ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಮಾರುಕಟ್ಟೆ ಕಾಮಗಾರಿ ಗಡುವಿನೊಳಗೆ ಪೂರ್ಣಗೊಳಿಸಿ

ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿ ಪರಿಶೀಲಿಸಿದ ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ
Last Updated 11 ಜನವರಿ 2021, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್.ಮಾರುಕಟ್ಟೆ ಅಭಿವೃದ್ಧಿ ಸಲುವಾಗಿಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಗಡುವಿನೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಬೆಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆ.ಆರ್.ಮಾರುಕಟ್ಟೆ ಹಾಗೂ ಸುತ್ತಮುತ್ತಲೂ ಬೆಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಸೋಮವಾರ ಪರಿಶೀಲಿಸಿದರು.

ಕೆ.ಆರ್.ಮಾರುಕಟ್ಟೆ, ಮಾಂಸದ ಮಾರುಕಟ್ಟೆ, ಇಲ್ಲಿನ ಜಂಕ್ಷನ್ ಅಭಿವೃದ್ಧಿ, ಬಸ್ ಟರ್ಮಿನಲ್ (ಬಸ್ ನಿಲುಗಡೆ ಸ್ಥಳ) ಹಾಗೂ ಸಬ್ ವೇ (ಪಾದಚಾರಿ ಸುರಂಗಮಾರ್ಗ) ಕಾಮಗಾರಿಗಳನ್ನು ಸ್ಮಾರ್ಟ್ ಸಿಟಿ ಸಂಸ್ಥೆ ಕಾರ್ಯಗತಗೊಳಿಸುತ್ತಿದೆ.

‘ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾದರೆ ವಿವಿಧ ಇಲಖೆಗಳ ನಡುವೆ ಸಮನ್ವಯ ಹಾಗೂ ಸ್ಥಳೀಯರ ಸಹಕಾರ ಬಹಳ ಮುಖ್ಯ. ಸ್ಮಾರ್ಟ್ ಸಿಟಿ ಸಂಸ್ಥೆಯವರು ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಸಂಚಾರ ಪೊಲೀಸ್ ಇಲಾಖೆ ಹಗೂ ಸ್ಥಳೀಯ ಜನಪ್ರತಿನಿಧಿಗಳ ನೆರವು ಪಡೆದು ಕೆಲಸ ನಡೆಸಬೇಕು. ಹಂತ-ಹಂತವಾಗಿ ಕಾಮಗಾರಿಗಳ್ನು ಕೈಗೆತ್ತಿಕೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಯೋಜನೆ ರೂಪಿಸಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆ.ಆರ್. ಮಾರುಕಟ್ಟೆ ಕಟ್ಟಡವನ್ನು ಸುಮಾರು ₹34 ಕೋಟಿ ವೆಚ್ಚದಲ್ಲಿ ನವೀಕರಿಸಲು ಯೋಜನೆ ರೂಪಿಸಲಾಗಿದೆ. ಈಗಿರುವ ಕಟ್ಟಡವನ್ನು ಸುಸಜ್ಜಿತ ಕಟ್ಟಡವನ್ನಾಗಿ ಪರಿವರ್ತಿಸಿ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ಮಹಡಿಯ ಮೇಲೆ ಹತ್ತಲು ರ‍್ಯಾಂಪ್ ಹಾಗೂ ಲಿಫ್ಟ‌್ ಅಳವಡಿಕೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ಮಾಂಸದ ಮಾರುಕಟ್ಟೆಯ ಮೂರು ಕಟ್ಟಡಗಳನ್ನು ತೆರವುಗೊಳಿಸಿ, ₹ 14 ಕೋಟಿ ವೆಚ್ಚದಲ್ಲಿ ನೆಲ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮತ್ತು ಮಾಂಸ ಮಾರಲು ಸಕಲ ವ್ಯವಸ್ಥೆ ಇರುವ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತದೆ.
ಮಾರುಕಟ್ಟೆ ಜಂಕ್ಷನ್ ಅಭಿವೃದ್ಧಿಗೆ ₹ 17 ಕೋಟಿ ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಬಸ್ ಟರ್ಮಿನಲ್ ಹಾಗೂ ಪಾದಚಾರಿ ಸುರಂಗಮಾರ್ಗದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ್‌, ‘ಬಸ್ ಟರ್ಮಿನಲ್ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಒಂದು ಭಾಗದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಮತ್ತೊಂದು ಭಾಗದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಪಾದಚಾರಿ ಸುರಂಗದ ಆರು ಮಾರ್ಗಗಳ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಇಲ್ಲಿ ಇದೇ ಮೊದಲ ಬಾರಿ ಎಸ್ಕಲೇಟರ್ ಅಳವಡಿಸಲಾಗುತ್ತಿದೆ. ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಎಲ್ಇಡಿ ದೀಪಗಳ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಿದ್ದೇವೆ. ಈ ಪ್ರದೇಶದ ಸುಂದರೀಕರಣಕ್ಕೂ ಯೋಜನೆ ರೂಪಿಸಲಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಜಂಕ್ಷನ್ ಅಭಿವೃದ್ಧಿಗೊಳಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಸ್ಮಾರ್ಟ್‌ ಸಿಟಿ ರಸ್ತೆ ಕಾಮಗಾರಿ: ಜ.18ರ ಗಡುವು

ಬಿಬಿಎಂಪಿ ವ್ಯಾಪ್ತಿಯ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಐದು ರಸ್ತೆಗಳನ್ನು ಜ.18ರ ಒಳಗೆ ಪೂರ್ಣಗೊಳಿಸಬೇಕು ಎಂದು ಆಡಳಿತಾಧಿಕಾರಿ ಗಡುವು ವಿಧಿಸಿದರು.

ಈ ಯೋಜನೆಯಡಿ ಒಟ್ಟು 36 ರಸ್ತೆಗಳನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ. ಹೇಯ್ನ್ಸ್‌ ರಸ್ತೆ, ಮೆಕ್‌ಗ್ರಾತ್‌ ರಸ್ತೆ, ರೇಸ್ ಕೋರ್ಸ್ ರಸ್ತೆ ಸೇರಿ ಐದು ರಸ್ತೆಗಳ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ.

ಡಿಕೆನ್ಸನ್ ರಸ್ತೆ, ಹಲಸೂರು ರಸ್ತೆ, ರಾಜಭವನ ರಸ್ತೆ, ಕಾಮರಾಜ ರಸ್ತೆ, ಹೇಯ್ನ್ಸ್‌ ರಸ್ತೆ, ಮೆಕ್‌ಗ್ರಾತ್ ರಸ್ತೆಗಳನ್ನು ಆಡಳಿತಾಧಿಕಾರಿ ಸೋಮವಾರ ಪರಿಶೀಲಿಸಿದರು.

ಕೆಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗಕ್ಕೆ ಕರ್ಬ್ಸ್ ಅಳವಡಿಕೆ, ವಿದ್ಯುತ್ ದೀಪದ ಕಂಬಗಳ ಜೋಡಣೆ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಡಾಂಬರೀಕರಣ ಬಾಕಿ ಇದೆ. ಈಗಾಗಲೇ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸಲಾಗಿರುವ ರಸ್ತೆಗಳಲ್ಲಿ ಕೂಡಲೇ ಡಾಂಬರೀಕರಣ ಕಾರ್ಯವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಬೀದಿ ದೀಪಗಳ ಅಳವಡಿಕೆ ಕಾರ್ಯವನ್ನೂ ಇದೇ 18ರ ಒಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT