ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಪಾರ್ಕಿಂಗ್‌: ಷರತ್ತು ಉಲ್ಲಂಘಿಸಿದವರಿಗೇ ಗುತ್ತಿಗೆ?

Last Updated 7 ಆಗಸ್ಟ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವ ಬಿಬಿಎಂಪಿ ಟೆಂಡರ್‌ ಪ್ರಕ್ರಿಯೆಗಳನ್ನು ಅಂತಿಮಗೊಳಿಸಿದ್ದು, ಸಿಪಿಎಸ್‌ ಸಂಸ್ಥೆಗೆ ಈ ನೂತನ ವ್ಯವಸ್ಥೆ ನಿರ್ವಹಣೆಯನ್ನು ಗುತ್ತಿಗೆ ನೀಡಲು ಸಿದ್ಧತೆ ನಡೆಸಿದೆ. ಆದರೆ, ಈ ಕಂಪನಿ ಟೆಂಡರ್‌ ಷರತ್ತುಗಳನ್ನು ಪಾಲಿಸಿಲ್ಲ ಎನ್ನುತ್ತವೆಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳು.

ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಅಳವಡಿಸಲು ಬಿಬಿಎಂಪಿ 2017ರ ಮೇ 2ರಂದು ಅಲ್ಪಾವಧಿ ಟೆಂಡರ್‌ ಕರೆದಿತ್ತು. ಪೇ ಆ್ಯಂಡ್‌ ಡಿಸ್‌ಪ್ಲೇ ಯಂತ್ರವು (ರಸ್ತೆ ಬದಿಯ ಪಾರ್ಕಿಂಗ್‌ ತಾಣಗಳಲ್ಲಿ ಬಳಸುವಂತಹವು) ಕನಿಷ್ಠ 10 ವರ್ಷ ಭಾರತದಲ್ಲಿ ಬಳಕೆ ಆಗಿರಬೇಕು. ಅದು ಕನಿಷ್ಠ ಜಾಗವನ್ನು ಬಳಸುವಂತಿರಬೇಕು. ದೊಡ್ಡ ಗಾತ್ರದ ಯಂತ್ರವನ್ನು ತಿರಸ್ಕರಿಸಲಾಗುವುದು ಎಂದು ಷರತ್ತು ವಿಧಿಸಲಾಗಿತ್ತು.

ಯಂತ್ರವು ಮುದ್ರಿಸುವ ಟಿಕೆಟ್‌ನಲ್ಲಿ ಪಾವತಿ ವಿವರಗಳಿರಬೇಕು. ಪಾವತಿಗೆ ದಾಖಲೆಯಾಗಿ ಅದನ್ನು ಬಳಸುವಂತಿರಬೇಕು. ಟಿಕೆಟ್‌ನಲ್ಲಿ ಕಲೆಕ್ಷನ್‌ ಸಂಖ್ಯೆ, ದಿನಾಂಕ, ನಿಲುಗಡೆ ಅವಧಿ, ಪಡೆದ ಮೊತ್ತದ ವಿವರಗಳಿರಬೇಕು. ಯಂತ್ರವು ಕನಿಷ್ಠ 6,500 ಟಿಕೆಟ್‌ ಮುದ್ರಿಸುವ ಸಾಮರ್ಥ್ಯ ಹೊಂದಿರಬೇಕು ಎಂಬ ಷರತ್ತುಗಳೂ ಟೆಂಡರ್‌ನಲ್ಲಿದ್ದವು.

ಮೂರೇ ದಿನಗಳಲ್ಲಿ ಷರತ್ತು ಬದಲು: ಈ ಷರತ್ತುಗಳನ್ನು ಮೂರೇ ದಿನಗಳಲ್ಲಿ ಬದಲಾಯಿಸಲಾಯಿತು. 2017ರ ಮೇ 5ರಂದು ವಿಧಿಸಿದ ಹೊಸ ಷರತ್ತುಗಳಲ್ಲಿ, ಯಂತ್ರವು 10 ವರ್ಷ ಬಳಕೆಯಾಗಿರಬೇಕು ಎಂಬ ಅಂಶವನ್ನು ಕೈಬಿಡಲಾಗಿತ್ತು. ಪೇ ಆ್ಯಂಡ್‌ ಡಿಸ್‌ಪ್ಲೇ ಯಂತ್ರದ ಬದಲು ಪೇ ಬೈ ಸ್ಪೇಸ್‌ (ಒಳಾಂಗಣಗಳ ಪಾರ್ಕಿಂಗ್‌ ತಾಣಗಳಲ್ಲಿ ಬಳಸುವಂತಹವು) ಯಂತ್ರವನ್ನು ಬಳಸಬಹುದು. ಅದು ಭಾರತೀಯ ವಾತಾವರಣಕ್ಕೆ ಹೊಂದಿಕೆ ಆಗಬೇಕು ಎಂದು ಮಾರ್ಪಾಡು ಮಾಡಲಾಗಿತ್ತು.

ಯಂತ್ರವು ಪಾದಚಾರಿ ಮಾರ್ಗದಲ್ಲಿ ಆದಷ್ಟು ಕಡಿಮೆ ಸ್ಥಳವನ್ನು ಬಳಸುವಂತಿರಬೇಕು. ಅದನ್ನು 2 ಇಂಚು ಸುತ್ತಳತೆಯ ಕಂಬದಲ್ಲಿ ಅಳವಡಿಸುವಂತಿರಬೇಕು. ಅದು 9x12 ಇಂಚಿಗಿಂತ ಹೆಚ್ಚು ಸ್ಥಳವನ್ನು ಆಕ್ರಮಿಸಬಾರದು ಎಂಬ ಹೊಸ ಷರತ್ತನ್ನು ಬಿಬಿಎಂಪಿ ವಿಧಿಸಿತ್ತು.

ಟಿಕೆಟ್‌ಗಳಿಂದ ಕಸ ಉತ್ಪಾದನೆಯಾಗುತ್ತದೆ. ಹಾಗಾಗಿ ಯಂತ್ರವು ಟಿಕೆಟ್‌ ಮುದ್ರಿಸಬಾರದು. ಅದರ ಬದಲು ಎಸ್‌ಎಂಎಸ್ ಅನ್ನು ಕಳುಹಿಸುವ ವ್ಯವಸ್ಥೆ ರೂಪಿಸಬೇಕು. ಅದನ್ನೇ ರಸೀದಿ ಎಂದು ಪರಿಗಣಿಸುವಂತಿರಬೇಕು. ನಿರ್ದಿಷ್ಟ ಜಾಗದಲ್ಲಿ ಎಷ್ಟು ಹೊತ್ತು ವಾಹನ ನಿಲ್ಲಿಸಬಹುದು ಎಂಬುದನ್ನು ಯಂತ್ರ ಪ್ರದರ್ಶಿಸಬೇಕು ಎಂಬ ಹೊಸ ಷರತ್ತುಗಳನ್ನೂ ವಿಧಿಸಲಾಯಿತು.

‘ಷರತ್ತು ಉಲ್ಲಂಘನೆಯಾದ ಕಾರಣ ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಳಿಸಿ ಹೊಸತಾಗಿ ಟೆಂಡರ್‌ ಕರೆಯಬೇಕು. ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಇನ್ನಷ್ಟು ಜನಸ್ನೇಹಿಯಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಬ್ರಿಗೇಡ್ಸ್‌ ಶಾಪ್‌ ಆ್ಯಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸುಹೈಲ್‌ ಯುಸೂಫ್‌ ಒತ್ತಾಯಿಸಿದರು.

ಬ್ರಿಗೇಡ್ಸ್‌ ಶಾಪ್‌ ಆ್ಯಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಅಸೋಸಿಯೇಷನ್‌ ನಗರದಲ್ಲಿ ಮೊಟ್ಟಮೊದಲ ಬಾರಿ 2004ರಲ್ಲಿ ಬ್ರಿಗೇಡ್‌ ರಸ್ತೆಯಲ್ಲಿ ಸ್ವಯಂಚಾಲಿತ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಿತು. 14 ವರ್ಷಗಳ ಬಳಿಕವೂ ಈ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ನಗರಗಳ ಪಾರ್ಕಿಂಗ್‌ ವ್ಯವಸ್ಥೆಯ ಬಗ್ಗೆ ಪರಿಣತಿ ಹೊಂದಿರುವ ಸುಹೈಲ್‌ ಅವರೇ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

‘ಟೆಂಡರ್‌ನಲ್ಲಿ ಇಎಂಕ್ಯುಒಎಸ್ ಹಾಗೂ ಸಿಪಿಎಸ್‌ ಸಂಸ್ಥೆಗಳು ಭಾಗವಹಿಸಿದೆ. ಆದರೆ, ಅವು ಬಳಸುವ ಯಂತ್ರಗಳು ಯಾವುವು? ಯಂತ್ರಗಳನ್ನು ತಯಾರಿಸಿದ ಕಂಪನಿ ಯಾವುದು ಎಂಬ ಯಾವ ಮಾಹಿತಿಯನ್ನು ಈ ಕಂಪನಿಗಳು ಒದಗಿಸಿಲ್ಲ. ಆದರೂ ಅವು ತಾಂತ್ರಿಕ ಬಿಡ್‌ನಲ್ಲಿ ಹೇಗೆ ಉತ್ತೀರ್ಣ ಆದವು ಎಂದು ಗೊತ್ತಾಗುತ್ತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

‘2017ರ ಆಗಸ್ಟ್‌ 2ರಂದು ಸಿಎಂಎಸ್‌ ಕಂಪನಿಯು ಸೇಂಟ್‌ ಮಾರ್ಕ್‌ ರಸ್ತೆಯ ಬಳಿ ಹೊಸ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನೀಡಿತ್ತು. ಅಲ್ಲಿ ಪ್ರದರ್ಶಿಸಿದ್ದ ಯಂತ್ರಗಳು ಟೆಂಡರ್‌ ಷರತ್ತುಗಳಿಗೆ ಅನುಗುಣವಾಗಿರಲಿಲ್ಲ. 3 ಅಡಿ ಅಗಲ 8 ಅಡಿ ಎತ್ತರದ ಯಂತ್ರಗಳು ಅಲ್ಲಿದ್ದವು. ಇಷ್ಟುದೊಡ್ಡ ಯಂತ್ರಗಳನ್ನು ಫುಟ್‌ಪಾತ್‌ಗಳಲ್ಲಿ ಅಳವಡಿಸಿದರೆ ಪಾದಚಾರಿಗಳಿಗೆ ಸಮಸ್ಯೆ ಆಗುವುದಿಲ್ಲವೇ? ಪ್ರದರ್ಶನದಲ್ಲಿದ್ದ ಯಂತ್ರ ಟಿಕೆಟ್‌ ಮುದ್ರಿಸುತ್ತಿತ್ತು. ಇದು ಕೂಡಾ ಉಲ್ಲಂಘನೆಯಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಕಮರ್ಷಿಯಲ್‌ ಸ್ಟ್ರೀಟ್‌ನಲ್ಲೂ ಬಿಬಿಎಂಪಿ ಅನೇಕ ವರ್ಷಗಳ ಹಿಂದೆಯೇ ವಾಹನ ನಿಲುಗಡೆಗೆ ಸ್ವಯಂಚಾಲಿತ ಟಿಕೆಟ್‌ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಅಲ್ಲಿನ ಪಾರ್ಕಿಂಗ್‌ ನಿರ್ವಹಣೆಯ ಗುತ್ತಿಗೆ ಪಡೆದವರು ಕೈಯಲ್ಲಿ ಟಿಕೆಟ್‌ ಬರೆದು ಕೊಡುತ್ತಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ನಗರದ 85 ರಸ್ತೆಗಳಲ್ಲಿ ಜಾರಿಗೆ ತರಲು ಹೊರಟಿರುವ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯೂ ಇದೇ ಹಾದಿ ಹಿಡಿಯುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯ ನ್ಯೂನತೆಗಳು

* ಪೇ ಬೈ ಸ್ಪೇಸ್‌ ಯಂತ್ರಗಳು ರಸ್ತೆ ಬದಿಯ ವಾಹನ ನಿಲುಗಡೆ ತಾಣಗಳಿಗೆ ಪ್ರಶಸ್ತವಲ್ಲ

*ಪಾರ್ಕಿಂಗ್‌ ತಾಣದ ಯಾವ ಬೇನಲ್ಲಿ ವಾಹನ ನಿಲುಗಡೆಗೆ ಸ್ಥಳ ಲಭ್ಯ ಎಂಬ ಮಾಹಿತಿಯನ್ನು ಯಂತ್ರವು ಪ್ರದರ್ಶಿಸುವುದಿಲ್ಲ

* ರಸ್ತೆ ಬದಿಯ ಪಾರ್ಕಿಂಗ್‌ ತಾಣಗಳಿಗೆ ಟಿಕೆಟ್‌ ಮುದ್ರಿಸುವ ಯಂತ್ರಗಳೇ ಹೆಚ್ಚು ಸೂಕ್ತ. ಚಾಲಕರು ವಾಹನದಲ್ಲಿ ಟಿಕೆಟ್‌ ಇಟ್ಟು ಹೋಗಬಹುದು. ಅದನ್ನು ಅವಧಿ ಮೀರಿ ನಿಲ್ಲಿಸಲಾಗಿದೆಯೇ ಎಂಬುದನ್ನು ಸಾರ್ವಜನಿಕರೂ ಪರಿಶೀಲಿಸಬಹುದು

* ಸ್ವಯಂಚಾಲಿತವಾಗಿ ಟಿಕೆಟ್‌ ಪಡೆಯಲು ವಾಹನದ ಸಂಖ್ಯೆಯ ಜೊತೆ ಮೊಬೈಲ್‌ ಸಂಖ್ಯೆ ಕೂಡಾ ನೀಡಬೇಕು. ಇದು ಸೂಕ್ತವಲ್ಲ.

* ಪಾರ್ಕಿಂಗ್‌ ತಾಣಗಳ ವ್ಯಾಪ್ತಿಯನ್ನು ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿಲ್ಲ

‘ತಾಂತ್ರಿಕ ಪರಿಶೀಲನೆ ಬಳಿಕವೇ ಗುತ್ತಿಗೆ’

‘ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆಯ ಟೆಂಡರ್‌ನಲ್ಲಿ ಭಾಗವಹಿಸಿದ ಎರಡು ಕಂಪನಿಗಳು ನೀಡಿರುವ ಪ್ರಾತ್ಯಕ್ಷಿಕೆಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ವೀಕ್ಷಿಸಿದ್ದಾರೆ. ಎಲ್ಲ ರೀತಿಯ ಪರಿಶೀಲನೆಗಳ ಬಳಿಕ ಈ ಕಂಪನಿಗಳು ತಾಂತ್ರಿಕ ಬಿಡ್‌ನಲ್ಲಿ ತೇರ್ಗಡೆಯಾಗಿವೆ. ಸಾರ್ವಜನಿಕರ ಮುಂದೆ ಪ್ರದರ್ಶನ ನೀಡಿದ ಬಳಿಕ ಹಾಗೂ ಉನ್ನತ ಮಟ್ಟದ ಸಮಿತಿ ಅನುಮೋದನೆ ಬಳಿಕವೇ ಅರ್ಹ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಟೆಂಡರ್‌ನ ಬಹುತೇಕ ಪ್ರಕ್ರಿಯೆಗಳು ಮುಗಿದಿವೆ. ಇನ್ನು ಕಾರ್ಯಾದೇಶ ನೀಡುವುದಷ್ಟೇ ಬಾಕಿ’ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಂತ್ರವು ಎಷ್ಟು ಜಾಗ ಆಕ್ರಮಿಸುತ್ತದೆ ಎಂಬ ಒಂದು ವಿಚಾರದ ಆಧಾರದಲ್ಲಿ ತಾಂತ್ರಿಕ ಪರಿಣತಿಯನ್ನು ನಿರ್ಧರಿಸಲಾಗದು. ನಗರದಲ್ಲಿ ವಿನೂತನ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗುತ್ತಿದೆ. ಗುತ್ತಿಗೆದಾರರು ಪಾರ್ಕಿಂಗ್‌ ತಾಣಗಳಲ್ಲಿ ಸೆನ್ಸರ್‌ಗಳನ್ನು ಅಳವಡಿಸಿ, ಇದಕ್ಕಾಗಿ ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಿ ಜನಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದಾರೆ. ಅದನ್ನು ಸ್ವಾಗತಿಸಬೇಕು’ ಎಂದರು.

ಅಂಕಿ ಅಂಶ

85
ಮುಖ್ಯ ರಸ್ತೆಗಳ ಬಳಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಾಗಲಿದೆ

10 ಸಾವಿರ
ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ

3,500
ಕಾರುಗಳನ್ನು ನಿಲ್ಲಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT