ಬುಧವಾರ, ಡಿಸೆಂಬರ್ 8, 2021
28 °C

ಹಾವು ಕಡಿತ: ಕೋಮಾಕ್ಕೆ ಜಾರಿದ ಬಾಲಕ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಷಕಾರಿ ಕಡಂಬಳ ಹಾವು (ಕಾಮನ್ ಕ್ರೈಟ್) ಕಡಿತದಿಂದ ಕೋಮಾಕ್ಕೆ ಜಾರಿ, ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿದ್ದ 5 ವರ್ಷದ ಬಾಲಕನಿಗೆ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. 

ಮಂಡ್ಯ ಜಿಲ್ಲೆಯ ಚುಂಚನಹಳ್ಳಿಯ ಬಾಲಕ ನಿಶ್ಚಿತ್ ಮನೆಯ ಬಾಗಿಲ ಮೂಲೆಯಲ್ಲಿದ್ದ ಹಾವನ್ನು ಕತ್ತಲಲ್ಲಿ ತುಳಿದಿದ್ದ. ಆತನ ಕಾಲು ಬೆರಳುಗಳಿಗೆ ಹಾವು ಕಡಿದಿತ್ತು. ಪಾಲಕರು ಹಾವನ್ನು ಗುರುತಿಸಿ, ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿಯೇ ದೇಹದೊಳಗೆ ವಿಷ ವ್ಯಾಪಿಸಿಕೊಂಡಿತ್ತು. ಇದರಿಂದಾಗಿ ಬಾಲಕ ಕೋಮಾಕ್ಕೆ ಜಾರಿ, ಪಾರ್ಶ್ವವಾಯುವಿಗೆ ಒಳಗಾಗಿದ್ದ. ಸ್ಥಳೀಯ ವೈದ್ಯರು ಕೈಚೆಲ್ಲಿದ ಪರಿಣಾಮ ಕೃತಕ ಉಸಿರಾಟದ ನೆರವಿನಿಂದ ಆಂಬುಲೆನ್ಸ್‌ನಲ್ಲಿ 2 ಗಂಟೆಗಳ ಅವಧಿಯಲ್ಲಿ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಗೆ ಕರೆತಂದು, ದಾಖಲಿಸಲಾಯಿತು. 

ಬಾಲಕನಿಗೆ ಆ್ಯಂಟಿವೆನಮ್ (ವಿಷನಿರೋಧಕ) ಔಷಧಿಯನ್ನು ನೀಡಲಾಯಿತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಿ, ಉಸಿರಾಡಲು ಕೃತಕ ನಳಿಕೆ ಅಳವಡಿಸಲಾಯಿತು. ಬಾಲಕನಿಗೆ 7 ದಿನಗಳ ಬಳಿಕ ಪ್ರಜ್ಞೆ ಬಂತು. ಉಸಿರಾಟದ ಸಮಸ್ಯೆ ನಿವಾರಣೆಯಾಗಲು ಎರಡು ವಾರಗಳು ಬೇಕಾದವು. ಮೂರು ವಾರಗಳ ಬಳಿಕ ಬಾಲಕ ಚೇತರಿಸಿಕೊಂಡಿದ್ದಾನೆ.

ಬಾಲಕನ ತಂದೆ ಮಂಜುನಾಥ್‌ ಅವರು ಚಹಾ ಅಂಗಡಿ ನಡೆಸುತ್ತಿದ್ದು, ₹ 6 ಲಕ್ಷ ವೈದ್ಯಕೀಯ ಶುಲ್ಕದಲ್ಲಿ ₹ 2 ಲಕ್ಷ ಪಾವತಿಸಿದರು. ಉಳಿದ ಹಣವನ್ನು ಗುಂಪು ನಿಧಿ ವೇದಿಕೆಯಡಿ(ಕ್ಲೌಡ್ ಫಂಡಿಂಗ್) ಸಂಗ್ರಹಿಸಲಾಯಿತು ಎಂದು ಆಸ್ಪತ್ರೆ ತಿಳಿಸಿದೆ. 

‘ವೇಗದ ಹೃದಯ ಬಡಿತವು ಬಾಲಕನಿಗೆ ವಿಷವು ತ್ವರಿತವಾಗಿ ಹರಡಲು ಕಾರಣವಾಯಿತು. ಕಡಂಬಳ ಹಾವು ಕಡಿತಕ್ಕೆ ಒಳಗಾಗುವ ಮಕ್ಕಳು ಉಸಿರಾಟದ ಸಮಸ್ಯೆಯ ಜತೆಗೆ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಬಾಲಕ ನಿಶ್ಚಿತ್ ಪ್ರಕರಣ ಕೂಡ ಅತ್ಯಂತ ಸಂಕೀರ್ಣವಾಗಿತ್ತು. ಚಿಕಿತ್ಸೆ ಅಗತ್ಯ ಇರುವ ನಿಧಿಯನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಯಿತು’ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಚೇತನ್ ಗಿಣಿಗೇರಿ ತಿಳಿಸಿದರು.   

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.