ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ್‌ಕಮಾರ್‌ ಹೆಗಡೆ ರಕ್ತದಲ್ಲಿಯೇ ದ್ವೇಷ: ಸುಧೀರ್‌ ಕುಮಾರ್‌ ಮುರೊಳ್ಳಿ

ಜಾಗೃತ ಕರ್ನಾಟಕ ಸಂಘಟನೆಯಿಂದ ‘ಕರ್ನಾಟಕ ಪಣ–ನಾಡ ಅರಿವು’ ಕಾರ್ಯಕ್ರಮ
Published 12 ಮಾರ್ಚ್ 2024, 23:57 IST
Last Updated 12 ಮಾರ್ಚ್ 2024, 23:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಸದ ಅನಂತಕುಮಾರ ಹೆಗಡೆ ಮಾತ್ರವಲ್ಲ, ಆರ್‌ಎಸ್‌ಎಸ್‌ ವ್ಯಕ್ತಿಗಳ ರಕ್ತದಲ್ಲಿಯೇ ಬಿ.ಆರ್‌.ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧಿ ಬಗೆಗಿನ ದ್ವೇಷ ಅಂತರ್ಗತವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧೀರ್‌ ಕುಮಾರ್‌ ಮುರೊಳ್ಳಿ ಹೇಳಿದರು.

ನಗರದಲ್ಲಿ ಮಂಗಳವಾರ ಜಾಗೃತ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ‘ಕರ್ನಾಟಕ ಪಣ–ನಾಡ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರಂಭದಲ್ಲಿ ನಾವೆಲ್ಲರೂ ಆರ್‌ಎಸ್‌ಎಸ್‌ನ ಕಾಲಾಳುಗಳಾಗಿದ್ದೆವು. ಮೆದುಳಿನ ಭಾಗವಾಗಿ ಎಂ.ಜಿ ಹೆಗಡೆ, ಲಕ್ಷ್ಮೀಶ ಗಬ್ಬಲಡ್ಕ ಅವರು ಕೆಲಸ ಮಾಡಿದ್ದರು. ಆದರೆ, ಆರ್‌ಎಸ್‌ಎಸ್‌ ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ. ನಮ್ಮ ಧರ್ಮದ ವಕ್ತಾರರು, ಧರ್ಮ ರಕ್ಷಕರು ಅವರಲ್ಲ ಎಂಬುದು ತಿಳಿದು ಅಲ್ಲಿಂದ ಹೊರಬಂದೆವು’ ಎಂದರು.

‘ನಾವು ಭಾರತೀಯರು. ಪ್ರಪಂಚದ ಎಲ್ಲರನ್ನೂ ಸ್ವೀಕರಿಸಿದ್ದೇವೆ. ಇಲ್ಲಿನ ಶ್ರಮಿಕರು, ಮಹಿಳೆಯರು, ರೈತರು ನಮ್ಮ ಪಾಲಿನ ಭಾರತಾಂಬೆ ಆಗಿದ್ದಾರೆ. ಇವರ್‍ಯಾರೂ ಆರ್‌ಎಸ್‌ಎಸ್‌ನವರಿಗೆ ಬೇಕಿಲ್ಲ. ಕೇವಲ ಭಾರತಾಂಬೆಯ ಫೋಟೊ ತೋರಿಸುವುದು ಮಾತ್ರ ಆರ್‌ಎಸ್‌ಎಸ್‌ನ ದೇಶಭಕ್ತಿ’ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡ ನಿಕೇತ್‌ ರಾಜ್‌ ಮೌರ್ಯ ಮಾತನಾಡಿ, ‘ಆಧ್ಯಾತ್ಮಿಕ ಅರಿವು ಇದ್ದವರು ಮಾತ್ರ ಆರ್‌ಎಸ್‌ಎಸ್‌ನಿಂದ ಹೊರಬರಲು ಸಾಧ್ಯ’ ಎಂದು ಹೇಳಿದರು.

ಹೋರಾಟಗಾರ ಎಂ.ಜಿ.ಹೆಗಡೆ ಮಾತನಾಡಿ, ‘ಆರ್‌ಎಸ್‌ಎಸ್‌ ವೇದ ಮತ್ತು ಉಪನಿಷತ್ತನ್ನು ಹೇಳುವುದಿಲ್ಲ. ಏಕೆಂದರೆ ಅದರಲ್ಲಿ ಬರೆದಿರುವುದು ಆರ್‌ಎಸ್‌ಎಸ್‌ ಸಿದ್ದಾಂತಕ್ಕೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದರು.

ಹೋರಾಟಗಾರ ಲಕ್ಷ್ಮೀಶ ಗಬ್ಬಲಡ್ಕ ಮಾತನಾಡಿ, ‘ನಮ್ಮೊಳಗಿನ ಬೆಂಕಿ ಕಡಿಮೆಯಾಗಿ ತಂಪು ಬಂದ ಕಾರಣ ನಾವು ಆರ್‌ಎಸ್‌ಎಸ್‌ನಿಂದ ಹೊರಗೆ ಬಂದಿದ್ದೇವೆ. ಆರ್‌ಎಸ್‌ಎಸ್‌ನಲ್ಲಿ ಆಟ, ಹಾಡು, ಚಾರಣ, ಬೆಳದಿಂಗಳ ಊಟ, ಕಥೆ ಹೆಸರಿನಲ್ಲಿ ಒಟ್ಟು ಸೇರಿಸಿ, ಒಂದು ಸಿದ್ದಾಂತ ತುಂಬಿಸುವ ಕೆಲಸ ಶುರು ಆಗುತ್ತದೆ. ಅಲ್ಲಿ ಯೋಜಿತ ಕಾರ್ಯಪದ್ದತಿ ಇದೆ. ಪೊಲೀಸ್‌, ನ್ಯಾಯಾಂಗದವರೆಗೂ ಇದು ಹಬ್ಬಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ‘ಕರ್ನಾಟಕ ಪಣ‘ ಪ್ರತಿಜ್ಞೆ ಮಾಡಲಾಯಿತು.

ಎಲ್.ಎನ್‌. ಮುಕುಂದರಾಜ್‌, ಹನುಮೇಗೌಡ, ಜಾಗೃತ ಕರ್ನಾಟಕ ರಾಜಶೇಖರ್‌ ಅಕ್ಕಿ, ಎಚ್‌.ವಿ.ವಾಸು, ಹೇಮಾ ವೆಂಕಟ್‌, ರಮೇಶ್‌ ಬೆಲ್ಲಂಕೊಂಡ, ಬಿ.ಸಿ ಬಸವರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT