ್ಟಡಗಳಿಗೆ ಬರಲು ಒಪ್ಪಲಿಲ್ಲ. ಆದ್ದರಿಂದ ಮನೆ ಕೋರಿ ಅರ್ಜಿ ಸಲ್ಲಿಸಿದ್ದ ಇದೇ ವಾರ್ಡಿನ ಬೇರೆ ಬಡ ಕುಟುಂಬಗಳಿಗೆ 331 ಮನೆ ಹಂಚಿಕೆ ಮಾಡಲು ಮಂಡಳಿ ನಿರ್ಧರಿಸಿದೆ’ ಎಂದು ಹೇಳಿದರು.

‘ಮನೆ ನಿರ್ಮಿಸುವ ಮುನ್ನ 549 ಕುಟುಂಬಗಳಿದ್ದವು. ಆಗ ಮಕ್ಕಳಿದ್ದವರು ದೊಡ್ಡವರಾಗಿ ಪ್ರತ್ಯೇಕ ವಾಸ ಮಾಡುತ್ತಿದ್ದಾರೆ. ಅಂತವರು ಬಾಕಿ ಮನೆಗಳಲ್ಲಿ ಅನಧಿಕೃತ ಸೇರಿದ್ದಾರೆ. ಅವರನ್ನಷ್ಟೇ ಕಳುಹಿಸಲಾಗುತ್ತಿದೆ. ಬೀಗ ಒಡೆದು ಮತ್ತೆ ಒಳಹೋದರೆ ಕಾನೂನು ಕ್ರಮ ಎದುರಿಸುತ್ತಾರೆ’ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಾಚರಣೆ ವಿರುದ್ಧ ಕಾನೂನು ಸಮರ
‘ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸಿ ಬಡವರ ಮನೆಯ ಸರಕುಗಳನ್ನು ಅಧಿಕಾರಿಗಳು ಹಾನಿ ಮಾಡಿದ್ದಾರೆ. ಈ ಹಾನಿಗೆ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು’ ಎಂದು ನಿವಾಸಿಗಳ ಪರ ಹೋರಾಟ ನಡೆಸುತ್ತಿರುವ ವಕೀಲ ಮಂಜುನಾಥಸ್ವಾಮಿ ತಿಳಿಸಿದರು.

‘ನಾಲ್ಕು ವರ್ಷಗಳಿಂದ ಹಕ್ಕುಪತ್ರ ನೀಡದೆ ಸತಾಯಿಸುತ್ತಿರುವ ಕೊಳೆಗೇರಿ ಮಂಡಳಿಯ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ವಿಚಾರಣೆ ನಡೆಯುತ್ತಿರುವಾಗಲೇ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ’ ಎಂದು ದೂರಿದರು.

‘ಮನೆ ಖಾಲಿ ಮಾಡಿಸಿಕೊಡಿ’
‘ವಾಸ ಇರುವವರು ನಮ್ಮನ್ನು ಇಲ್ಲೇ ಉಳಿಸಿ’ ಎಂದು ಹೋರಾಟ ನಡೆಸುತ್ತಿದ್ದರೆ, ಆಯ್ಕೆ ಪಟ್ಟಿಯಲ್ಲಿ ಇರುವವರು ‘ಮನೆ ಖಾಲಿ ಮಾಡಿಸಿಕೊಡಿ’ ಎಂದು ಅಧಿಕಾರಿಗಳ ದುಂಬಾಲು ಬಿದ್ದಿದ್ದರು.

‘ಮಂಡಳಿಗೆ ಹಣ ಪಾವತಿಸಿ 4 ವರ್ಷಗಳಿಂದ ಕಾಯುತ್ತಿದ್ದೇವೆ. ಮನೆಸಂಖ್ಯೆಯನ್ನೂ ನೀಡಿದ್ದಾರೆ. ಇಲ್ಲಿ ನೋಡಿದರೆ ಬೇರೆಯವರು ವಾಸವಿದ್ದಾರೆ. ಹಣವೂ ಇಲ್ಲ, ಮನೆಯೂ ಇಲ್ಲದಂತಾಗಿದೆ. ನಮಗೆ ಕೂಡಲೇ ಮನೆ ಬಿಡಿಸಿಕೊಡಿ’ ಎಂದು ಅವರು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು